ತುಮಕೂರು:


ತುಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ತಂಬಾಕು ಪರಿಸರಕ್ಕೆ ಮಾರಕ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ ಉದ್ದೇಶದಿಂದ ನಗರದ ಜಿಲ್ಲಾಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ಜಾಥಾಗೆ ಕಾನೂನು ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿಗಳೂ ಆದ ನ್ಯಾಯಮೂರ್ತಿ ರಾಘವೇಂದ್ರ ಶೆಟ್ಟಿಗಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ನ್ಯಾಯಾಧೀಶರು, ಲಕ್ಷಾಂತರ ಮಂದಿ ತಂಬಾಕು ಸೇವನೆಯಿಂದ ಕ್ಯಾನ್ಸರ್, ಶ್ವಾಸಕೋಶಗಳ ಸಮಸ್ಯೆಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಪ್ರತಿಯೊಬ್ಬರೂ ತಂಬಾಕು ಸೇವಿಸುವುದನ್ನು ನಿಲ್ಲಿಸಬೇಕು. ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಜಾಥಾ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಮೂರ್ತಿ ಮಾತನಾಡಿ, ಕೆಟ್ಟ ಚಟಗಳಿಗೆ ಯಾರು ಹೇಳದೇ ಇದ್ದರೂ ದಿನನಿತ್ಯ ದಾಸರಾಗುತ್ತಿದ್ದೇವೆ. ತಂಬಾಕು ರಹಿತ ದಿನವನ್ನು ಆಚರಣೆ ಮಾಡಿ ಈ ದಿನ ಎಲ್ಲರಿಗೂ ಅರಿವು ಮೂಡಿಸುವ ಕಾರ್ಯ ಒಳ್ಳೆಯ ಕೆಲಸವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆ ಕುರಿತು ಮಕ್ಕಳು, ಯುವಕರಲ್ಲಿ ಅರಿವು ಮೂಡಿಸುವುದು ಉತ್ತಮ ಕಾರ್ಯವಾಗಿದೆ. ಪ್ರತಿಯೊಬ್ಬರೂ ಸಹ ತಂಬಾಕಿನಿಂದ ದೂರವಿರುವ ಮೂಲಕ ಮಾರಕ ರೋಗಗಳನ್ನು ತಡೆಗಟ್ಟಬೇಕು ಎಂದರು. ಜಿಲ್ಲಾ ಸರ್ವಲೆನ್ಸ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ಮೋಹನ್‍ದಾಸ್ ಮಾತನಾಡಿ, ಪ್ರತಿ ವರ್ಷ ಮೇ 31ಕ್ಕೆ ಒಂದೊಂದು ಘೋಷವಾಕ್ಯದೊಂದಿಗೆ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ. ತಂಬಾಕು ಪರಿಸರಕ್ಕೆ ಮಾರಕ ಎಂಬ ಧ್ಯೇಯವಾಕ್ಯದಡಿ ಈ ಬಾರಿ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ತಂಬಾಕು ಸೇವನೆಯಿಂದ ದೇಹದ ಮೇಲೆ ಯಾವ ರೀತಿ ದುಷ್ಪರಿಣಾಮ ಆಗುತ್ತದೆ. ಯಾವ ರೀತಿಯ ಮಾರಕ ರೋಗಗಳಿಗೆ ತುತ್ತಾಗುತ್ತೇವೆ ಎಂಬುದನ್ನು ಈ ಜಾಥಾ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ವರ್ಷ ತಂಬಾಕು ಪರಿಸರಕ್ಕೆ ಮಾರಕ ಎಂಬ ಘೋಷವಾಕ್ಯ ಬಹಳ ಪ್ರಮುಖವಾಗಿದೆ. ತಂಬಾಕು ಬೆಳೆಯುವುದರಿಂದ ನೆಲ ಜಲ, ನೀರು ಗಾಳಿ, ಪರಿಸರಕ್ಕೆ ಹಾನಿಯಾಗುತ್ತಿದೆ. ತಂಬಾಕು ಬೆಳೆದ ನಂತರ ಅದರ ಎಲೆಗಳನ್ನು ಕಾರ್ಖಾನೆಗಳಿಗೆ ಸಾಗಿಸುವುದರಿಂದ ಹಿಡಿದು ಕಾರ್ಖಾನೆಯಲ್ಲಿ ತಯಾರಾಗುವ ತಂಬಾಕು ಉತ್ಪನ್ನದಿಂದಾಗಿ ಜಲ, ವಾಯು ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಇದರಿಂದ ಸಂಪೂರ್ಣ ಪರಿಸರ ಮಾಲಿನ್ಯವಾಗುತ್ತಿದೆ ಎಂದರು.
ತಂಬಾಕು ಸೇವನೆ ಮಾಡಿದ ಸಂದರ್ಭದಲ್ಲಿ ವಾಯು ಮಾಲಿನ್ಯ, ಪರಿಸರಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಂಬಾಕು ತ್ಯಜಿಸುವಂತಹ ಕಾರ್ಯ ಮಾಡಬೇಕು. ಈ ಮೂಲಕ ಪರಿಸರ ಉಳಿಸಿ ಬೆಳೆಸಬೇಕು ಎಂದು ಅವರು ಹೇಳಿದರು. ಹದಿಹರೆಯದವರು ದುಶ್ಚಟಗಳಿಗೆ ಬಲಿಯಾಗುವುದು ಸರ್ವೆ ಸಾಮಾನ್ಯವಾಗಿದೆ. ಆದ್ದರಿಂದ ಪೆÇೀಷಕರು ಮಕ್ಕಳಿಗೆ ತಂಬಾಕು ಸಿಗದಂತೆ ನೋಡಿಕೊಳ್ಳುವ ಜತೆಗೆ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆಯೂ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಸ್ಪತ್ರೆ ಆವರಣದಿಂದ ಹೊರಟ ಜಾಥಾವು ಟೌನ್‍ಹಾಲ್ ಮುಖೇನ ಅಶೋಕ ರಸ್ತೆಯಲ್ಲಿ ಸಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ತಲುಪಿತು.
ಜಾಥಾದಲ್ಲಿ ಡಿಹೆಚ್‍ಓ ಡಾ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸೆ ಡಾ. ವೀರಭದ್ರಯ್ಯ, ಡಾ. ಕೇಶವರಾಜ್, ಐಎಂಎ ಅಧ್ಯಕ್ಷ ಡಾ. ಸಂಜಯ್, ಕಾರ್ಯದರ್ಶಿ ಸನತ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 7 times, 1 visits today)