ತುಮಕೂರು


ಗುಬ್ಬಿ ತಾಲ್ಲೂಕು ನಿಟ್ಟೂರು ಬೆಸ್ಕಾಂ ಉಪವಿಭಾಗದಲ್ಲಿ ಸಹಾಯಕ ಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅನಿಲ್ ಕುಮಾರ್ ರೈತರಿಗೆ ಮತ್ತು ಸ್ಥಳೀಯ ಗುತ್ತಿಗೆದಾರರಿಗೆ ವಿನಾಃ ಕಾರಣ ತೊಂದರೆ ನೀಡುತ್ತಿದ್ದು, ಕೂಡಲೇ ಇವರನ್ನು ವರ್ಗಾವಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಗುಬ್ಬಿ ತಾಲ್ಲೂಕು ಅಧ್ಯಕ್ಷ ನಂಜೇಗೌಡ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರ ಸಂಪರ್ಕ ಯೋಜನೆಯಡಿ ರೈತರಿಗೆ 25ಕೆವಿಎ ಟಿಸಿ ನೀಡಿಲ್ಲ, ಅಕ್ರಮ-ಸಕ್ರಮ ಯೋಜನೆಯಡಿ ರೈತರಿಗೆ ಮೂಲಭೂತ ಸೌಕರ್ಯ ಒದಗಿಸಲು 25ಕೆವಿಎ ಟಿಸಿ ಅಳವಡಿಸುವ ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಅಡಿಕೆ ತಟ್ಟೆ ತಯಾರಿಕ ಯಂತ್ರ, ಆಡಿಕೆ ಸುಲಿಯುವ ಯಂತ್ರ, ಸಣ್ಣ ಗುಡಿ ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ಸಮಯದಲ್ಲಿ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ, ತಮ್ಮ ಸೇಚ್ಛಾರದಿಂದ ವಿದ್ಯುತ್ ಸಂಪರ್ಕಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಂಡಳಿಯು ಕಾಮಗಾರಿಗಳಾದ ಲಿಂಕ್ ಲೈನ್, ಹಳೆಯ ವೈರು ಬದಲಾವಣೆ ಮಾಡುವುದು, ಇತ್ಯಾದಿ ಟೆಂಡರ್ ಗುತ್ತಿಗೆ ಕೆಲಸಗಳನ್ನು, ಕಾಮಗಾರಿಗಳನ್ನು ಪೂರ್ಣಗೊಳಿಸದೇ ಬಿಲ್‍ಗಳನ್ನು ಪಾಸ್ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಮನೆಯ ವಿದ್ಯುತ್ ಸಂಪರ್ಕ ಪಡೆಯಲು (ಗೃಹ ಬಳಕೆ) ಒಂದು ತಿಂಗಳಾದರೂ ಸರ್ವಿಸ್ ನೀಡಲು ಗುತ್ತಿಗೆದಾರರಿಗೆ ಅನುಮತಿ ನೀಡುತ್ತಿಲ್ಲ. ಗುಬ್ಬಿ ತಾಲ್ಲೂಕಿನಲ್ಲಿ ಜೆ.ಡಿ, ಎಂ. ಎ.ಇ.ಇ. ಆಗಿ 15-16 ವರ್ಷಗಳ ಕಾಲ ಒಂದೇ ಸ್ಥಳದಲ್ಲಿಯೇ ಬೇರೂರಿದ್ದಾರೆ.
ಇವರ ವಿರುದ್ಧ ಲೋಕಾಯುಕ್ತ ಕಛೇರಿಯಲ್ಲಿ ಈಗಾಗಲೇ ಮೂರ್ನಾಲ್ಕು ಕೇಸುಗಳು ದಾಖಲಾಗಿದ್ದರೂ ಸಹ ಇವರು ಯಾವುದಕ್ಕೂ ಕಿಮ್ಮತ್ತು ಕೊಡದೇ ತಮ್ಮದೇ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ದೂರಿದರು.
ಇದೆಲ್ಲದರ ವಿಚಾರ ವಾಗಿ ಸುಮಾರು ವರ್ಷಗಳಿಂದ ನಿಟ್ಟೂರು ಮತ್ತು ಗುಬ್ಬಿ ಬೆವಿಕಂ ಕಛೇರಿ ಮುಂದೆ ಪ್ರತಿಭಟನೆ ಮಾಡಿದ್ದರೂ ಸಹ ಇವರ ಮೇಲೆ ಮೇಲಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ರೈತರು, ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಘಟನಾ ಜಿಲ್ಲಾ ಹೋರಾಟ ಸಮಿತಿ ಸದಸ್ಯ ರುದ್ರೇಶ್, ಗುಬ್ಬಿ ತಾಲ್ಲೂಕು ವಿದ್ಯುತ್ ಗುತ್ತಿಗೆದಾರ ಶಶಿಕುಮಾರ್ ಹಾಜರಿದ್ದರು.

(Visited 1 times, 1 visits today)