ತುಮಕೂರು:

      ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನುಮತಿ ಇಲ್ಲದೆ ಕಾರ್ಯಕ್ರಮ ಹಾಗೂ ಸಭೆ ಮಾಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಅವರು ತಿಳಿಸಿದರು.

      ಶಿರಾ ಮಿನಿ ವಿಧಾನಸೌಧದಲ್ಲಿಂದು ನಡೆದ ಎಫ್ಎಸ್ಟಿ ತಂಡಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಎಫ್ಎಸ್ಟಿ ತಂಡಗಳು ಮಾಡುವ ಮನೆ ಮನೆಯ ಹತ್ತಿರ ಹೋಗಿ ಪ್ರಚಾರ ಮಾಡುವುದನ್ನೂ ಕೂಡ ವಿಡಿಯೋ ಮಾಡಬಹುದು. ಸ್ತ್ರೀಶಕ್ತಿ ಸಂಘಗಳ ಸಭೆ ನಡೆಸಬಹುದು. ಆದರೆ ಸಭೆ ನಡೆಸುವ ಸ್ಥಳದಲ್ಲಿ ರಾಜಕೀಯ ವ್ಯಕ್ತಿಗಳಿದ್ದರೆ ಅಂತಹ ಸಭೆಗಳಿಗೆ ಅನುಮತಿಯನ್ನು ಪಡೆಯಬೇಕೆಂದು ಅವರು ತಿಳಿಸಿದರು.

      ಚುನಾವಣಾ ಸಂಬಂಧ ಹೆಚ್ಚು ಜನರಿದ್ದಾಗ ವಿಡಿಯೋ ಚಿತ್ರೀಕರಣ ಮಾಡಿ ಪೊಲೀಸ್ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಯಾವುದಾದರೂ ಅಹಿತಕರ ಘಟನೆ ನಡೆದ ತಕ್ಷಣವೇ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಾಗೂ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಬೇಕು. ಎಫ್ಎಸ್ಟಿ ತಂಡಗಳ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಸಲ್ಲಿಸಬೇಕು. ಮನೆಮನೆ ಪ್ರಚಾರಕ್ಕೆ 5 ಜನರಿಗೆ ಮಾತ್ರ ಅವಕಾಶವಿದ್ದು, ಹೆಚ್ಚು ಜನರಿದ್ದರೆ ಅವರನ್ನು ತೆರವುಗೊಳಿಸಬೇಕು ಎಂದು ಅವರು ತಿಳಿಸಿದರು.

      ಹಣ, ಸಾಮಗ್ರಿ, ಉಡುಗೊರೆಗಳನ್ನು ಹಂಚುವ ಬಗ್ಗೆ ದೂರು ನೀಡಿದರೆ ಆ ಬಗ್ಗೆ ವಿಚಾರಣೆ ನಡೆಸಬೇಕು. ಕೊರೋನಾ ಮಾರ್ಗಸೂಚಿ ಉಲ್ಲಂಘನೆ ಮಾಡುವುದು ಕಂಡು ಬಂದರೆ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.

     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಶಿರಾ ಚುನಾವಣಾಧಿಕಾರಿ ಡಾ: ಕೆ. ನಂದಿನಿದೇವಿ, ತಹಶೀಲ್ದಾರ್ ಮಮತ ಹಾಗೂ ಎಫ್ಎಸ್ಟಿ ತಂಡದ ಅಧಿಕಾರಿಗಳು ಭಾಗವಹಿಸಿದ್ದರು.

(Visited 9 times, 1 visits today)