ತುಮಕೂರು :

      ರಾಜ್ಯದಲ್ಲಿ ಅನುಷ್ಠಾನ ದಲ್ಲಿರುವ ಸ್ಮಾರ್ಟ್‍ಸಿಟಿಗಳಲ್ಲಿ ಉತ್ತಮ ಎಂಬ ಬಹುಮಾನ ಪಡೆದಿರುವ ತುಮಕೂರು ನಗರ ಮತ್ತಷ್ಟು ಸ್ಮಾರ್ಟ್ ಆಗಲು ನಾಗರಿಕರು, ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಕೈಜೋಡಿಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಕರೆ ನೀಡಿದ್ದಾರೆ.

      ಸಿದ್ದಗಂಗಾ ಮಠದಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್ ಅವರ 2 ವರ್ಷದ ಸಾಧನೆ ಅಭಿವೃದ್ದಿ ಪಥದತ್ತ ತುಮಕೂರು ಎಂಬ ವೆಬ್‍ಸೈಟ್ ಬಿಡುಗಡೆಗೊಳಿಸಿ ಮಾತನಾಡುತಿದ್ದ ಅವರು,ನಾಗರಿಕರು ಸ್ಮಾರ್ಟ್ ಆಗುವ ಮೂಲಕ ಈಗಾಗಲೇ ನಡೆದಿರುವ ಅಭಿವೃದ್ದಿ ಕಾರ್ಯಗಳು ಜನರ ಉಪಯೋಗಕ್ಕೆ ಬರುವಂತೆ ಮಾಡಬೇಕಿದೆ ಎಂದರು.

      ಕಳೆದ ಎರಡು ವರ್ಷಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳಲ್ಲದೆ, ಸರಕಾರದ ಅನು ದಾನವನ್ನು ಬಳಸಿ ಶಾಸಕರು, ಕುಡಿಯುವ ನೀರು, ರಸ್ತೆ, ಚರಂಡಿ,ವಿದ್ಯುತ್ ದ್ವೀಪಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈಗಾಗಲೇ ಕುಡಿಯುವ ನೀರಿಗಾಗಿ ತುಮಕೂರಿನ ಅತಿ ದೊಡ್ಡ ಕೆರೆ ಅಮಾನಿಕೆರೆಯನ್ನು ತುಂಬಿಸುವ ಕೆಲಸ ನಡೆದಿದೆ. ಇದೇ ರೀತಿ ಗಂಗಸಂದ್ರ, ಮರಳೂರು ಕೆರೆಗಳನ್ನು ಮುಂದಿನ ದಿನಗಳಲ್ಲಿ ತುಂಬಿಸುವ ಗುರಿ ಹೊಂದಿದ್ದು,ಇದಕ್ಕಾಗಿ ಶಾಸಕರಾದ ಜಿ.ಬಿ.ಜೋತಿಗಣೇಶ್,ಸಂಸದರಾದ ಜಿ.ಎಸ್.ಬಸವರಾಜು ಅವರುಗಳನ್ನು ಅಭಿನಂದಿಸುವುದಾಗಿ ಸ್ವಾಮೀಜಿ ನುಡಿದರು.

     ಶಾಸಕರು ನಗರದ ಅಭಿವೃದ್ದಿಯ ಜೊತೆ ಜೊತೆಗೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಂಗನವಾಡಿ,ಶಾಲಾ,ಕಾಲೇಜುಗಳಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶ್ರೀಸಿದ್ದಲಿಂಗಸ್ವಾಮೀಜಿ ಸಲಹೆ ನೀಡಿದರು.

      ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ತುಮಕೂರು ನಗರ ಶಾಸಕರು ರಸ್ತೆ, ಕುಡಿಯುವ ನೀರು, ಚರಂಡಿ,ಆಟದ ಮೈದಾನ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು, ತುಮಕೂರು ನಗರವನ್ನು ಆದರ್ಶ ನಗರವನ್ನಾಗಿಸಲು ಪಣ ತೊಟ್ಟಿದ್ದಾರೆ. ಇವರ ಈ ಕಾರ್ಯಗಳು ಜನರಿಗೆ ಪರಿಚಯವಾಗಬೇಕು ಎಂಬ ಉದ್ದೇಶದಿಂದ ತುಮಕೂರು ನಗರದಲ್ಲಿ ಅಭಿವೃದ್ದಿ ಪರ್ವ, ಎರಡು ವರ್ಷಗಳ ಸಾಧನೆ ಎಂಬ ಕಿರು ಚಿತ್ರ ತಯಾರಿಸಿದ್ದು, ಅಕ್ಟೋಬರ್ 1 ರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಜನರಿಗೆ ನೋಡಲು ಸಿಗಲಿದೆ ಎಂದರು.
ಈ ವೇಳೆ ಹೊನ್ನುಡಿಕೆ ಲೋಕೇಶ್, ನೇರಳಾಪುರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

(Visited 14 times, 1 visits today)