ಕೊರಟಗೆರೆ:

      ರಾಷ್ಟ್ರದಲ್ಲಿಯೇ ಅತಿಹೆಚ್ಚು ಪೊಲೀಸ್‍ಠಾಣೆ ಮತ್ತು ವಸತಿಗೃಹ ನಿರ್ಮಾಣ ಮಾಡುತ್ತಿರುವ ರಾಜ್ಯ ಕರ್ನಾಟಕ ಆಗಿದೆ ಎಂದು ಗೃಹಸಚಿವ ಬಸವರಾಜು ಬೊಮ್ಮಾಯಿ ತಿಳಿಸಿದರು

      ಕೊರಟಗೆರೆ ಪಟ್ಟಣದ ಜನಸ್ನೇಹಿ ಪೊಲೀಸ್‍ಠಾಣೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದರು.

      ರಾಜ್ಯ ಸರಕಾರದ ಪ್ರಸ್ತುತ ಆಯವ್ಯಯದಲ್ಲಿ ಪೊಲೀಸ್ ಇಲಾಖೆಯ ಗೃಹ ನಿರ್ಮಾಣಕ್ಕೆ 5ಸಾವಿರ ಕೋಟಿ ಮೀಸಲಿಡಲಾಗಿದೆ. 2020ರಿಂದ 2025ರವರೆಗೆ ಶೇ.75ರಷ್ಟು ಗೃಹನಿರ್ಮಾಣ ದೂರದೃಷ್ಟಿ ಹೊಂದಲಾಗಿದೆ. ಪೊಲೀಸರ ಅನುಕೂಲತೆಗೆ ತಕ್ಕಂತೆ ಜನಸ್ನೇಹಿ ಪೊಲೀಸ್‍ಠಾಣೆಯನ್ನು ಆಧುನಿಕವಾಗಿ ನಿರ್ಮಾಣ ಮಾಡಲಾಗುತ್ತೀದೆ. ಇದರ ಉದ್ದೇಶ ಅಪರಾದ ಕಡಿಮೆಯಾಗಿ ಸಾಮಾನ್ಯ ಜನರಿಗೆ ನ್ಯಾಯ ಸಿಗುವಂತಾಗಬೇಕು ಎಂದರು.

      ಮಾಜಿ ಕೇಂದ್ರಸಚಿವ ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆಯ ಬಗ್ಗೆ ಪರಿಶೀಲನೆ ನಡೆಸಲು ಐಜಿಗೆ ದೂರು ನೀಡಲಾಗಿದೆ. ದೂರಿನಂತೆ ತನಿಖೆಯನ್ನು ನಡೆಸಲಾಗುತ್ತದೆ. ಇದರ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

      ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಮಾತನಾಡಿ ಕೊರಟಗೆರೆ ಕ್ಷೇತ್ರದ ಜನಸಾಮಾನ್ಯರ ಭದ್ರತೆಗಾಗಿ ಕೋಳಾಲದಲ್ಲಿ ಪೊಲಿಸ್‍ಠಾಣೆಯನ್ನು ಪ್ರಾರಂಭ ಮಾಡಲಾಗಿದೆ. ಅದೇ ರೀತಿಯಾಗಿ ಕೊರಟಗೆರೆ ಪಟ್ಟಣದಲ್ಲಿ ಇತ್ತೀಚಿಗೆ ಆರಕ್ಷಕ ನಿರೀಕ್ಷಕರ ಕಚೇರಿಯನ್ನು ಸಹ ನಿರ್ಮಿಸಲಾಗಿದೆ. ಬಹಳ ವರ್ಷದಿಂದ ಹಳೆಯದಾಗಿದ್ದ ಕೊರಟಗೆರೆ ಪೊಲೀಸ್ ಠಾಣೆಯನ್ನು ನವೀನ ಮಾದರಿಯಲ್ಲಿ ಆಧುನಿಕತೆಯಿಂದ ನಿರ್ಮಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ. ಇದರ ಉದ್ದೇಶ ಸಾಮಾನ್ಯ ಜನರು ನ್ಯಾಯ ಹಾಗೂ ಭದ್ರತೆಗಾಗಿ ಜನರು ಪೊಲೀಸ್ ಠಾಣೆಗೆ ಬಹುದೂರ ಹೋಗದಂತೆ ಸುಸರ್ಜಿತ ಠಾಣೆಗಳನ್ನು ನಿರ್ಮಿಸಲಾಗಿದೆ ಎಂದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ಶಿವಣ್ಣ, ಎಡಿಜಿಪಿ ಅಮರ್‍ಕುಮಾರ್‍ಪಾಂಡೆ, ಆರಕ್ಷಕ ಮಹಾನಿರೀಕ್ಷಕ ಶರತ್‍ಚಂದ್ರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಮಧುಗಿರಿ ಡಿವೈಎಸ್ಪಿ ಪ್ರವೀಣ್. ಸಿಪಿಐ ನದಾಫ್, ಪಿಎಸೈ ಮುತ್ತುರಾಜು, ನವೀನ್, ಗುತ್ತಿಗೆದಾರ ಶ್ರೀನಿವಾಸ್.ಎಂ.ವಿ. ಮುಖಂಡರಾದ ದಿನೇಶ್, ಅರಕೆರೆಶಂಕರ್, ಅಶ್ವತ್ಥನಾರಾಯಣ್ ಪವನಕುಮಾರ್ ಸೇರಿದಂತೆ ಇತರರು ಇದ್ದರು.

(Visited 12 times, 1 visits today)