ತುಮಕೂರು:

     ಅಗತ್ಯ ವಸ್ತುಗಳಿಲ್ಲದೆ ಸಮಸ್ಯೆಯಲ್ಲಿ ಸಿಲುಕಿದ್ದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಬಳಿ ಪೆಟ್ಟಿಗೆ ಅಂಗಡಿಯಲ್ಲಿಯೇ ವಾಸವಿದ್ದು, ಚಮ್ಮಾರಿಕೆ ಕಾಯಕ ಮಾಡುತ್ತಿರುವ ವಿಕಲಚೇತನ ಮಂಜುನಾಥ ಅವರಿಗೆ ಇಂದು ತಾಲೂಕು ಆಡಳಿತದ ವತಿಯಿಂದ ದಿನನಿತ್ಯದ ದಿನಸಿ ಸಾಮಗ್ರಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಯಿತು ಎಂದು ಕಾರ್ಮಿಕ ಅಧಿಕಾರಿ ಸುಭಾಷ್ ಎಮ್ ಆಲದಕಟ್ಟಿ ತಿಳಿಸಿದ್ದಾರೆ.

     ಕೋವಿಡ್ 19ಗೆ ಸಂಬಂಧಿಸಿದಂತೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸುಮಾರು 50 ವರ್ಷದ ಮಂಜುನಾಥ್ ಅವರು ಅಗತ್ಯ ವಸ್ತುಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆಂದು ಕಾರ್ಮಿಕ ಇಲಾಖೆಗೆ ಟ್ವಿಟರ್ ಮೂಲಕ ಬಂದ ದೂರಿಗೆ ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಪಂದಿಸಲಾಗಿದೆ.

      ಅನಿರೀಕ್ಷಿತ ಲಾಕ್ ಡೌನ್‍ನಿಂದ ಮಂಜುನಾಥ ಅವರ ಜೀವನ ನಿರ್ವಹಣೆ ದುಸ್ತರವಾಗಿತ್ತು. ಅಲ್ಲದೆ ಅವರು ಪಡಿತರ ಚೀಟಿ ಹೊಂದಿಲ್ಲದಿರುವ ಮಾಹಿತಿಯೂ ಸಹ ಈ ಸಂದರ್ಭದಲ್ಲಿ ತಿಳಿದು ಬಂದಿದೆ. ಪಡಿತರ ಚೀಟಿಯೊಂದಿಗೆ ಸರ್ಕಾರದ ಇನ್ನಿತರ ಸೌಲಭ್ಯಗಳನ್ನು ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಹಾಗೂ ಮತ್ತೆ ಇಂತಹ ಸಮಸ್ಯೆ ಎದುರಾದಲ್ಲಿ ತಾಲೂಕು ಆಡಳಿತವನ್ನು ಅಥವಾ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಬೇಕೆಂದು ಮಾಹಿತಿ ನೀಡಲಾಯಿತು.

      ವಿಕಲಚೇತನ ಮಂಜುನಾಥ ಅವರಿಗೆ ಪಾಲಿಕೆಯಿಂದ ತ್ರಿಚಕ್ರ ವಾಹನ ಒದಗಿಸುವಂತೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಪಾಲಿಕೆ ಮ್ಯಾನೇಜರ್ ಶಿವಕುಮಾರ್, ರಾಜಸ್ವ ನಿರೀಕ್ಷಕರಾದ ಶಿವಣ್ಣ ಹಾಗೂ ಬಸವರಾಜು, ಕಾರ್ಮಿಕ ನಿರೀಕ್ಷಕರಾದ ಭಾರತಿ ಹಾಗೂ ಜಯಪ್ರಕಾಶ್, ಮತ್ತಿತರರು ಉಪಸ್ಥಿತರಿದ್ದರು ಎಂದು ಅವರು ತಿಳಿಸಿದ್ದಾರೆ.

(Visited 11 times, 1 visits today)