ತುಮಕೂರು : 

      ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಬಹು ಆಯಾಮಗಳನ್ನು ಹೊಂದಿದ್ದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಯುಗವೊಂದನ್ನು ಆರಂಭಿಸಲಿದೆ. ಅದು ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಿದೆ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ತಿಳಿಸಿದರು.

       ಶ್ರೀ ಸಿದ್ಧಗಂಗಾ ಸಂಜೆ ಕಾಲೇಜು ಹಾಗೂ ಆಕ್ಟ್-ಟ್ಯಾಕಲ್ ಎಜುಕೇಶನಲ್ ಸೆಂಟರ್ ಜಂಟಿಯಾಗಿ ಏರ್ಪಡಿಸಿದ್ದ `ಹೊಸ ಶಿಕ್ಷಣ ನೀತಿಯ ಸಾಧ್ಯಾಸಾಧ್ಯತೆಗಳು’ ಕುರಿತ ಎರಡು ದಿನಗಳ ವೆಬಿನಾರ್ ಅನ್ನು ಉದ್ಘಾಟಿಸಿ ಮಾತನಾಡಿದರು.

      ಹೊಸ ಶಿಕ್ಷಣ ನೀತಿಯು ಆರನೇ ತರಗತಿಯಿಂದಲೇ ವಿದ್ಯಾರ್ಥಿಗಳ ಕೌಶಲವನ್ನು ಅಭಿವೃದ್ಧಿಪಡಿಸಲು ವಿಶೇಷ ಕ್ರಮಗಳನ್ನು ಸೂಚಿಸಿದೆ. ವಿದ್ಯಾರ್ಥಿ ಒಂಭತ್ತನೇ ತರಗತಿ ತಲುಪಿದಾಗಲೇ ತನಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಇದೊಂದು ಮಹತ್ವದ ಹೆಜ್ಜೆ ಎಂದರು.

      ಹೊಸ ಶಿಕ್ಷಣ ನೀತಿಯು ಮೂರು ವರ್ಷದ ಪೂರ್ವ ಪ್ರಾಥಮಿಕ ಹಾಗೂ ಒಂದನೇ ಮತ್ತು ಎರಡನೇ ತರಗತಿಗಳನ್ನು ಒಟ್ಟಾಗಿ ತಳಹದಿ ಹಂತದ ಕಲಿಕೆ ಎಂದು ಪರಿಗಣಿಸಿರುವುದರಿಂದ ಪೂರ್ವಪ್ರಾಥಮಿಕ ಹಂತವೂ ಇನ್ನು ಮುಂದೆ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ಭಾಗವಾಗಲಿದೆ ಎಂದರು.

      ಉನ್ನತ ಶಿಕ್ಷಣದಲ್ಲಿ ಹೊಸ ಶಿಕ್ಷಣ ನೀತಿಯು ಮಾಡಿರುವ ಬದಲಾವಣೆ ಮಹತ್ವದ್ದು. ಇನ್ನು ಮುಂದೆ ಬಿಎ, ಬಿಎಸ್ಸಿ, ಬಿಕಾಂ ಎಂಬ ವರ್ಗೀಕರಣಗಳು ಮರೆಯಾಗಿ ಪದವಿ ಹಂತದಲ್ಲಿ ವಿದ್ಯಾರ್ಥಿ ತನಗೆ ಬೇಕಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ದೊರೆಯಲಿದೆ. ಇದೊಂದು ಕ್ರಾಂತಿಕಾರಕ ಹೆಜ್ಜೆ ಎಂದರು.

     ಬಹುಶಿಸ್ತೀಯ ಸಂಶೋಧನೆಗೆ ಹೆಚ್ಚಿನ ಮಹತ್ವ ಲಭಿಸಲಿದೆ. ತಾನು ಸ್ನಾತಕೋತ್ತರ ಓದಿದ ವಿಷಯದಲ್ಲೇ ಸಂಶೋಧನೆ ನಡೆಸಬೇಕೆಂಬ ನಿಯಮಗಳಿರುವುದಿಲ್ಲ. ಜ್ಞಾನಪ್ರಸಾರದ ಜೊತೆಗೆ ಜ್ಞಾನದ ಸೃಷ್ಟಿಗೂ ಆದ್ಯತೆ ದೊರೆಯಲಿದೆ ಎಂದರು.

      `ಹೊಸ ಶಿಕ್ಷಣ ನೀತಿ: ಸಾಧ್ಯತೆಗಳು ಮತ್ತು ಸವಾಲುಗಳು’ ಕುರಿತು ಡಾ. ಎಚ್. ಎಸ್. ನಿರಂಜನಾರಾಧ್ಯ, `ಪ್ರಾಥಮಿಕ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು’ ಕುರಿತು ನಂದನಾರಾಜ್ ಎಚ್. ಎನ್., `ಶಿಕ್ಷಕ ಶಿಕ್ಷಣದ ಆಯಾಮಗಳು ಮತ್ತು ಸವಾಲುಗಳು’ ಕುರಿತು ಡಾ. ಜ್ಯೋತಿ ಬಿ. ಪಂತ್, `ತಂತ್ರಜ್ಞಾನ ಆನ್ವಯಿಕತೆಯ ಸಾಧ್ಯತೆ ಮತ್ತು ಸವಾಲುಗಳು’ ಕುರಿತು ಸಿಬಂತಿ ಪದ್ಮನಾಭ ಕೆ. ವಿ., `ಭಾರತೀಯ ಭಾಷೆಗಳು, ಕಲೆ ಮತ್ತು ಸಂಸ್ಕೃತಿಯ ಪ್ರವರ್ಧನೆ’ ಕುರಿತು ಪ್ರೊ. ಯತೀಶ್ ಎಚ್. ವಿ. ವಿಷಯಗಳನ್ನು ಮಂಡಿಸಿದರು.

      ಶ್ರೀ ಸಿದ್ಧಗಂಗಾ ಸಂಜೆ ಕಾಲೇಜು ಪ್ರಾಂಶುಪಾಲರಾದ ರತ್ನಮಂಜರಿ ಕೆ. ಜಿ., ಸಂಘಟನಾ ಸಮಿತಿಯ ಎಸ್. ಕುಮಾರಸ್ವಾಮಿ, ಮಲ್ಲೇಶ್‍ಬಾಬು ಎಸ್., ರವಿಶಂಕರ್ ಎಸ್., ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ರಾಮಲಿಂಗಾರೆಡ್ಡಿ ಎಸ್. ಮತ್ತಿತರರು ಭಾಗವಹಿಸಿದರು.

(Visited 21 times, 1 visits today)