ತುಮಕೂರು:

      ಹೇಮಾವತಿ ನಾಲೆಯಿಂದ ಮೊದಲ ಹಂತದಲ್ಲಿ ಜಿಲ್ಲೆಯ ಶಿರಾ ಹಾಗೂ ಕುಣಿಗಲ್ ತಾಲೂಕಿಗೆ ನೀರನ್ನು ಹರಿಸಲಾಗುತ್ತಿದ್ದು, ಜಿಲ್ಲೆಯ ನಾಲಾ ವ್ಯಾಪ್ತಿಯ ತಾಲೂಕಿಗಳಿಗೆ ತಲಾ 10 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ತಿಳಿಸಿದರು.

       ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಹೇಮಾವತಿ ನಾಲೆಯಿಂದ ಹರಿಸಲಾಗುವ ನೀರನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳುವ ಕುರಿತ ವಿಶೇಷ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

      ಹೇಮಾವತಿಯ ಗೊರೂರು ಡ್ಯಾಂನಲ್ಲಿ 33 ಟಿಎಂಸಿ ನೀರು ಸಂಗ್ರಹವಿದ್ದು, ಕಳೆದ ಬಾರಿ ಕಡಿಮೆ ನೀರು ಹರಿದಿದ್ದ ಶಿರಾ ಹಾಗೂ ಕುಣಿಗಲ್ ತಾಲೂಕಿಗೆ ಈಗ ಮೊದಲ ಹಂತದಲ್ಲಿ ನೀರು ಹರಿಸಲಾಗುತ್ತಿದೆ. ತಾಲೂಕಿಗೆ ಪ್ರವೇಶವಾದ ದಿನದಿಂದ ಲೆಕ್ಕ ಹಾಕಿ 10 ದಿನಗಳ ಕಾಲ ನೀರು ಹರಿಸಲಾಗುವುದು. ತಾಲೂಕುವಾರು ಹಂಚಿಕೆಯಾಗಿರುವ ನೀರಿಗೆ ಅನುಗುಣವಾಗಿ ಜನವರಿ 31ರೊಳಗೆ ಸಮರ್ಪಕವಾಗಿ ಹರಿಸಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ವೇಳಾಪಟ್ಟಿ ತಯಾರಿಸುವಂತೆ ಹೇಮಾವತಿ ಸಿಇಗೆ ಸೂಚಿಸಿದರು. ಅಲ್ಲದೇ ಡ್ಯಾಂನಲ್ಲಿ ನೀರು ಸಂಗ್ರಹವಾದರೆ 2ನೇ ಬಾರಿ ನೀರು ಹರಿಸಲಾಗುವುದು ಎಂದರು.

      ನಾಲೆಯಿಂದ ನೀರು ಹರಿಸಲು ಆರಂಭವಾಗುವ ದಿನದಿಂದ ಮುಕ್ತಾಯದವರೆಗೂ ಕೂಡ ಕುಡಿಯುವ ನೀರಿನ ಕೆರೆಗಳಿಗೆ ಹಾಗೂ ಕುಡಿಯುವ ನೀರು ಯೋಜನೆಗಳಿಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ತುಮಕೂರು ಗ್ರಾಮಾಂ ತರದಲ್ಲಿ ನೀರು ಹರಿಸಿದರು ಕೆರೆಗಳು ಸಮರ್ಪಕವಾಗಿ ಭರ್ತಿಯಾಗುತ್ತಿಲ್ಲ. ಮೋಟಾರ್ ಪಂಪ್‍ಸೆಟ್‍ಗಳು ದುರಸ್ಥಿಯಲ್ಲಿವೆ ಎಂದು ಶಾಸಕ ಗೌರಿಶಂಕರ್ ಅವರು ಸಚಿವರ ಗಮನಕ್ಕೆ ತಂದಾಗ, ಗ್ರಾಮಾಂತರದಲ್ಲಿ 15 ದಿನದೊಳಗೆ ಪಂಪ್‍ಸೆಟ್ ರಿಪೇರಿ ಮಾಡಿಸಿ, ನೀರು ಹರಿಯುವಂತೆ ಮಾಡಿ ಎಂದು ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರಲ್ಲದೇ ಈಗಾಗಲೇ ತುರುವೇಕೆರೆ, ತಿಪಟೂರು, ಗುಬ್ಬಿ ತಾಲೂಕಿನಲ್ಲಿ ಕೆರೆಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

      ಸಂಸದ ಜಿ.ಎಸ್ ಬಸವರಾಜು ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಳೆದ ಸಾಲಿನಲ್ಲಿ 18.5 ಟಿಎಂಸಿಯಿಂದ 21 ಟಿಎಂಸಿ ನೀರನ್ನು ತುಮಕೂರು ನಾಲೆಯಿಂದ ಜಿಲ್ಲೆ ಬಳಸಿಕೊಂಡಿದೆ.

       ಗೊರೊರು ಡ್ಯಾಂನಲ್ಲಿ ನೀರು ಸಂಗ್ರಹವಾಗಿದ್ದು, ನೀರು ವ್ಯರ್ಥವಾಗದಂತೆ ಜಿಲ್ಲೆಯಲ್ಲಿ ಬಳಸಿಕೊಳ್ಳೋಣ. ಹೇಮಾವತಿಯ ಇಂಜಿನಿಯರ್‍ಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಸಂಸದ ಡಿ.ಕೆ ಸುರೇಶ್ ಅವರು ಮಾತನಾಡಿ, ಮೊದಲ ಹಂತದಲ್ಲಿ ಜಿಲ್ಲೆಯ ಹೇಮಾವತಿ ನಾಲೆಯಿಂದ ತಾಲೂಕುವಾರು ಹಂಚಿಕೆಯಾಗಿರುವ ನೀರನ್ನು ಸಮರ್ಪಕವಾಗಿ ಹರಿಸಿ ಎಲೆಕ್ಟ್ರಾನಿಕ್ ಗೇಜ್‍ಗಳನ್ನು ಅಳವಡಿಸಿ ಎಂದರು.

     ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ಮಾತನಾಡಿ, ಜಿಲ್ಲೆಯಿಂದ ನೀರು ಹರಿಯಲು ಪ್ರಾರಂಭವಾದ ನಂತರ ಕುಡಿಯುವ ನೀರಿನ ಕೆರೆಗಳಿಗೆ ನೀರು ಹರಿಸಲು ಯಾವುದೇ ಅಡ್ಡಿಯಿಲ್ಲ ಎಂದರಲ್ಲದೇ ರಾತ್ರಿಯಿಡೀ ನೀರು ಹರಿಯುತ್ತಿರುತ್ತದೆ ಅದಕ್ಕಾಗಿ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಸಭೆಯಲ್ಲಿ ಸಂಸದರಾದ ನಾರಾಯಣಸ್ವಾಮಿ, ಶಾಸ ಕರಾದ ನಾಗೇಶ್, ಜಿ.ಬಿ ಜ್ಯೋತಿಗಣೇಶ್, ಗೌರಿಶಂಕರ್, ಡಾ|| ರಂಗನಾಥ್, ಜಯರಾಂ, ವೀರಭದ್ರಯ್ಯ, ವಿಧಾನ ಪರಿಷತ್ ಶಾಸಕ ತಿಪ್ಪೇಸ್ವಾಮಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ಅಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಇಂಜಿನಿಯರ್‍ಗಳು ಭಾಗವಹಿಸಿದ್ದರು.

    ಪ್ರವಾಸಿಗರ ಮನಸೆಳೆಯಲು ಪ್ರವಾಸಿ ತಾಣಗಳ ವಿಡೀಯೋ ತುಣುಕು:

     ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಮನಸೆಳೆಯಲು ಸುಂದರ ತಾಣಗಳ ವಿಡೀಯೋ ತುಣುಕು, ತಾಣಗಳ ಕಿರು ಪುಸ್ತಕಗಳನ್ನು ಸಿದ್ಧಪಡಿಸಿದ್ದು, ಸೆಪ್ಟೆಂಬರ್ 23ರಂದು ಬಿಡುಗಡೆಗೊಳಿಸಲು ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ತಿಳಿಸಿದರು.

      ಪ್ರವಾಸಿ ತಾಣಗಳಾದ ಅರಳಗುಪ್ಪೆ, ಮಾರ್ಕೋನಹಳ್ಳಿ ಜಲಾಶಯ, ಗೋಡೆಕೆರೆ ದೇವಾಲಯಗಳಂತಹ ವಿಡೀಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದರಿಂದ ತಾಣಗಳಿಗೆ ಹೆಚ್ಚು ಹೆಚ್ಚು ಸಾರ್ವಜನಿಕರು ಬರುತ್ತಾರೆ ಎಂದರು. 

(Visited 14 times, 1 visits today)