ತುಮಕೂರು :

      ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತುಮಕೂರು ತಹಶೀಲ್ದಾರ್ ಮೋಹನ್ ಕುಮಾರ್ ರವರ ಜೊತೆ ಅಸಂಬದ್ಧವಾಗಿ ಮಾತನಾಡಿದ ಆಡಿಯೋ ವೈರಲ್ ಆಗಿದೆ.

      ಗ್ರಾಮಾಂತರ ಶಾಸಕ ಗೌರಿಶಂಕರ್ ತನ್ನ ನಾಲಿಗೆಯ ಮೇಲೆ ಹಿಡಿತವಿಲ್ಲದೆ ತಾಲ್ಲೂಕು ದಂಡಾಧಿಕಾರಿಯೊಂದಿಗೆ ಅಸಭ್ಯವಾಗಿ ಮಾತನಾಡಿದ್ದು ಶಾಸಕ ಸ್ಥಾನಕ್ಕೆ ಚ್ಯುತಿ ಬರುವಂತದ್ದಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಓರ್ವ ಶಾಸಕರಾಗಿ ತಾಲ್ಲೂಕು ದಂಡಾಧಿಕಾರಿ ಮೋಹನ್ ರವರೊಟ್ಟಿಗೆ ಹೇಗೆ ಮಾತನಾಡಬೇಕೆಂಬ ಪರಿವಿಲ್ಲದೆ ಏಕ ವಚನಗಳನ್ನು ಬಳಸಿ ಮಾತನಾಡಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವಂತಹ ಚರ್ಚೆಗಳಾಗುತ್ತಿವೆ.

      ತಹಶೀಲ್ದಾರ್ ರವರೋರ್ವರನ್ನು ನೀವು ದನ ಕಾಯುತ್ತಿದ್ದೀರಾ ಎನ್ನುವ ಪದದೊಂದಿಗೆ ಆರಂಭ ಮಾಡಿ ಮುಂದೆ ಬಳಸಿದ ಪದಪುಂಜಗಳು ಶಾಸಕ ಸ್ಥಾನಕ್ಕೆ ಶೋಭೆ ತರುವಂತದ್ದಾಗಿರಲಿಲ್ಲ. ಶಾಸಕರಾದ ತಕ್ಷಣ ತನ್ನ ಸರ್ವಾಧಿಕಾರಿ ಧೋರಣೆಯಿಂದ ತಹಶೀಲ್ದಾರರೊಬ್ಬರನ್ನು ಆ ರೀತಿ ಮಾತನಾಡಲು ಆ ಕ್ಷೇತ್ರದ ಜನ ಆಯ್ಕೆ ಮಾಡಿ ಕಳುಹಿಸಿದ್ದರೇ..? ಶಾಸಕರಿಗೆ ತಹಶೀಲ್ದಾರ್ ರವರ ಆಡಳಿತದ ಕಾರ್ಯವ್ಯಾಪ್ತಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಾರ್ಯವ್ಯಾಪ್ತಿ, ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯವ್ಯಾಪ್ತಿ, ಜಿಲ್ಲಾಧಿಕಾರಿಗಳ ಕಾರ್ಯವ್ಯಾಪ್ತಿ ಯಾವುವೂ, ಯಾರು ಯಾರು ಯಾವ್ಯಾವ ಕರ್ತವ್ಯಗಳನ್ನ ಮಾಡುತ್ತಾರೆ ಎಂಬ ಪರಿವಿರದೆ ತಹಶೀಲ್ದಾರರಿಗೆ ಸತ್ತ ಕೋವಿಡ್ ಸೋಂಕಿತ ವ್ಯಕ್ತಿಗೆ ಅದರ ವರದಿಯನ್ನು ನೆಗೆಟೀವ್ ಹೇಗೆ ಕೊಟ್ಟಿರಿ ಎಂದು ತಹಶೀಲ್ದಾರರಿಗೆ ಪ್ರಶ್ನಿಸುತ್ತಿರುವುದನ್ನ ಗಮನಿಸಿದರೆ, ಶಾಸಕರಿಗೆ ಯಾರ್ಯಾರ ಕಾರ್ಯವ್ಯಾಪ್ತಿ ಎಷ್ಟಿರುತ್ತದೆ ಎಂಬುದರ ಪರಿವಿಲ್ಲದಂತೆ ಕಾಣುತ್ತದೆ.

       ಕೇವಲ ಶಾಸಕರ ಅವಧಿ 5 ವರ್ಷಗಳು ಮಾತ್ರ ಇದ್ದು, ಸರ್ಕಾರಿ ನೌಕರರ ಕಾರ್ಯಾವಧಿ 60 ವರ್ಷಗಳಿರುತ್ತದೆ. ಒಬ್ಬ ಸರ್ಕಾರಿ ಅಧಿಕಾರಿಯ ಕಾರ್ಯವ್ಯಾಪ್ತಿಯಲ್ಲಿ ಅದೆಷ್ಟೋ ಶಾಸಕರು ತಮ್ಮ ಅವಧಿ ಮುಗಿಸಿ ಹೋಗುತ್ತಾರೆ. ಆದರೆ ತನ್ನ ಅನನುಭವದ ಕೊರತೆಯಿಂದ ಸರ್ಕಾರಿ ಅಧಿಕಾರಿಗಳನ್ನ ಮತ್ತು ನೌಕರರನ್ನು ವಾಚಾಮಗೋಚರವಾಗಿ ನಿಂದಿಸುವುದು ಆ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಶಾಸಕರು ತಹಶೀಲ್ದಾರ್ ರವರಿಗೆ ಈ ರೀತಿ ಮಾತನಾಡಬಾರದಿತ್ತು ಎಂದು ಇಡೀ ರಾಜ್ಯಾದ್ಯಂತ ನಿಂದನೆಗೆ ಗುರಿಯಾಗಿರುವ ಗ್ರಾಮಾಂತರ ಶಾಸಕರ ಬಾಯಿಯಲ್ಲಿನ ಪದಪುಂಜಗಳು ಆ ಕ್ಷೇತ್ರದಲ್ಲಿ ಆಯ್ಕೆ ಮಾಡಿದ ಮತದಾರರನ್ನ ಇರಿಸು-ಮುರಿಸಿಗೊಳಪಡಿಸಿದೆ.

(Visited 2,405 times, 1 visits today)