ತುಮಕೂರು :

      ಜಿಲ್ಲೆಯಲ್ಲಿ ಕರೋನ ಮಹಾಮಾರಿಗೆ ಮೊದಲ ಬಲಿಯಾದ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಾದ್ಯಂತ ಹೆಚ್ಚಿನ ಭದ್ರತೆಯನ್ನ ಮಾಡಿದ್ದು, ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ವ್ಯಾಪಕವಾದ ಭದ್ರತೆ ಹಾಗೂ ಗಸ್ತನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿ ನಿರ್ವಹಿಸುತ್ತಿದ್ದು, ಹೆದ್ದಾರಿಗಳ ಭದ್ರತೆ ಮತ್ತು ವಿನಾಕಾರಣ ಜನತೆ ರಸ್ತೆಗಿಳಿಯುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಬ್ಯಾರಿಕೇಡ್‍ಗಳನ್ನ ಹಾಕಿ ಖುದ್ದು ಪಿಎಸ್‍ಐಗಳೇ ರಸ್ತೆಯಲ್ಲಿ ನಿಂತು ರಸ್ತೆಗಿಳಿದ ಸಾರ್ವಜನಿಕರ ತಪಾಸಣೆಗಿಳಿದಿರುವುದನ್ನ ಗಮನಿಸಿದರೆ, ಕೊರೊನಾ ಮಹಾಮಾರಿಯ ಭೀಬತ್ಸತೆಯನ್ನ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹುಮುಖ್ಯ ಎನ್ನುವ ನಿರ್ಧಾರಕ್ಕೆ ಜಿಲ್ಲಾ ಪೊಲೀಸರು ಬಂದಿರುವಂತಿದೆ.

      ರಾಷ್ಟ್ರೀಯ ಹೆದ್ದಾರಿಗಳು ಮತ್ತು ಹೊರಜಿಲ್ಲೆಯ ಗಡಿ ಹಾಗೂ ಅಂತರಾಜ್ಯ ಗಡಿಗಳನ್ನ ಗಡಿಯ ಮುಖೇನ ಅಂತರಾಜ್ಯ ಹಾಗೂ ಹೊರಜಿಲ್ಲೆಯ ಜನತೆ ಜಿಲ್ಲೆಯೊಳಗೆ ನುಸುಳದಂತೆ ಜಾಗೃತಿ ವಹಿಸುವುದು ಒಂದೆಡೆಯಾದರೆ ತುಮಕೂರು ನಗರದ ಹಾಗೂ ಜಿಲ್ಲೆಯ ಒಳಗಿನ ಜನ ಕಾನೂನನ್ನು ಉಲ್ಲಂಘಿಸಿ ವಿನಾಕಾರಣ ರಸ್ತೆಗಿಳಿದು ಸೋಂಕನ್ನ ಹರಡುವುದು ಮತ್ತು ತಗುಲಿಸಿಕೊಳ್ಳುವುದನ್ನ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವು ಜಿಲ್ಲಾಡಳಿತ ಮತ್ತು ನಗರಪಾಲಿಕೆ, ಆರೋಗ್ಯ ಇಲಾಖೆ ಹೆಚ್ಚಿನದಾಗಿ ಪೊಲೀಸ್ ಇಲಾಖೆ ಹಗಲಿರುಳೆನ್ನದೆ ಶ್ರಮಿಸುತ್ತಿದೆ.

      ಪೊಲೀಸ್ ಇಲಾಖೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗಳಿಗೂ ತಾನೂ ತನ್ನ ಕುಟುಂಬ ಮಡದಿ-ಮಕ್ಕಳೆನ್ನುವ ಮಮಕಾರವನ್ನ ತೊರೆದು ಸರ್ಕಾರದ ಆದೇಶವನ್ನ ಚಾಚೂ ತಪ್ಪದೇ ಪಾಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ತನ್ನ ಕಾಯಕದ ಬರದಲ್ಲಿ ತನಗೆ ಸೋಂಕು ತಗುಲುತ್ತದೆ ಎಂಬ ಪರಿವು ಹಲವರಿಗಿಲ್ಲ. ಕೇವಲ ಕೆಲಸ, ಇಲಾಖೆ ಎನ್ನುವ ಮಂದಿ ಸರ್ಕಾರಿ ಆದೇಶದ ಜೊತೆಗೆ ಭದ್ರತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಜಾಗೃತಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ.

      ತನ್ನ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಲ್ಲಿ ಕಿಂಚಿತ್ತು ಲೋಪವಾದರೂ ತಾನೂ ಮತ್ತು ತನ್ನನ್ನೇ ನಂಬಿರುವ ಕುಟುಂಬವನ್ನು ನಡು ನೀರಲ್ಲಿ ಕೈಬಿಟ್ಟಂತಾಗುತ್ತದೆ. ಇಂತಹ ಜಾಗೃತಿಯಲ್ಲಿ ಬದುಕಬೇಕಾದ ಅನಿವಾರ್ಯತೆಯಿರುವ ಸಂದರ್ಭದಲ್ಲಿ ಯಾವುದನ್ನೂ ಲೆಕ್ಕಿಸದೇ ನಡುರಸ್ತೆಯಲ್ಲಿ ನಿಂತು ಆಗಮಿಸಿರುವಂತಹ ಪ್ರಯಾಣಿಕ ಕೊರೊನಾ ಸೋಂಕಿತನೋ, ಸೋಂಕಿತನಲ್ಲವೋ ಎಂಬ ಪರಿವಿಲ್ಲದೇ ಅವನು ಬರುವ ವಾಹನವನ್ನು ಅಡ್ಡಗಟ್ಟಿ ವಿಚಾರಿಸುವ ರೀತಯನ್ನ ಗಮನಿಸಿದರೆ, ನಿಜಕ್ಕೂ ಮನಸ್ಸಿಗೆ ಖೇದ ಉಂಟಾಗುತ್ತಿದೆ. ಪೊಲೀಸ್ ಸಿಬ್ಬಂಧಿಗಳು ಬಳಸುತ್ತಿರುವ ಮಾಸ್ಕ್‍ಗಳು ಯಾವುದೇ ವೈಜ್ಞಾನಿಕ ರೀತಿಯಲ್ಲಿ ಕಂಡುಬರುತಿಲ್ಲ.

      ಸಿಕ್ಕ ಸಿಕ್ಕ ಮಾಸ್ಕ್ ಗಳನ್ನ ಬಳಸಿ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಯಾವುದೇ ಮಾಸ್ಕ್ ಗಳನ್ನಾಗಲೀ, ಸ್ಯಾನಿಟೈಸರ್ ಲಿಕ್ವಿಡ್‍ಗಳನ್ನಾಗಲೀ ಅಧಿಕೃತವಾಗಿ ನೀಡಿಲ್ಲ. ಆದರೂ, ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತ ರಾಜ್ಯ ಸರ್ಕಾರ ಗಮನಹರಿಸಬೇಕಾದ ಅನಿವಾರ್ಯತೆಯಿದೆ. ಇಲಾಖೆ ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಅತಿ ಅವಶ್ಯಕವಾದ ಅತ್ಯುನ್ನತ ತಂತ್ರಜ್ಞಾನದ ಪರಿಕರಗಳನ್ನ ನೀಡಿ, ಅವರುಗಳನ್ನ ರಕ್ಷಿಸಬೇಕಾದ ಜವಾಬ್ದಾರಿ ಸರ್ಕಾರದ ಹೊಣೆಗಾರಿಕೆಯಾಗುತ್ತದೆ ಹಾಗೂ ಇಲಾಖೆಯ ಮುಖ್ಯ ಜವಾಬ್ದಾರಿಯಾಗುತ್ತದೆ.

32 ವಾಹನಗಳ ಜಪ್ತಿ :

      ಇಲಾಖೆ ಸಂಬಳವನ್ನು ಹೊರತುಪಡಿಸಿ ಯಾವುದೇ ಭದ್ರತೆಯನ್ನ ಒದಗಿಸದಿದ್ದರೂ ಸಹಾ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಇಂದು 32 ವಾಹನಗಳನ್ನ ಜಪ್ತಿಗೊಳಿಸಿದ್ದಾರೆ. ನಗರದಲ್ಲಿರುವ ಸಿಸಿ ಕ್ಯಾಮೆರಾ ಮತ್ತು ತಪಾಸಣೆ ವೇಳೆ ಸಿಕ್ಕಂತಹ ವಾಹನಗಳನ್ನ ಜಪ್ತಿಗೊಳಿಸಿರುತ್ತಾರೆ.

(Visited 36 times, 1 visits today)