ಅಕ್ರಮ ಪಡಿತರ ದಾಸ್ತಾನು : ಅಂಗಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ- ಸಚಿವ

ತುಮಕೂರು:

      ಗುಲ್ಬರ್ಗಾ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು ೪೦೦೦ ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

       ಅವರು ಚಿತ್ರದುರ್ಗಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದಿಂದ ಹಂಚಿಕೆಯಾಗಿರುವ ಪಡಿತರ ಅಕ್ಕಿಯನ್ನು ಪಾಲಿಷ್ ಮಾಡಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಕಳೆದ ೨೦ ದಿನಗಳಲ್ಲಿ ಪೊಲೀಸ್, ಕಂದಾಯ ಹಾಗೂ ಆಹಾರ ಇಲಾಖೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ೪೦೦೦ ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಅಕ್ಕಿಯನ್ನು ಸಾಗಿಸಿದ ಲಾರಿಗಳನ್ನೂ ಸಹ ಸೀಜ಼್ ಮಾಡಲಾಗಿದೆ. ಯಾವುದೇ ಅಂಗಡಿಗಳಲ್ಲಿ ಸೂಕ್ತ ದಾಖಲೆ/ ರಸೀದಿ ಇಲ್ಲದೆ ಅಕ್ಕಿ ಹಾಗೂ ಮತ್ತಿತರ ಪಡಿತರ ಧಾನ್ಯಗಳನ್ನು ಶೇಖರಿಸಿಟ್ಟಿರುವುದು ಕಂಡು ಬಂದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದರು.

180 ನ್ಯಾಯಬೆಲೆ ಅಂಗಡಿಗಳು ಅಮಾನತ್ತು:

      ತಾವು ಆಹಾರ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಪಡಿತರ ವಿತರಣೆಯಲ್ಲಿರುವ ಹಲವಾರು ಲೋಪದೋಷಗಳನ್ನು ಸರಿಪಡಿಸಿದ್ದೇನೆ. ರಾಜ್ಯದಲ್ಲಿ ಈವರೆಗೆ ತೂಕದ ವ್ಯತ್ಯಾಸ, ಪಡಿತರ ದುರ್ಬಳಕೆ, ಗ್ರಾಹಕರಿಗೆ ಮೋಸ, ಅಕ್ರಮ ದಾಸ್ತಾನು, ಹಣ ದುರುಪಯೋಗ ಮಾಡುತ್ತಿದ್ದ ೧೮೦ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತ್ತಿನಲ್ಲಿಡಲಾಗಿದೆ. ಈ ಪೈಕಿ ಸಣ್ಣ-ಪುಟ್ಟ ಲೋಪದೋಷಗಳ ಆರೋಪವಿರುವ ಮೂರ‍್ನಾಲ್ಕು ನ್ಯಾಯಬೆಲೆಗಳನ್ನು ಅಮಾನತ್ತಿನಿಂದ ಕೈಬಿಟ್ಟು, ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಉಳಿದ ನ್ಯಾಯಬೆಲೆ ಅಂಗಡಿಗಳನ್ನು ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶ ನೀಡಲಾಗಿದ್ದು, ತನಿಖೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಪಡಿತರ ವಿತರಣೆಯಲ್ಲಿ ವ್ಯತ್ಯಾಸವಾದರೆ ನಿರ್ದಾಕ್ಷಿಣ್ಯ ಕ್ರಮ:

      ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದರೆ ಗ್ರಾಹಕರು ಯಾವುದೇ ಕಾರಣಕ್ಕೂ ಮಣಿಯದೆ ಪ್ರತಿಭಟಿಸಬೇಕು. ಇಲ್ಲವೇ ಇಲಾಖೆಯ ಸಹಾಯವಾಣಿ ಸಂಖ್ಯೆ 1967ಕ್ಕೆ ದೂರು ನೀಡಿದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪ್ರತಿದಿನ ಸಹಾಯವಾಣಿಗೆ ಸುಮಾರು ೨೫೦ ದೂರು ಕರೆಗಳು ಬರುತ್ತಿದ್ದು, ಸ್ವೀಕರಿಸಿದ ದೂರುಗಳಿಗೆ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

4 ಲಕ್ಷ ವಲಸೆ ಕುಟುಂಬಗಳಿಗೆ ಪಡಿತರ ವಿತರಣೆ :

      ಕೋವಿಡ್-೧೯ ಸೋಂಕು ರೋಗದ ಹಿನ್ನೆಲೆಯಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬ ದೃಷ್ಟಿಯಿಂದ ಮೇ ಮತ್ತು ಜೂನ್ ಮಾಹೆಗಾಗಿ ವಲಸೆ ಕಾರ್ಮಿಕರು ಹಾಗೂ ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳಿಗೆ ತಲಾ ೨ ಕೆ.ಜಿ. ಕಡಲೆ ಕಾಳು ಹಾಗೂ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಪಡಿತರ ಹಂಚಿಕೆ ಮಾಡಿದೆ ಎಂದು ತಿಳಿಸಿದರಲ್ಲದೆ ಲಾಕ್‌ಡೌನ್ ಸಂದರ್ಭದಲ್ಲಿ ಈವರೆಗೆ ರಾಜ್ಯದಲ್ಲಿ ೪ ಲಕ್ಷಕ್ಕಿಂತ ಹೆಚ್ಚು ವಲಸೆ ಕುಟುಂಬಗಳಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗಿದೆ ಎಂದರು.

      ಅಲ್ಲದೆ ಬರುವ ಜೂನ್ ಮಾಹೆಯ ೧೧ ರಿಂದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೂ ಸಹ ಪಡಿತರ ಹಂಚಿಕೆ ಮಾಡಲಾಗುವುದು. ಅಂತ್ಯೋದಯ ಕಾರ್ಡುದಾರರಿಗೆ ತಲಾ ೩೫ ಕೆ.ಜಿ. ಅಕ್ಕಿ, ೨ ಕೆ.ಜಿ. ಗೋಧಿ ಹಾಗೂ ೨ ಕೆ.ಜಿ. ಬೇಳೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಕುಟುಂಬಕ್ಕೆ ೨ ಕೆ.ಜಿ. ಗೋಧಿ, ೨ ಕೆ.ಜಿ. ಬೇಳೆ ಸೇರಿದಂತೆ ಕುಟುಂಬದ ಸದಸ್ಯರಿಗೆ ತಲಾ ೧೦ ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.

ನಕಲಿ ಕಾರ್ಡುಗಳನ್ನು ಜೂನ್ ಮಾಹೆಯೊಳಗೆ ಹಿಂದಿರುಗಿಸಿ:

      ತೆರಿಗೆ ಪಾವತಿದಾರರು, ಸ್ವಂತ ಕಾರು/ಮೋಟಾರು/ವಾಹನ ಹೊಂದಿದವರು, ಸರ್ಕಾರಿ ಹಾಗೂ ನಿವೃತ್ತಿ ಸರ್ಕಾರಿ ನೌಕರರು ಈ ಉಚಿತ ಪಡಿತರವನ್ನು ಪಡೆಯಲು ಅರ್ಹರಲ್ಲ. ಬಡತನ ರೇಖೆಗಿಂತ ಮೇಲಿರುವವರು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಲ್ಲಿ ಕೂಡಲೇ ಸ್ವಯಂಪ್ರೇರಿತರಾಗಿ ಜೂನ್ ಮಾಹೆಯ ಅಂತ್ಯದೊಳಗೆ ಇಲಾಖೆಗೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದೆಂದರು.

ಪರಿಶೀಲನೆಗೆ ೫ ತಂಡ ರಚನೆ:

      ರಾಜ್ಯದಾದ್ಯಂತ ಸಮರ್ಪಕವಾಗಿ ಪಡಿತರ ವಿತರಣೆಯಾಗುತ್ತಿರುವ ಬಗ್ಗೆ ಹಾಗೂ ಪಡಿತರ ಗುಣಮಟ್ಟವನ್ನು ಪರಿಶೀಲನೆ ನಡೆಸುವ ಉದ್ದೇಶದಿಂದ ಇಂದು ಗೋದಾಮುಗಳಿಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ನೆಲಮಂಗಲ ಹಾಗೂ ಕ್ಯಾತ್ಸಂದ್ರ ಗೋದಾಮಿಗೆ ಭೇಟಿ ನೀಡಿದ್ದು, ಯಾವುದೇ ಲೋಪದೋಷ ಕಂಡು ಬಂದಿಲ್ಲ. ಬರುವ ಜೂನ್ ೮ರ ನಂತರ ನನ್ನನ್ನೂ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳ ೫ ತಂಡವು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಸಮರ್ಪಕ ಪಡಿತರ ವಿತರಣೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದರು.

ಅಂಗಡಿ/ಗೋದಾಮುಗಳಿಗೆ ಅನಿರೀಕ್ಷಿತ ಭೇಟಿ:

      ನಿಗಧಿಯಂತೆ ಯಾವುದೇ ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ತೆರಳುವಾಗ ಮಾರ್ಗ ಮಧ್ಯೆ ಸಿಗುವ ನ್ಯಾಯಬೆಲೆ ಅಂಗಡಿ/ ಗೋದಾಮುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವ ಕೆಲಸ ಮಾಡುತ್ತಿದ್ದೇನೆ. ಕಡು ಬಡವರು, ನಿರ್ಗತಿಕರಿಗಾಗಿ ಸರ್ಕಾರದಿಂದ ಹಂಚಿಕೆಯಾಗಿರುವ ಪಡಿತರ ವಿತರಣೆಯಲ್ಲಿ ತೂಕ ಹಾಗೂ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸಗಳ ಲೋಪದೋಷ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ನಾಳೆಯೂ ಜಿಲ್ಲೆಗೆ ಭೇಟಿ:

      ಇಡೀ ಏಷ್ಯಾಖಂಡದಲ್ಲೇ ಅತೀ ದೊಡ್ಡದೆನಿಸಿಕೊಂಡಿರುವ ನಗರದ ಸಪ್ತಗಿರಿ ರೈಸ್‌ಮಿಲ್‌ಗೆ ಭೇಟಿ ನೀಡಿ ಪರಿಶೀಲಿಸಲು ಭಾನುವಾರವೂ ಸಹ ಜಿಲ್ಲೆಗೆ ಆಗಮಿಸುವ ಉದ್ದೇಶವಿದೆ ಎಂದರಲ್ಲದೆ ಆಹಾರ ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ರೈಸ್‌ಮಿಲ್ ಅನ್ನು ಪರಿಶೀಲಿಸಿರಲಿಲ್ಲ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರು, ರೈತ ಮುಖಂಡರು ಮತ್ತು ಅಧಿಕಾರಿಗಳ ತಂಡವು ಸಹ ನಮ್ಮೊಂದಿಗೆ ಪರಿಶೀಲನೆ ಕಾರ್ಯದಲ್ಲಿ ಪಾಲ್ಗೊಳ್ಳಲಿದೆ. ಸ್ಥಳೀಯ ಶಾಸಕ ಹಾಗೂ ಸಂಸದರಿಂದ ಸಪ್ತಗಿರಿ ರೈಸ್ ಮಿಲ್‌ಗೆ ಹೊರ ದೇಶದ ಗಣ್ಯರು ಭೇಟಿ ನೀಡಿರುವ ಮಾಹಿತಿ ತಿಳಿದ ನಂತರ ಖುದ್ದಾಗಿ ಭೇಟಿ ನೀಡುವ ಹಾಗೂ ಬಳ್ಳಾರಿಯಿಂದ ೧೦೦ ಕ್ವಿಂಟಾಲ್ ಕಾವೇರಿ ಸೋನಾ ತಳಿಯ ಭತ್ತಯನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ಮಿಲ್ಲಿಂಗ್ ಪ್ರಕ್ರಿಯೆಗೊಳಪಡಿಸಿ ಕಣ್ಣಾರೆ ನೋಡಬೇಕೆನ್ನುವ ಅಭಿಲಾಷೆ ಹೊಂದಿದ್ದೇನೆ ಎಂದರು.

ಜಿಲ್ಲೆಯ ೫ ಅಂಗಡಿಗಳು ಅಮಾನತ್ತು:

     ಕೋವಿಡ್-೧೯ ಲಾಕ್‌ಡೌನ್ ಸಂದರ್ಭದಲ್ಲಿ ಸಮರ್ಪಕ ಸೇವೆ ಒದಗಿಸದ ಜಿಲ್ಲೆಯ ೫ ನ್ಯಾಯಬೆಲೆ ಅಂಗಡಿಗಳನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಸಚಿವರ ಗಮನಕ್ಕೆ ತಂದರು.

ಆನ್‌ಲೈನ್‌ನಲ್ಲೆಯೇ ಮಾಹಿತಿ:

      ನ್ಯಾಯಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸುವ ಸಮಯವನ್ನು ನಿಗಧಿಗೊಳಿಸಿ ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಬೇಕೆಂದು ಪತ್ರಕರ್ತರು ಮನವಿ ಮಾಡಿದಾಗ ಸ್ಪಂದಿಸಿದ ಸಚಿವರು ರಾಜ್ಯದಲ್ಲಿರುವ ಸುಮಾರು ೧೯೮೦೦ ನ್ಯಾಯಬೆಲೆ ಅಂಗಡಿಗಳಲ್ಲಿ ನಾಲ್ಕೈದು ಅಂಗಡಿಗಳು ಮಾತ್ರ ತೆರೆದಿಲ್ಲ ಎಂಬ ಮಾಹಿತಿಯಿದೆ. ಪಡಿತರ ಹಂಚಿಕೆ/ವಿತರಣೆ ಪ್ರಮಾಣಕ್ಕೆ ಸಂಬಂಧಿಸಿದ ಪ್ರತೀ ದಿನದ ಅಂಕಿ-ಅಂಶಗಳನ್ನು ಆನ್‌ಲೈನ್ ಮೂಲಕ ಮಾಹಿತಿ ಪಡೆಯುವ ವ್ಯವಸ್ಥೆ ಇಲಾಖೆಯಲ್ಲಿರುವುದರಿಂದ ನಿಗಧಿಪಡಿಸಿದ ಸಮಯದಲ್ಲಿ ನ್ಯಾಯಬಲೆ ಅಂಗಡಿಗಳು ಸೇವೆ ಒದಗಿಸದಿರುವ ಬಗ್ಗೆ ಯಾವುದೇ ದೂರುಗಳಿಲ್ಲ ಎಂದು ಸ್ಪಷ್ಟಪಡಿಸಿದರು.

    ಹಾಸನ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ:

        ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಯಾವ ಹೊಸ ಯೋಜನೆಗಳನ್ನು ರೂಪಿಸಿದ್ದೀರಿ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಯ ಅಭಿವೃದ್ಧಿಯ ಕಡೆ ಮೊದಲ ಆದ್ಯತೆ ನೀಡುತ್ತೇನೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುವ ಇಂಗಿತ ವ್ಯಕ್ತಪಡಿಸಿದರು. ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡ ನಂತರ ಹಾಸನ ಜಿಲ್ಲೆಗೆ ಜೂನ್ ೮ರಂದು ಮೊದಲ ಭೇಟಿ ನೀಡುವ ಕಾರ್ಯಕ್ರಮವಿದ್ದು, ಜಿಲ್ಲೆಯ ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡುತ್ತೇನೆ ಎಂದರು.

      ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಇಲಾಖೆಯ ಅಧಿಕಾರಿ/ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಗೋದಾಮು ನಿರ್ವಹಣೆ ಬಗ್ಗೆ ಮೆಚ್ಚುಗೆ:

      ನಂತರ ಸಚಿವರು ನಗರದ ಶಿರಾಗೇಟ್ ಬಳಿಯಿರುವ ಹಾಗೂ ಶಿರಾ ತಾಲ್ಲೂಕಿನಲ್ಲಿರುವ ಕೆಎಫ್‌ಸಿಸಿ ಗೋದಾಮುಗಳಿಗೆ ಭೇಟಿ ನೀಡಿ ಅಕ್ಕಿ, ಬೇಳೆಯ ಗುಣಮಟ್ಟ ಹಾಗೂ ದಾಸ್ತಾನು ಪರಿಶೀಲನೆ ನಡೆಸಿ ಉತ್ತಮವಾಗಿ ನಿರ್ವಹಣೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

       ಇದಕ್ಕೂ ಮುನ್ನ ತುಮಕೂರು ಅಂತರಸನಹಳ್ಳಿಯಲ್ಲಿರುವ ಸಪ್ತಗಿರಿ ರೈಸ್‌ಮಿಲ್‌ಗೆ ಭೇಟಿ ನೀಡಿ ಅತ್ಯಾಧುನಿಕ ರೀತಿಯಲ್ಲಿ ಮಿಲ್ಲಿಂಗ್ ಮಾಡುವ ವಿಧಾನವನ್ನು ಪರಿಶೀಲಿಸಿ ಚಿತ್ರದುರ್ಗಕ್ಕೆ ಪಯಣ ಬೆಳೆಸಿದರು.

(Visited 38 times, 1 visits today)

Related posts

Leave a Comment