ತುಮಕೂರು :

      ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಖ್ಯಾತ ಕಾರುಗಳ್ಳರ ಬಂಧನವಾಗಿದೆ.

      ಇತ್ತೀಚಿನ ದಿನಗಳಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್ಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಮಾಲುಗಳನ್ನ ಕಳ್ಳತನ ಮಾಡಲಾಗಿತ್ತು. ಸದರಿ ವಿಚಾರವಾಗಿ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸರಿಯಷ್ಟೇ. ಇದಕ್ಕಾಗಿ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡವನ್ನ ರಚಿಸಿದ್ದು, ಆ ತಂಡವು ಸದರಿ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿದೆ.

        ವಿಶೇಷ ತಂಡದ ಜಾಲದಲ್ಲಿ ಸಿಲುಕಿದ್ದ ಸದರಿ ಪ್ರಕರಣದ ಆರೋಪಿ ಲೊಕೇಶ್.ಬಿ.ಪಿ ಆಲಿಯಾಸ್ ಲೋಕಿ ಆಲಿಯಾಸ್ ಜಗ್ಗುದಾದ(41) ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದ. ಈತನು ಈ ಪ್ರಕರಣದ ಆರೋಪಿ ಎಂದು ಶಂಕಿಸಿ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಅನುಮಾನಗೊಂಡ ಆರೋಪಿಯು ತನಿಖಾ ವೇಳೆಯಲ್ಲಿ ತಾನು ಮಾಡಿದಂತಹ ಹಲವು ಪ್ರಕರಣಗಳನ್ನು ಒಪ್ಪಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿರುತ್ತಾರೆ. ಸದರಿ ಆರೋಪಿಯು ಅಮೃತೂರು ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳನ್ನು, ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಅದೇ ಜಿಲ್ಲೆಯ ರಾಜಾನುಕುಂಟೆಯಲ್ಲಿ 2 ಪ್ರಕರಣಗಳು, ಬೆಂಗಳೂರು ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಮಂಡ್ಯ ಜಿಲ್ಲೆಯ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಜಯನಗರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿರುತ್ತಾರೆ. ಈ ಆರೋಪಿಯು ಮನೆಯ ಕಳವು ಪ್ರಕರಣದಲ್ಲಿ 660 ಗ್ರಾಂ ತೂಕದ 52 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಡೈಮಂಡ್ ಆಭರಣಗಳು, 4 ಲ್ಯಾಪ್ಟಾಪ್ ಹಾಗೂ 4 ಮೊಬೈಲ್ಗಳನ್ನು ಕಳವು ಮಾಡಿದ್ದು, ಅವುಗಳನ್ನ ವಶಕ್ಕೆ ಪಡೆದಿರುತ್ತಾರೆ. ಈ ಆರೋಪಿಗಳ ಪತ್ತೆಯನ್ನು ಮಾಡುವಂತೆ ಆದೇಶಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ಕೋನ ವಂಶಕೃಷ್ಣ ರವರು ಹಾಗೂ ಹೆಚ್ಚುವರಿ ಅಧೀಕ್ಷಕರಾದ ಟಿ.ಜೆ.ಉದೇಶ್ ಹಾಗೂ ಡಿವೈಎಸ್ಪಿ ಜಗದೀಶ್, ಸಿಪಿಐ ನಿರಂಜನ್ ಹಾಗೂ ಪಿಎಸ್ಐ ರವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿರುತ್ತಾರೆ.

(Visited 11 times, 1 visits today)