ತುಮಕೂರು:

      ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಬದಲಾವಣೆ ಆಗಿದೆ. ಸ್ವಯಂ ಉಸಿರಾಡುವಷ್ಟು ಶಕ್ತರಾಗಿದ್ದು, ಭಕ್ತರ ಪ್ರಾರ್ಥನೆ ಭಗವಂತನಿಗೆ ಮುಟ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಸಂಸದ ಎಸ್.ಪಿ.ಮುದ್ದ ಹನುಮೇಗೌಡ ತಿಳಿಸಿದ್ದಾರೆ.

      ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶ್ರೀಮಠಕ್ಕೆ ಸ್ವಾಮೀಜಿ ಅವರನ್ನು ಸ್ಥಳಾಂತರಿಸಿದ ನಂತರ ಅವರ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿದರೆ, ಇದಕ್ಕೂ ನಿಜಕ್ಕೂ ವೈದ್ಯ ಲೋಕದ ವಿಸ್ಮಯಕ್ಕೆ ಕಾರಣವಾಗಿದೆ.ಅವರ ದೇಹದಲ್ಲಿ ಚಲನಾಶಕ್ತಿ ಕಾಣುತ್ತಿದೆ.ಕೃತಕ ಉಸಿರಾಟ ತೆಗೆದ ನಂತರವೂ ಸ್ವಯಂ ಉಸಿರಾಡುವಷ್ಟು ಶಕ್ತಿ ಪಡೆದುಕೊಂಡಿದ್ದು,ಇತರೆ ಎಲ್ಲಾ ಪ್ಯಾರಾಮೀಟರ್ಸ್‍ನಲ್ಲಿಯೂ ಸ್ವಾಮೀಜಿಗಳ ಆರೋಗ್ಯ,ನಿನ್ನೆಗಿಂತ ಇಂದು ಸುಧಾರಣೆಯ ಹಂತದಲ್ಲಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ತಿಳಿಸಿದ್ದು,ಮಠದ ಭಕ್ತನಾಗಿ ನನಗೂ, ನನ್ನಂತಹ ಲಕ್ಷಾಂತರ ಜನರಿಗೆ ಇದು ಒಳ್ಳೆಯ ಸುದ್ದಿ ಎಂದರು.

      ಸ್ವಾಮೀಜಿಗಳ ಈ ಆರೋಗ್ಯ ಸುಧಾರಣೆಯ ಹಿಂದೆ ಅವರು ಲಕ್ಷಾಂತರ ಮಕ್ಕಳಿಗೆ ನೀಡಿದ ಅನ್ನ,ಅಕ್ಷರ,ಅಸರೆ ದಾಸೋಹ ಗಳ ಪಣ್ಯವಿದೆ.ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಾ ಬಂದು ವಯೋ ಸಹಜ ಕಾಯಿಲೆಗೆ ತುತ್ತಾಗಿರುವ ಇವರು ಗುಣಮುಖರಾಗಲಿದೆ ಎಂದು ಶ್ರೀಮಠದ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಜನ ಪ್ರಾರ್ಥಿಸುತ್ತಿದ್ದಾರೆ. ಆ ಪ್ರಾರ್ಥನೆ ದೇವರಿಗೆ ಮುಟ್ಟಿದೆ ಎಂಬುದು ನಮ್ಮ ಅನಿಸಿಕೆ. ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶ್ನೆ ನೀಡಬೇಕೆಂಬುದು ನಮ್ಮ ರಾಜ್ಯ ಎಲ್ಲಾ ಸಂಸದರ ಒತ್ತಾಯವಾಗಿದೆ.ಆ ಪ್ರಶಸ್ತಿ ನೀಡುವುದರಿಂದ ಸ್ವಾಮೀಜಿಗಳಿಗಿಂತ, ಪ್ರಶಸ್ತಿಗೆ ಹೆಚ್ಚಿನ ಗೌರವ ಬರಲಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ನುಡಿದರು.

     ಈ ವೇಳೆ ಕಲ್ಲಹಳ್ಳಿ ದೇವರಾಜು, ಕೌತುಮಾರನಹಳ್ಳಿ ಯೋಗೀಶ್, ವಿಜಯಕುಮಾರ್, ಮಹಾಲಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 31 times, 1 visits today)