ತುಮಕೂರು


ವಾಣಿಜ್ಯಶಾಸ್ತ್ರದ ವಿದ್ಯಾರ್ಥಿಗಳು ಭಾರತೀಯ ಸಂಸ್ಕøತಿಯೊಂದಿಗೆ ಇತಿಹಾಸವನ್ನು ಅರಿತುಕೊಳ್ಳಬೇಕು ಎಂದು ತುಮಕೂರು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್ ರಾಜು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಕರ ಕಲ್ಯಾಣ ವೇದಿಕೆಯ ಸಹಯೋಗದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಹಿತಾಸಕ್ತಿಯ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯಕ್ರಮಗಳನ್ನು ಜೋಡಿಸಿ ಬೋಧಿಸುವುದು ಅಧ್ಯಾಪಕರ ಕರ್ತವ್ಯ. ಅಧ್ಯಾಪಕರು, ಅತಿಥಿ ಉಪನ್ಯಾಸಕರು ಅಧ್ಯಾಪನ ವೃತ್ತಿಯನ್ನು ತಪಸ್ಸಿನಿಂದ ಸ್ವೀಕರಿಸಿ ಹೆಚ್ಚಿನ ಕಲಿಕೆಗೆ ಮುಂದಾಗಬೇಕು ಎಂದು ತಿಳಿಸಿದರು.
ವಿವಿಯ ವಾಣಿಜ್ಯಶಾಸ್ತ್ರದ ಡೀನ್ ಪ್ರೊ. ಬಿ. ಶೇಖರ್ ಮಾತನಾಡಿ, ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ತುಮಕೂರು ವಿಶ್ವವಿದ್ಯಾನಿಲಯ ಈ ಎನ್‍ಇಪಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದೆ. ಪ್ರತಿಯೊಬ್ಬ ನಾಗರೀಕನಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಶಿಕ್ಷಣ ಎಂಬುದು ಒಂದು ಅಸ್ತ್ರ. ಆ ಅಸ್ತ್ರದಿಂದ ಸಮಾಜದಲ್ಲಿನ ಸಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಎದುರಿಸಬಹುದು. ವಾಣಿಜ್ಯ ಶಿಕ್ಷಣವನ್ನು ಬಲಿಷ್ಠಗೊಳಿಸಲು ನಾವೆಲ್ಲರೂ ಒಂದಾಗಿ ದುಡಿಯಬೇಕು ಎಂದರು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರದ ಸಂಯೋಜಕ ಪ್ರೊ. ಪಿ. ಪರಮಶಿವಯ್ಯ ಮಾತನಾಡಿ, ಎನ್‍ಇಪಿಯ ನೂತನ ಪಠ್ಯಕ್ರಮ ಮತ್ತು ಬಹುಆಯ್ಕೆ ವ್ಯವಸ್ಥೆ ವಿದ್ಯಾರ್ಥಿಗಳನ್ನು ಅಂರತಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಜ್ಜುಗೊಳಿಸುತ್ತದೆ. ರಾಜ್ಯದಲ್ಲಿ ಮೊದಲ ಬಾರಿಗೆ ಎನ್‍ಇಪಿಯನ್ನು ಜಾರಿಗೊಳಿಸಿದ ಹೆಗ್ಗಳಿಕೆ ತುಮಕೂರು ವಿವಿಗೆ ಸಲ್ಲುತ್ತದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಕರ ಕಲ್ಯಾಣ ವೇದಿಕೆಯ ಅಧ್ಯಕ್ಷ ನರಸಿಂಹಮೂರ್ತಿ ಟಿ. ಎನ್. ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮಿಷ್ಟದ ಅಧ್ಯಯನ ವಿಷಯಗಳನ್ನು ಆಯ್ಕೆ ಮಾಡಲು ಎನ್‍ಇಪಿ ಮುಕ್ತ ಅವಕಾಶವನ್ನು ಕಲ್ಪಿಸುತ್ತದೆ ಎಂದರು.
ಕಾರ್ಯಗಾರದಲ್ಲಿ ಸ್ನಾತಕ ವಾಣಿಜ್ಯಶಾಸ್ತ್ರದ ಸಂಯೋಜಕ ಪ್ರೊ.ಜಿ.ಸುದರ್ಶನ್ ರೆಡ್ಡಿ, ಡಾ.ಬಿ.ಕೆ.ಸುರೇಶ್, ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಕರ ಕಲ್ಯಾಣ ವೇದಿಕೆಯ ಕಾರ್ಯದರ್ಶಿ ಡಾ.ದಿನೇಶ್ ಕುಮಾರ್ ಸಿ ಹಾಗೂ ವಾಣಿಜ್ಯಶಾಸ್ತ್ರದ ಬೋಧಕ ಸಿಬ್ಬಂದಿ ಭಾಗವಹಿಸಿದ್ದರು.

(Visited 1 times, 1 visits today)