ತುಮಕೂರು:

      ಕೊರೋನಾ ಮುನ್ನೆಚ್ಚರಿಕೆ ನಡುವೆ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನವು ಇಂದು ಶಾಂತಿಯುತವಾಗಿ ಮುಕ್ತಾಯಗೊಂಡಿತು.

      ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಮತದಾರರು ಮಾಸ್ಕ್ ಧರಿಸಿ, 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಎಲ್ಲೆಡೆ ಕಂಡು ಬಂತು.

      ಪ್ರತಿ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಮತದಾನ ಮಾಡಲು ಆಗಮಿಸುವ ಮತದಾರರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸ್ಯಾನಿಟೈಸ್ ಮಾಡಿದ ನಂತರ ಮತ ಕೇಂದ್ರವನ್ನು ಪ್ರವೇಶಿಸಿದ ಮತದಾರರರಿಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಿಸಿಕೊಂಡು ಬಲಗೈಗೆ ಕೈಗವಸು ಧರಿಸಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.

      ಕ್ಷೇತ್ರದಲ್ಲಿ ಒಟ್ಟು 330 ಮತ ಕೇಂದ್ರಗಳಲ್ಲಿ ಚುನಾವಣಾ ಮತದಾನವು ಪೊಲೀಸ್ ಭದ್ರತೆಯಲ್ಲಿ ಶಾಂತಿಯುತವಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಿತು. ಕೊರೋನಾ ಮುಂಜಾಗ್ರತೆಯನ್ನು ವಹಿಸಿ ಮತಗಟ್ಟೆ ಅಧಿಕಾರಿ/ಸಿಬ್ಬಂದಿ ಚುನಾವಣಾ ಮತದಾನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಯುವ ಮತದಾರರು ಉತ್ಸಾಹಿಗಳಾಗಿ ಮತಕೇಂದ್ರಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.

      ಮತದಾನದ ಕಾರ್ಯ ಮುಕ್ತಾಯವಾದ ನಂತರ ತಾಲ್ಲೂಕು ಕೇಂದ್ರದಿಂದ ಡಿ-ಮಸ್ಟರಿಂಗ್ ಮಾಡಿ ಮತ ಎಣಿಕೆ ನಡೆಯುವ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಮತ ಯಂತ್ರಗಳನ್ನು ಕಳುಹಿಸಲಾಯಿತು. ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.

ಕೊರೋನಾ ಸೋಂಕಿತರಿಂದ ಮತದಾನ:-

      ಮತದಾನದ ಕೊನೆಯ ಅವಧಿಯ 5ರಿಂದ 6 ಗಂಟೆಯವರೆಗೂ ಕೊರೋನಾ ಸೋಂಕಿತರು/ಶಂಕಿತರ ಮತದಾನಕ್ಕೆ ಅವಕಾಶ ನೀಡಲಾಗಿತ್ತು, ಅದರಂತೆ 71ಮಂದಿ ಸೋಂಕಿತರು ತಮ್ಮ ಹಕ್ಕನ್ನು ಚಲಾಯಿಸಲು ಇಚ್ಚೆ ವ್ಯಕ್ತಪಡಿಸಿದ್ದರು. ಆರೋಗ್ಯ ಇಲಾಖೆಯು ಈ ಮತದಾರರಿಗೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಿತ್ತು. ಮತಗಟ್ಟೆ ಸಿಬ್ಬಂದಿಗಳು ಪಿಪಿ ಕಿಟ್ ಧರಿಸಿ ಸೋಂಕಿತರ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಚುನಾವಣಾ ಮತದಾನಕ್ಕೆ ಬಂದೋಬಸ್ತ್:-

      ಶಾಂತಿಯುತ ಮತದಾನಕ್ಕಾಗಿ ಮತ ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿತ್ತು. 2 ಡಿವೈಎಸ್‍ಪಿ, 5 ಮಂದಿ ಇನ್ಸ್‍ಪೆಕ್ಟರ್, 21 ಪಿಎಸ್‍ಐ, 19 ಎಎಸ್‍ಐ ಸೇರಿದಂತೆ 900ಕ್ಕೂ ಹೆಚ್ಚು ಸಿಬ್ಬಂದಿಗಳು ಭದ್ರತ ಕಾರ್ಯ ನಿರ್ವಹಿಸಿದರು. ವಿಧಾನಸಭಾ ಕ್ಷೇತ್ರದ ಕೆಲವು ಮತಗಟ್ಟೆಗಳಿಗೆ ಇತರ ರಾಜ್ಯದ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು, ಅಲ್ಲದೇ ಹೋಬಳಿವಾರು 5 ಇನ್ಸ್‍ಪೆಕ್ಟರ್‍ಗಳ ತಂಡ ರೌಂಡ್ಸ್‍ನಲ್ಲಿದ್ದವು.

ರೆಡ್ ಕಾರ್ಪೆಟ್ ಮಾದರಿ ಮತಗಟ್ಟೆ:-

     ಶಿರಾ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿದ್ದ ಮತಗಟ್ಟೆಯನ್ನು ಕೆಂಪು ಹಾಸಿನ ಮತಗಟ್ಟೆಯನ್ನಾಗಿ ನಿರ್ಮಿಸಲಾಗಿತ್ತು. ಮತ ಚಲಾಯಿಸಲು ಆಗಮಿಸುತ್ತಿದ್ದ ಮತದಾರರು ಖುಷಿಯಿಂದ ರೆಡ್ ಕಾರ್ಪೆಟ್ ಮೇಲೆ ಹಾದು ಹೋಗಿ ಮತ ಚಲಾಯಿಸಿದ್ದು ಕಂಡು ಬಂತು.

 

 

(Visited 22 times, 1 visits today)