ತುಮಕೂರು :

     ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಪರಿಷ್ಕರಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಅಭಿಯನದಲ್ಲಿ ಉದ್ಯೋಗ ಚೀಟಿ ಹೊಂದಿಲ್ಲದ ಅರ್ಹ ಕುಟುಂಬಗಳನ್ನು ಗುರುತಿಸುವ, ಕುಟುಂಬದಲ್ಲಿ ಹೊಸ ಸದಸ್ಯರ ಸೇರ್ಪಡೆ ಹಾಗೂ ಮದುವೆಯಾಗಿ ಬೇರೆ ಪ್ರದೇಶಕ್ಕೆ ತೆರಳಿದ ಕುಟುಂಬದ ಸದಸ್ಯರ ಹೆಸರನ್ನು ಉದ್ಯೋಗ ಚೀಟಿಯಿಂದ ತೆಗೆದು ಹಾಕಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ನರೇಗಾ ಯೋಜನೆಯಡಿ ಕುಟುಂಬಗಳಿಗೆ ವಿತರಿಸಲಾದ ಉದ್ಯೋಗ ಚೀಟಿಗಳಲ್ಲಿ ಕೂಲಿಕಾರರ ಹೆಸರು, ವಯಸ್ಸು, ವರ್ಗ, ಬ್ಯಾಂಕ್ ಖಾತೆ ವಿವರಗಳು, ಆಧಾರ್ ಸಂಖ್ಯೆ, ಭಾವಚಿತ್ರ ಮೊದಲಾದ ವಿವರಗಳನ್ನು ನರೇಗಾ ಸಾಫ್ಟ್ ತಂತ್ರಾಂಶದಲ್ಲಿ ಸಮರ್ಪಕವಾಗಿ ದಾಖಲಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

       ಉದ್ಯೋಗ ಚೀಟಿ ಪರಿಷ್ಕರಣೆ ಅಭಿಯಾನದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾ ಮಟ್ಟದಲ್ಲಿ ಉಪಕಾರ್ಯದರ್ಶಿ(ಅಭಿವೃದ್ಧಿ), ಎಡಿಪಿಸಿ, ಜಿಲ್ಲಾ ಎಂ.ಐ.ಎಸ್. ಸಂಯೋಜಕರನ್ನೊಳಗೊಂಡ ತಂಡವನ್ನು ನೇಮಿಸಲಾಗಿದೆ. ಈ ತಂಡವು ಪ್ರತಿ ತಾಲ್ಲೂಕಿಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ಅಭಿಯಾನದ ಪ್ರಗತಿಯ ಮೇಲ್ವಿಚಾರಣೆ ಮಾಡಲಿದೆ. ಅದೇರೀತಿ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು(ಗ್ರಾ.ಉ.), ತಾಲ್ಲೂಕು ಎಂ.ಐ.ಎಸ್. ಸಂಯೋಜಕರನ್ನು ನೇಮಿಸಿದ್ದು, ಈ ತಂಡವು ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನದ ಪ್ರಗತಿಯ ಮೇಲ್ವಿಚಾರಣೆ ಮಾಡಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು ಈ ಅಭಿಯಾನವನ್ನು ಅನುಷ್ಟಾನಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

   ತಾಂಡಾಗಳಲ್ಲಿ ಸಮೀಕ್ಷೆ:

       ಜಿಲ್ಲೆಯ ಎಲ್ಲ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 201 ತಾಂಡಾಗಳಿದ್ದು, ಈ ತಾಂಡಾಗಳಲ್ಲಿ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮನೆ ಮನೆ ಸಮೀಕ್ಷೆ ನಡೆಸುತ್ತಿದ್ದಾರೆ. ತಾಂಡಗಳಲ್ಲಿರುವ ಅರ್ಹ ಅಕುಶಲ ಕಾರ್ಮಿಕರನ್ನು ಗುರುತಿಸಿ ಅವರಿಗೆ ಹೊಸ ಉದ್ಯೋಗ ಚೀಟಿಗಳನ್ನು ನೀಡಲಾಗುವುದು ಹಾಗೂ ಅವರ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ನರೇಗಾ ಸಾಫ್ಟ್ ತಂತ್ರಾಂಶದಲ್ಲಿ ದಾಖಲಿಸುವ ಕೆಲಸವನ್ನೂ ಮಾಡಲಾಗುತ್ತಿದೆ.

      ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಟಾನದಲ್ಲಿ ಜಿಲ್ಲೆಯು ಪ್ರಗತಿಯಯತ್ತ ಸಾಗುತ್ತಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಗಸ್ಟ್ 13ರ ವರೆಗೆ ಒಟ್ಟು 32,69,533 ಮಾನವ ದಿನಗಳ ಸೃಜನೆ ಮಾಡಲಾಗಿದ್ದು, ಈ ಪೈಕಿ ಮಧುಗಿರಿ ತಾಲ್ಲೂಕು ನರೇಗಾ ಕಾಮಗಾರಿಗಳ ಅನುಷ್ಟಾನದಲ್ಲಿ ಪ್ರಥಮ ಸ್ಥಾನದಲ್ಲಿದೆ.

      ಜಿಲ್ಲೆಯಲ್ಲಿ 2020-21ನೇ ಆರ್ಥಿಕ ಸಾಲಿನಲ್ಲಿ ಈವರೆಗೆ 13,200ಕ್ಕೂ ಹೆಚ್ಚು ಹೊಸ ಉದ್ಯೋಗ ಚೀಟಿಗಳನ್ನು ನೀಡಲಾಗಿದ್ದು, ಪ್ರಸ್ತುತ ಒಟ್ಟು 4.01 ಲಕ್ಷ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ.

   ಕಾಯಕ ಸಂಘಗಳ ರಚನೆ:

       ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಕಾರಣದಿಂದ ಪ್ರತಿ ಗ್ರಾಮಗಳಲ್ಲಿ ಕಾಯಕ ಬಂಧುಗಳನ್ನು ಹಾಗೂ ಕಾಯಕ ಸಂಘಗಳನ್ನು ರಚನೆ ಮಾಡಲಾಗುತ್ತಿದೆ. 4105ಕ್ಕೂ ಅಧಿಕ ಕಾಯಕ ಸಂಘಗಳನ್ನು ರಚನೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 22 times, 1 visits today)