ತುಮಕೂರು:

      ಶಿರಾ ವಿಧಾನಸಭೆ ಉಪಚುನಾವಣೆಯ ಪ್ರಚಾರಕ್ಕೆ ತೆರಳುವ ಮುನ್ನ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು, ನಗರದ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದ ನಂತರ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದು ಶಿರಾಕ್ಕೆ ಪ್ರಯಾಣ ಬೆಳೆಸಿದರು.

       ನಗರಕ್ಕೆ ಆಗಮಿಸಿದ ಬಿ.ವಿ.ಶ್ರೀನಿವಾಸ್ ಅವರನ್ನು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಈ ದೇಶ ಮತ್ತು ಈ ರಾಜ್ಯ ಉಳಿಯಬೇಕೆಂದರೆ ಕಾಂಗ್ರೆಸ್ ಪಕ್ಷ ಗೆಲ್ಲಬೇಕು, ಬಿಜೆಪಿಯವರು ದೊಡ್ಡ ದೊಡ್ಡ ಆಶ್ವಾನೆಗಳನ್ನು ನೀಡಿ ಅಧಿಕಾರಕ್ಕೆ ಬಂದರೂ ಯಾವುದೇ ಆಶ್ವಾಸನೆಯನ್ನೂ ಈಡೇರಿಸಲಿಲ್ಲ, ಈಗ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಕೇಳಲು ಮತ್ತೊಂದು ಸುಳ್ಳಿನ ಆಶ್ವಾನೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

      ಕೋವಿಡ್ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸದ ಕಾರಣ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ, ಕೋವಿಡ್ ನಿರ್ವಹಣೆಯಲ್ಲಿ ಸರಿಯಾಗಿ ನಿಭಾಯಿಸದ ಮಂತ್ರಿಗಳನ್ನು ಬದಲಾಯಿಸಿದ ಮಾತ್ರಕ್ಕೆ ಸೋಂಕಿತರ ಸಂಖ್ಯೆ ಕಡಿಮೆ ಆಗಿಲ್ಲ, ಒಟ್ಟಾರೆ ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

      ಇನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ 6 ವರ್ಷಗಳ ಅಧಿಕಾರವಧಿಯಲ್ಲಿ ಉದ್ಯೋಗ ಸೃಷ್ಠಿಸಲು ವಿಫಲವಾಗಿದೆ. ಪ್ರತೀವರ್ಷ 2 ಕೋಟಿ ಉದ್ಯೋಗ ಸೃಷ್ಠಿಮಾಡುತ್ತೇವೆ ಎಂದು ಹೇಳಿ ಎರಡನೇ ಅವಧಿಗೂ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದಿಂದ ಇಂದು ಕೋಟ್ಯಾಂತರ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇದು ಬಿಜೆಪಿಯ ಸಾಧನೆ ಎಂದು ಹೇಳಿದರು.

      ಬಡವರು, ದೀನದಲಿತರು ಏಳಿಗೆ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ, ಆದ್ದರಿಂದ ಮತ್ತೆ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್‍ನ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಬೇಕು ಎಂದು ಕರೆ ನೀಡಿದರು.

      ಪ್ರಸ್ತುತ ನಡೆಯುತ್ತಿರುವ ಶಿರಾ ಮತ್ತು ಆರ್.ಆರ್.ನಗರದ ಉಪಚುನಾವಣೆಯಲ್ಲಿ ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮತ್ತು ಆರ್.ಆರ್. ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ನಲಪಾಡ್, ಹುಲಿಕುಂಟೆ ಶಶಿ, ರಾಜೇಶ್ ದೊಡ್ಮನೆ, ಜಿಲ್ಲಾಧ್ಯಕ್ಷ ಅನಿಲ್‍ಕುಮಾರ್, ರಾಘವೇಂದ್ರ ಸ್ವಾಮಿ, ನಾಗರಾಜ್, ಶಿವಪ್ರಸಾದ್ ಮುಂತಾದವರು ಭಾಗವಹಿಸಿದ್ದರು.

(Visited 5 times, 1 visits today)