ತುಮಕೂರು:

     ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮಠದ ಮಕ್ಕಳಿಗೆ ಮಂಗಳವಾರ ಸ್ಪಿರುಲಿನ ಚಿಕ್ಕಿ ವಿತರಣೆ ಮಾಡಿದರು.

      ಮಂಗಳವಾರ ಬೆಳಿಗ್ಗೆ ಸಿದ್ಧಗಂಗಾ ಮಠದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ಪಿರುಲಿನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಮಠದ ವಿದ್ಯಾರ್ಥಿಗಳಿಗೆ ಸ್ಪಿರುಲಿನ ಚಿಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಚಿಕ್ಕಿ ವಿತರಣೆ ಮಾಡಿದ ನಂತರ ಮಾತನಾಡಿದ ಅವರು ಕೋವಿಡ್-19 ಸಂದರ್ಭದಲ್ಲಿ ಈ ಸ್ಪಿರುಲಿನ ಚಿಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಹಲವಾರು ಸಮಸ್ಯೆಗಳಲ್ಲಿ ಅಪೌಷ್ಠಿಕತೆಯು ಸಹ ಒಂದು. ಅದರಲ್ಲಿಯೂ ಮಕ್ಕಳು, ಗರ್ಭಿಣಿ, ಬಾಣಂತಿ, ವಯೋವೃದ್ಧರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಸ್ಪಿರುಲಿನ ಚಿಕ್ಕಿಯು ಪೌಷ್ಠಿಕ ಆಹಾರವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಪಿರುಲಿನ ಇದೊಂದು ಪಾಚಿ ಜಾತಿಗೆ ಸೇರಿದ ಸಸ್ಯವಾಗಿದ್ದು, ಜನರಿಗೆ ಇನ್ನೂ ಚಿರಪರಿಚಿತವಾಗಿಲ್ಲ.

      ಶ್ರೀ ಸಿದ್ದಗಂಗಾ ಮಠಕ್ಕೆ ಪ್ರತಿದಿನ ಗಣ್ಯಾತಿಗಣ್ಯರು, ವಿದೇಶೀಯರು, ಸಾರ್ವಜನಿಕರು ಭೇಟಿ ನೀಡುವುದರಿಂದ ಸ್ಪಿರುಲಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಠದ ಆವರಣದಲ್ಲಿಯೇ ಸ್ಪಿರುಲಿನ ಬೆಳೆಯ ಪ್ರಾತ್ಯಕ್ಷಿಕಾ ಘಟಕ ಸ್ಥಾಪಿಸಲು ಹಾಗೂ ಮಠದ ಮಕ್ಕಳಿಗೆ ಪ್ರತಿದಿನ ಸ್ಪಿರುಲಿನ ಚಿಕ್ಕಿ/ಮಾತ್ರೆಗಳ ಪೂರೈಕೆಗಾಗಿ ಸ್ಪಿರುಲಿನ ಬೆಳೆಯಲು ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

       ಮಕ್ಕಳಿಗೆ ಕೇವಲ ಸ್ಪಿರುಲಿನ ಪಾಚಿಯನ್ನು ಮಾತ್ರ ಸೇವನೆ ಮಾಡಲು ನೀಡಿದರೆ ಅವರು ತಿನ್ನುವುದಿಲ್ಲವಾದ್ದರಿಂದ ಬೆಲ್ಲ ಮತ್ತು ಕಡಲೆಬೀಜವನ್ನು ಬಳಸಿ ಚಿಕ್ಕಿ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಬೆಲ್ಲದ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಳವಾಗುವುದರೊಂದಿಗೆ ಮಕ್ಕಳ ಬೆಳವಣಿಗೆಗೆ ಪೂರಕವಾಗುತ್ತದೆ. ಕಳೆದ ವಾರವಷ್ಟೇ ಜಿಲ್ಲೆಯ ಅತಿ ಹಿಂದುಳಿದ ಪ್ರದೇಶವಾದ ಪಾವಗಡ ತಾಲ್ಲೂಕಿನ 1ಸಾವಿರ ಅಪೌಷ್ಟಿಕ ಮಕ್ಕಳಿಗೆ 1 ವರ್ಷ ಕಾಲ ಸ್ಪಿರುಲಿನ ಚಿಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದರು.

      ಸ್ಪಿರುಲಿನ ಚಿಕ್ಕಿಯು ಆಹಾರವೂ ಹೌದು. ಔಷಧಿಯೂ ಹೌದು. ದೇಹದಲ್ಲಿರುವ ಕೊರತೆಯನ್ನು ಸರಿದೂಗಿಸುವ ಶಕ್ತಿ ಸ್ಪಿರುಲಿನಾಕ್ಕಿದೆ. ಮಕ್ಕಳಷ್ಟೇ ಅಲ್ಲದೆ ಯುವಕರು, ಮಹಿಳೆಯರು, ವಯೋ ವೃದ್ಧರು ಚಿಕ್ಕಿಯನ್ನು ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದರು.

      ಜಿಲ್ಲಾಧಿಕಾರಿ ಡಾ:ಕೆ.ರಾಕೇಶ್ ಕುಮಾರ್ ಮಾತನಾಡಿ ನೈಸರ್ಗಿಕವಾದ ಪೌಷ್ಠಿಕ ಆಹಾರವಾಗಿರುವ ಸ್ಪಿರುಲಿನ 100ಕ್ಕೂ ಹೆಚ್ಚು ಪೋಷಕಾಂಶಗಳನ್ನೊಳಗೊಂಡಿದೆಯಲ್ಲದೆ ಹೇರಳ ಪ್ರಮಾಣದಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆಯೆಂದು ಮೈಸೂರಿನ ಸಿಎಫ್‍ಟಿಆರ್‍ಐ(ಕೇಂದ್ರೀಯ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರದ ಸಂಶೋಧನೆಯಲ್ಲಿ ದೃಢಪಟ್ಟಿರುವುದರಿಂದ ಈ ಸ್ಪಿರುಲಿನ ಚಿಕ್ಕಿಯನ್ನು ವಿತರಿಸಲಾಗುತ್ತಿದೆ. ಮಠದ 1ಸಾವಿರ ಮಕ್ಕಳಿಗೆ 1 ವರ್ಷಗಳ ಕಾಲ ಈ ಚಿಕ್ಕಿಯನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ. ಪ್ರಸ್ತುತ ಮಠದಲ್ಲಿರುವ ಸುಮಾರು 150 ಮಕ್ಕಳು ಈ ಚಿಕ್ಕಿಯ ಸೇವನೆ ಮಾಡಲಿದ್ದಾರೆ ಎಂದರು.

      ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಇದೇ ಮಾಹೆಯ 2ನೇ ವಾರದಿಂದ ಒರಿಸ್ಸಾ ರಾಜ್ಯದ ಸುಂದರಘಡ ಜಿಲ್ಲೆಯ ಸುಮಾರು 30ಸಾವಿರ ಮಕ್ಕಳಿಗೆ ಈ ಸ್ಪಿರಲಿನ ಪೂರಕ ಆಹಾರವನ್ನು ಒದಗಿಸಲು ಸ್ಪಿರುಲಿನ ಫೌಂಡೇಷನ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.

      ಹಿರಿಯ ಐಎಎಸ್ ಅಧಿಕಾರಿ ಹಾಗೂ ಸ್ಪಿರುಲಿನ ಫೌಂಡೇಶನ್‍ನ ಮುಖ್ಯಸ್ಥರಾದ ಸಿ.ಎಸ್. ಕೇದಾರ್ ಅವರು ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕಷ್ಟೇ ಅಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಸ್ಪಿರುಲಿನ ಚಿಕ್ಕಿ ವಿತರಣೆ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಈ ಸ್ಪಿರುಲಿನ ಚಿಕ್ಕಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ಪಿರುಲಿನ ಚಿಕ್ಕಿಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಲ್ಲದೆ ಮಕ್ಕಳು ತಿನ್ನುವ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿ ರಕ್ತಕ್ಕೆ ಪೂರೈಸುವ ಕೆಲಸ ಮಾಡುತ್ತದೆ. ನಿಯಮಿತವಾಗಿ ಪ್ರತಿದಿನ ಸ್ಪಿರುಲಿನ ಸೇವನೆಯಿಂದ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ವಾಂತಿ, ಬೇಧಿ, ಕೆಮ್ಮು, ನೆಗಡಿಯಂತಹ ಖಾಯಿಲೆಗಳನ್ನು ದೂರವಿಡಬಹುದು ಎಂದು ತಿಳಿಸಿದರು.

      ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಸಿ.ಎಸ್. ಕೇದಾರ ಅವರು ಮಾತನಾಡಿ, 1996ರಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಾಗೂ ಮಠದ ಸೇವೆಗಳ ಬಗ್ಗೆ ಸ್ಮರಿಸುತ್ತಾ ಸ್ಪಿರುಲಿನ ಪೌಷ್ಠಿಕ ಆಹಾರವನ್ನು ಪ್ರತಿದಿನ ನಾವು ಸೇವಿಸಬೇಕು. ಬರುವ ದಿನಗಳಲ್ಲಿ ಇದನ್ನು ರಾಷ್ಟ್ರ ಮಟ್ಟದ ಕಾರ್ಯಕ್ರಮವನ್ನಾಗಿ ರೂಪಿಸುವ ಉದ್ದೇಶವಿದ್ದು, ಮಠದ ಆಶೀರ್ವಾದ ನಮ್ಮೊಂದಿಗಿರಬೇಕೆಂದು ಸಿದ್ದಗಂಗಾ ಮಠದ ಸ್ವಾಮೀಜಿಯವರಲ್ಲಿ ಅರಿಕೆ ಮಾಡಿಕೊಂಡರು. ಸ್ವ-ಸಹಾಯ ಗುಂಪಿನ ಮಹಿಳೆಯರ ಮೂಲಕ ಸ್ಪಿರುಲಿನ ಚಿಕ್ಕಿ ಉತ್ಪಾದಿಸುವ ಉದ್ದೇಶವಿದ್ದು, ಇದರಿಂದ ಸ್ಥಳೀಯ ಮಹಿಳೆಯರ ಆರ್ಥಿಕ ಬಲ ಹೆಚ್ಚಾಗುವುದಲ್ಲದೆ ಮಕ್ಕಳ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.

       ಸ್ಪಿರುಲಿನ ಫೌಂಡೇಷನ್ ಅಧ್ಯಕ್ಷ ಆರ್.ವಿ. ಮಹೇಶ್ ಮಾತನಾಡಿ, ಮಠದ ಆವರಣದಲ್ಲಿ ಸ್ಪಿರುಲಿನ ಬೆಳೆಯಲು ಸ್ಥಳಾವಕಾಶ ಮಾಡಿಕೊಡುತ್ತಿರುವ ಮಠದ ಸ್ವಾಮೀಜಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದಿದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಸಿದ್ದಗಂಗಾ ಆಸ್ಪತ್ರೆ ಮುಖ್ಯಸ್ಥ ಡಾ: ಪರಮೇಶ್ವರ್, ಮಠದ ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು. 

(Visited 25 times, 1 visits today)