ತುಮಕೂರು


ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಶೋಧನೆಗಳಿಗಾಗಿ ವಾರ್ಷಿಕವಾಗಿ 3ಕೋಟಿ ರೂ.ಗಳನ್ನು ಅನುದಾನವನ್ನು ಸಾಹೇ ವಿಶ್ವವಿದ್ಯಾನಿಲಯದಿಂದ ಮೀಸಲಿಟ್ಟಿದ್ದು, ಅದರ ಸದ್ಬಳಕೆ ಮಾಡಿಕೊಳ್ಳುವಂತೆ ಪ್ರಾಧ್ಯಾಪಕರಿಗೆ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಡಾ. ಪರಮೇಶ್ವರ ಜಿ ಸಲಹೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿವಿಧ (ಮಾಹಿತಿ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ತರಬೇತಿ ಮತ್ತು ನೇಮಕಾತಿ, ಎಂಸಿಎ) ವಿಭಾಗಗಳ ಕಂಪ್ಯೂಟರ್ ಲ್ಯಾಬ್‍ಗಳು ಹಾಗೂ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪಿಎಲ್‍ಸಿ ಲ್ಯಾನ್‍ನ್ನು ಉದ್ಘಾಟಿಸಿ ನಂತರ ಪ್ರಾಧ್ಯಾಪಕರೊಂದಿಗೆ ಮಾತನಾಡಿದ ಅವರು ಈ ವಿಷಯವನ್ನು ತಿಳಿಸಿದರು.
ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆÀಗೆ ಪ್ರಾಧ್ಯಾಪಕರು ಹೆಚ್ಚಿನ ಮಹತ್ವವನ್ನು ನೀಡಬೇಕು. ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಸಂಶೋಧನೆಗಳನ್ನು ನಡೆಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿವಿಧ ವಿಭಾಗಗಳ ಕಂಪ್ಯೂಟರ್ ಲ್ಯಾಬ್‍ಗಳನ್ನು ಮೇಲ್ದರ್ಜೆಗೆ ಉನ್ನತೀಕರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗುತ್ತಿದೆ, ತಂತ್ರಜ್ಞಾನ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿದ್ದು, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯಗಳ ಅವಶ್ಯಕತೆಯಿದೆ ಎಂದರು. ಪ್ರಯೋಗಾಲಯಗಳಲ್ಲಿ ನಡೆಯುವ ಪ್ರಾತ್ಯಕ್ಷಿಕೆಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವೆಡೆ, ಗಮನ ಹರಿಸುವಂತೆ ಪ್ರಾಧ್ಯಾಪಕರಿಗೆ ಕುಲಾಧಿಪತಿಗಳು ಸಲಹೆ ನೀಡಿದರು.
ಕಾಲೇಜಿನ ಶೈಕ್ಷಣಿಕ ಸುಧಾರಣೆಗೆ ಸಂಬಂಧಿಸಿದಂತೆ, ಎಂಜಿನಿಯರಿಂಗ್ ಕಾಲೇಜಿನ ಬೋಧಕೇತರ ಮತ್ತು ಬೋಧಕ ವರ್ಗದವರೊಂದಿಗೆ ಪ್ರತ್ಯೇಕ ಸಮಾಲೋಚನಾ ಸಭೆಗಳನ್ನು ನಡೆಸಿದರು. ಶೈಕ್ಷಣಿಕ ಸುಧಾರಣೆಗೆ ಸಂಬಂಧಿಸಿದಂತೆ ಪ್ರಾಧ್ಯಾಪಕರ ಸಲಹೆ ಪಡೆದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ, ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಝೆಡ್ ಕುರಿಯನ್, ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಸಲಹೆಗಾರರಾದ ವಿವೇಕ್ ವೀರಯ್ಯ, ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಕೆ ಕರುಣಾಕರ, ಕಂಪ್ಯೂಟ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಸಿದ್ಧಪ್ಪ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಎಲ್. ಸಂಜೀವ್ ಕುಮಾರ್, ತರಬೇತಿ ಮತ್ತು ಪ್ಲೇಸ್‍ಮೆಂಟ್ ಅಧಿಕಾರಿ ಡಾ.ಅಶೋಕ್ ಮೆಹ್ತಾ, ಎಂಸಿಎ ವಿಭಾಗದ ಮುಖ್ಯಸ್ಥರಾದ ಡಾ. ಡಿ.ರಮೇಶ್ ಮತ್ತು ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 2 times, 1 visits today)