ತುಮಕೂರು:

      ಭಾರತೀಯ ಜನತಾ ಪಕ್ಷ ರೈತ ಮೋರ್ಚಾ ಘಟಕವು ರೈತರಿಂದ ಖರೀದಿ ಮಾಡಿದ ತರಕಾರಿ ಮತ್ತು ಹಣ್ಣುಗಳನ್ನು ಶನಿವಾರ ನಗರದ ಶೆಟ್ಟಿಹಳ್ಳಿ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಸುತ್ತಮುತ್ತಲ ಬಡಾವಣೆಗಳ ನಾಗರೀಕರಿಗೆ ಮನೆ ಮನೆಗೆ ತೆರಳಿ ಉಚಿತವಾಗಿ ವಿತರಣೆ ಮಾಡಲಾಯಿತು.

      ನಗರದ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ತರಿಕಾರಿ ಮತ್ತು ಹಣ್ಣು ವಿತರಣಾ ಕಾರ್ಯಕ್ರಮಕ್ಕೆ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕರಾದ ಡಾ.ಪರಮೇಶ್ ಚಾಲನೆ ನೀಡಿದರು.

      ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿ, ಕೊರೋನ ವೈರಸ್ ಹರಡುವ ಭೀತಿಯಿಂದ ಲಾಕ್‍ಡೌನ್ ಘೋಷಣೆಯಾಗಿದ್ದು, ಇದರಿಂದ ಅನೇಕ ರೈತರು ತಾವು ಬೆಳೆದಿರುವ ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಲು ಕೆಲವು ಕಡೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ನೇರವಾಗಿ ರೈತರಿಂದ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

      ಬಿಜೆಪಿ ರೈತ ಮೋರ್ಚಾ ವತಿಯಿಂದ ಕಳೆದ 10 ದಿನಗಳಿಂದ ಸಹಾಯವಾಣಿ ಮೂಲಕ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿರುವ ರೈತರ ಕೃಷಿ ಚಟುವಟಿಕೆ, ಉತ್ಪಾದನಾ ವಸ್ತುಗಳ ಮಾರಾಟದ ಸಮಸ್ಯೆ, ಪರಿಕರಗಳ ಸಮಸ್ಯೆಗೆ ಜಿಲ್ಲಾ ರೈತ ಮೋರ್ಚಾ ಸ್ಪಂಧಿಸುವ ಕೆಲಸ ಮಾಡುತ್ತಿದೆ. ಅದೇ ರೀತಿ ಇಂದು ಅನೇಕರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಜನರಿಗೆ ಅವಶ್ಯಕತೆಗಳನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

      ಬಿಜೆಪಿ ರೈತ ಮೋರ್ಚಾ ಕೂಡಾ ಕೆಲವು ಕಡೆಗಳಿಂದ ಟಮೋಟೋ, ಈರುಳ್ಳಿ ಇನ್ನಿತರೆ ತರಕಾರಿಗಳನ್ನು ದಾನಿಗಳ ಸಹಾಯದಿಂದ ರೈತರಿಂದ ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಕೆಲಸ ಮಾಡುತ್ತಿದೆ. ತುರುವೇಕೆರೆಯಲ್ಲಿ ಶಾಸಕರಾದ ಮಸಾಲೆ ಜಯರಾಂ, ತುಮಕೂರು ಗ್ರಾಮಾಂತರದಲ್ಲಿ ಮಾಜಿ ಶಾಸಕರಾದ ಬಿ.ಸುರೇಶ್‍ಗೌಡ ಮತ್ತು ನಗರದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಅವರೂ ಸಹ ದೊಡ್ಡ ಪ್ರಮಾಣದಲ್ಲಿ ಸಹಾಯ ಹಸ್ತ ಚಾಚಿದ್ದಾರೆ ಎಂದು ತಿಳಿಸಿದರು.

      ಇದು ಮಾನವನ ಧರ್ಮ, ಮನುಷ್ಯನ ಧರ್ಮ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸ್ಪಂಧಿಸುವ ಕೆಲಸಕ್ಕೆ ಎಲ್ಲರೂ ದೊಡ್ಡ ಪ್ರಮಾಣದಲ್ಲಿ ಮತ್ತೊಬ್ಬರಿಗೆ ಪ್ರೇರಣೆಯಾಗುವ ರೀತಿಯಲ್ಲಿ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಅನ್ನ ಕೊಡುವ ಅನ್ನದಾತನ ಪರವಾಗಿ ನಿಲ್ಲುವಂತಹ, ದೃತಿಗೆಟ್ಟ ರೈತನಿಗೆ ವಿಶ್ವಾಸವನ್ನು ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ರೈತ ತಾನು ಉತ್ಪಾದಿಸಿದ ತನ್ನ ಫಸಲನ್ನು ಮಾರಾಟ ಮಾಡಲು ಅನುಕೂಲವಾಗದೆ ರಸ್ತೆಗೆ ಚೆಲ್ಲುವಂತಹ ಪರಿಸ್ಥಿತಿಯಲ್ಲಿದ್ದಾನೆ ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿರುವ ದಾನಿಗಳು ಹೃದಯ ಶ್ರೀಮಂತಿಕೆ ಮೆರೆದು ಆ ರೈತನ ಉತ್ಪಾದನಾ ವೆಚ್ಚವನ್ನಾದರೂ ನೀಡಿ ಜನರಿಗೆ ವಿತರಣೆ ಮಾಡುವಂತಹ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

      ರೈತರು ಯಾವುದೇ ಕಾರಣಕ್ಕೂ ದೃತಿಗೆಡಬೇಡಿ ರಾಜ್ಯ ಸರ್ಕಾರ ನಿಮ್ಮ ಜೊತೆಯಲ್ಲಿದೆ. ಈಗಾಗಲೇ ತೋಟಗಾರಿಕಾ ಇಲಾಖೆ ಆ್ಯಪ್ ಬಿಡುಗಡೆ ಮಾಡಿದ್ದು, ನೇರವಾಗಿ ರೈತರೇ ಆ್ಯಪ್ ಮೂಲಕ ಧರವನ್ನು ನಿಗಧಿ ಮಾಡಿದರೆ ತೋಟಗಾರಿಕಾ ಇಲಾಖೆಯೇ ನಿಮ್ಮಲ್ಲಿಗೆ ವಾಹನವನ್ನು ಕಳುಹಿಸಿಕೊಡುತ್ತದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಈ ರೀತಿಯ ವ್ಯವಸ್ಥೆ ನಾಳೆಯಿಂದ ಆರಂಭಗೊಳ್ಳಲಿದೆ ಎಂದು ಹೇಳಿದರು.

      ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಈ ಸಂಕಷ್ಟವನ್ನು ನಾವು ಎದುರಿಸಬೇಕಾಗಿದೆ. ಈ ಮಹಾಮಾರಿ ಕೊರೋನವನ್ನು ಓಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನೇಕ ದಿಟ್ಟ ಹೆಜ್ಜೆಯ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಿಯಮಗಳನ್ನು ನಾವೆಲ್ಲಾ ಪಾಲಿಸುವ ಮೂಲಕ ಕೊರೋನ ಮುಕ್ತ ಭಾರತವನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

      ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ತರಕಾರಿ ಮಹೇಶ್ ಮಾತನಾಡಿ, ಶಿರಾ ರೈತರಿಂದ ಈರುಳ್ಳಿ, ಪಾವಗಡ ರೈತರಿಂದ ಟೊಮೋಟೋ ಮತ್ತು ತುಮಕೂರಿನ ವಿವಿಧ ಕಡೆ ರೈತರಿಂದ ಪಪ್ಪಾಯಿ, ಮತ್ತು ತರಕಾರಿ ರೈತರಿಂದ ಖರೀದಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಸ್ನೇಕ್ ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತರಕಾರಿ ಮಹೇಶ್, ನಾಗರಾಜು, ಮುಖಂಡರಾದ ಸಂದೀಪ್, ಜಗದೀಶ್, ವಿಕಾಸ್, ಗುರುಪ್ರಸಾದ್, ಕುಮಾರ್, ರವೀಶ್ ಮುಂತಾದವರು ಭಾಗವಹಿಸಿದ್ದರು.

(Visited 9 times, 1 visits today)