ತುಮಕೂರು:

      ಭೂಮಿಯ ಮೇಲೆ ಮಾನವನ ಅತಿಕ್ರಮಣದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದ್ದು, ಮಳೆಯ ನೀರು ಹರಿದು ಹೋಗುವುದನ್ನು ನಿಲ್ಲಿಸಿ ಭೂಮಿಯಲ್ಲಿ ಹಿಂಗಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಕೆಲಸ ಆಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

       ಅವರು ಜಿಲ್ಲಾ ಪಂಚಾಯತ್ ಆವರಣದ ಕುಂಚಿಟಿಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಅಂತರ್ಜಲ ಚೇತನ ಕಾರ್ಯಕ್ರಮವನ್ನು ಉದ್ಥಾಟಿಸಿ ಅವರು ಮಾತನಾಡಿದರು.

      ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಮೂಲಕ 30 ವರ್ಷಗಳ ಹಿಂದಿನ ಪರಿಸರ ಮತ್ತು ಪ್ರಕೃತಿಯನ್ನು ಉಳಿಸಿ ಮತ್ತು ಬೆಳೆಸುವ ಕಾರ್ಯವನ್ನು ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಹಯೋಗದಲ್ಲಿ ಮನ್ರೆಗಾ ಯೋಜನೆಯಡಿಯಲ್ಲಿ ಕಾರ್ಯ ಪ್ರವೃತ್ತರಾಗಿ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ಪ್ರಧಾನ ಮಂತ್ರಿ ನರೇಗಾ ಯೋಜನೆಯಡಿ 1861 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ 249 ರೂ.ಇದ್ದ ಕೂಲಿ ಹಣವನ್ನು 275 ರೂ.ಗಳಿಗೆ ಹೆಚ್ಚಿಸಿ ದುಡಿಯುವ 9.31ಲಕ್ಷ ಕೈಗಳಿಗೆ ಕೆಲಸ ಕೊಡುವುದರ ಜೊತೆಗೆ ಸಾಮಾಜಿಕ ಆಸ್ತಿಗಳ ನಿರ್ಮಾಣ ಹಾಗೂ ವೈಯಕ್ತಿಕ ಹೊಲ, ಮನೆ ಕಾಮಗಾರಿಗಳನ್ನು ಕೈಗೊಂಡು ದುಡಿಯುವವರ ಕೂಲಿಯ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಜಾಬ್ ಕಾರ್ಡ್ ಸ್ಥಳದಲ್ಲೇ ನೀಡಿ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಚಿವರು ನುಡಿದರು.
ಬೋರ್‍ವೆಲ್‍ಗಳ ಮೂಲಕ ಭೂಮಿಯಿಂದ ಹೊರ ತೆಗೆದ ನೀರನ್ನು ಮತ್ತೆ ಅಂತರ್ಜಲ ಯೋಜನೆ ಮೂಲಕ ಮರುಪೂರಣ ಮಾಡುವ ಕೆಲಸ ಇದಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

      ಸಮಾರಂಭದಲ್ಲಿ ಭಾಗವಹಿಸಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಮಾತನಾಡಿ, ಕುಡಿಯುವ ಸಿಹಿ ನೀರು ಮಳೆಯಿಂದ ಮಾತ್ರ ಲಭ್ಯವಾಗುತ್ತಿದ್ದು, ನೀರಿನ ಮೂಲಗಳಾದ ಕೆರೆ, ಹಳ್ಳ, ಬಾವಿಗಳಲ್ಲಿ ನೀರು ಸಂಗ್ರಹಿಸಿಡುವ ಕೆಲಸ ಹಾಗೂ ನೀರಿನ ಮಿತ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಅಂತರ್ಜಲ ಹೆಚ್ಚಿಸುವ ಕಾರ್ಯ ಈ ಯೋಜನೆಯಿಂದ ಆಗಬೇಕಾಗಿದೆ ಎಂದರು.

      ಕೇಂದ್ರ ಸರ್ಕಾರ ವಿವಿಧ ಯೋಜನೆಗಳಡಿಯಲ್ಲಿ ಅಂತರ್ಜಲ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ನರೇಗಾ ಯೋಜನೆಯಡಿಯಲ್ಲಿ ಎತ್ತೇಚ್ಚ ಅನುದಾನ ನೀಡಿದ್ದು, ಜನರು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅಂತರ್ಜಲ ಮರುಪೂರಣಕ್ಕಾಗಿ ಕ್ರಿಯಾ ಯೋಜನೆ ತಯಾರಿಸಿ ಹರಿಯುವ ನೀರು ಕೆರೆ, ಕಾಲುವೆ, ಹಳ್ಳಗಳಲ್ಲಿ ನಿಲ್ಲುವಂತೆ ಮಾಡಬೇಕಾಗಿದೆ ಎಂದು ಸಚಿವರು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಸಣ್ಣ ನೀರಾವರಿ ಇಲಾಖೆ ಒಂದೇ ಗುರಿಯನ್ನು ಹೊಂದಿದ್ದು,  ಅಂತರ್ಜಲ ಹೆಚ್ಚಿಸುವ ಮೂಲಕ ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು ಎಲ್ಲಾ ಇಲಾಖೆಗಳು ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.

     ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುವ ಮೂಲಕ ನಿರುದ್ಯೋಗಿಗಳಿಗೆ ಕೆಲಸ ನೀಡುವುದರ ಜೊತೆಗೆ ಭೂಮಿಯಲ್ಲಿ ನೀರಿನ ಮರುಪೂರಣ ಮಾಡುವ ಮೂಲಕ ಅಂತರ್ಜಲ ಹೆಚ್ಚಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

     ಸಂಸದ ಜಿ.ಎಸ್.ಬಸವರಾಜು ಅವರು ಮಾತನಾಡಿ, ಕೇಂದ್ರ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀ ಣಾಭಿವೃದ್ಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ ಕೈಗೊಳ್ಳಲು ವಿಪುಲ ಅವಕಾಶವನ್ನು ನೀಡಿದ್ದು, ಹಳ್ಳಿಗಾಡಿನ ನಿರುದ್ಯೋಗಿಗಳು ಇದರ ಪ್ರಯೋಜನ ಪಡೆಯುವ ಮೂಲಕ ಮುಚ್ಚಿಹೋಗಿರುವ ಕೆರೆ-ಕಾಲುವೆ, ಹಳ್ಳ-ಕೊಳ್ಳಗಳಲ್ಲಿ ಮಳೆ ನೀರು ಹರಿದುಹೋಗುವುದನ್ನು ನಿಲ್ಲಿಸಿ ಅಂತರ್ಜಲ ಕಾಪಾಡಿಕೊಳ್ಳುವಲ್ಲಿ ಮುಂದಾಗಬೇಕೆಂದು ಅವರು ಕರೆ ನೀಡಿದರು.

      ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ಭಾರತ ದೇಶದಲ್ಲಿ ರಾಜಸ್ಥಾನ ಬಿಟ್ಟರೆ ಕರ್ನಾಟಕ ಬರಪೀಡಿತ ರಾಜ್ಯವಾಗಿದ್ದು, ಹಿಂದಿನ ಪ್ರಮಾಣದಷ್ಟೇ ಪ್ರಮಾಣದಲ್ಲಿ ಈಗಲೂ ಮಳೆಯು ಬರುತ್ತಿದ್ದು, ಅನಿಯಮಿತವಾಗಿ ಸುರಿದು ಹರಿದು ಹೋಗುವುದನ್ನು ವೈಜ್ಞಾನಿಕವಾಗಿ ತಡೆಯುವ ಮೂಲಕ ಅಂತರ್ಜಲ ಹೆಚ್ಚಿಸುವುದರ ಜೊತೆಗೆ ಹವಾಮಾನ ವೈಪರಿತ್ಯದಿಂದ ಉಂಟಾಗುವ ಪ್ರವಾಹ, ಬರ ಇವುಗಳನ್ನು ಹೋಗಲಾಡಿಸಬಹುದಾಗಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ನರೇಗಾ ಯೋಜನೆಯಡಿಯಲ್ಲಿ 13 ಕೋಟಿ ಮಾನವ ದಿನಗಳನ್ನು ಸೃಜಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸದೊಂದಿಗೆ ಸಾರ್ವಜನಿಕ ಆಸ್ತಿ ಅಭಿವೃದ್ಧಿಗೆ ಕಾಯಕಲ್ಪ ಹಾಕಿಕೊಂಡಿದೆ ಎಂದು ಅವರು ತಿಳಿಸಿದರು.

      ತುಮಕೂರು ಜಿಲ್ಲೆ ಕಲ್ಪತರು ನಾಡಾಗಿದ್ದು ಈ ಯೋಜನೆಯ ಲಾಭವನ್ನು ಎಲ್ಲಾ ಸಾರ್ವಜನಿಕರು ಮತ್ತು ನಿರುದ್ಯೋಗಿಗಳು ಸದ್ಭಳಕೆ ಮಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಪ್ರಸಕ್ತ 2020-21ನೇ ಹಣಕಾಸು ವರ್ಷದಲ್ಲಿ 6ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ 16 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

      ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಸಮುದಾಯಿಕ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಉತ್ತೇಜನ ನೀಡಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕೆಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಶಾಸಕರುಗಳಾದ ಜಿ.ಬಿ.ಜ್ಯೋತಿಗಣೇಶ್, ಜಯರಾಂ, ಬಿ.ಸತ್ಯನಾರಾಯಣ, ಬಿ.ಸಿ.ನಾಗೇಶ್, ಡಾ: ಹೆಚ್.ಡಿ. ರಂಗನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.

      ಸಮಾರಂಭಕ್ಕೂ ಮುನ್ನ ತುಮಕೂರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಿಲ್ಲಾ ಸಂಪನ್ಮೂಲ ಕೇಂದ್ರದ ನೂತನ ಕಟ್ಟಡವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಜಂಟಿಯಾಗಿ ಉದ್ಘಾಟಿಸಿದರು. 

(Visited 12 times, 1 visits today)