ಕೊರಟಗೆರೆ:

     ಬೆಂಗಳೂರಿನ ರಿಯಲ್ ಎಸ್ಟೇಟ್ ಮಾಫೀಯಾದ ಏಜೆಂಟ್‍ಗಳಿಗೆ ಕೊರಟಗೆರೆ ಕ್ಷೇತ್ರದ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿವರ್ಗ ಹಣದ ದುರಾಸೆಯಿಂದ ಸಹಕಾರದ ಜೊತೆ ಪರೋಕ್ಷವಾಗಿ ಬೆಂಬಲಿಸಿ ಸ್ಥಳೀಯ ರೈತರ ಮೇಲೆ ವಿನಾಕಾರಣ ದಬ್ಬಾಳಿಕೆ ಮಾಡುತ್ತೀದ್ದಾರೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಆನಂದಪಟೇಲ್ ಆರೋಪ ಮಾಡಿದರು.

      ತಾಲೂಕಿನ ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾಪಂ ವ್ಯಾಪ್ತಿಯ ಅಕ್ಕಾಜಿಹಳ್ಳಿ ಗ್ರಾಮದ ದಾಳಿನರಸಿಂಹ ಮತ್ತು ಕಾಮಯ್ಯ ಎಂಬ ರೈತರ ಸರ್ವೆ ನಂ.33ರ ಜಮೀನಿಗೆ ಕೊರಟಗೆರೆ ಘಟಕದ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ಜೊತೆ ಸೋಮವಾರ ಬೇಟಿ ನೀಡಿದ ವೇಳೆ ಮಾತನಾಡಿದರು.   

      30ವರ್ಷದಿಂದ ಉಳು ಮೆ ಮಾಡು ತ್ತಿರುವ ಸ್ಥಳೀ ಯ ರೈತರಿಗೆ ಅನ್ಯಾಯ ಮಾಡಿ ಬೆಂಗಳೂರಿನ ಒಂದೇ ಕುಟುಂಬದ 4ಜನ ರೀಯಲ್ ಎಸ್ಟೇಟ್ ಉದ್ಯಮಿಗಳಿಗೆ ಕೊರಟಗೆರೆ ಆಡಳಿತ 8ಎಕರೇ ಜಮೀನು ಮಾರಾಟ ಮಾಡಿದೆ. ಜಮೀನಿನ ದಾಖಲೆ ಕೇಳಿದರೇ ಹಾರಿಕೆ ಉತ್ತರ ನೀಡುತ್ತಾರೆ. ನಕಲಿ ಸಾಗುವಳಿ ಚೀಟಿಗಳ ಪಟ್ಟಿಯನ್ನು ರೈತಸಂಘ ಬಿಡುಗಡೆ ಮಾಡಲಿದೆ ಎಂದು ಆರೋಪ ಮಾಡಿದರು.

      ರೈತಸಂಘದ ಕೊರಟಗೆರೆ ಅಧ್ಯಕ್ಷ ಸಿದ್ದರಾಜು ಮಾತನಾಡಿ ಮಧುಗಿರಿ ಎಸಿ ಮತ್ತು ಕೊರಟಗೆರೆ ತಹಶೀಲ್ದಾರ್ ರೈತರಿಗೆ ನೀಡಿದ ಭರವಸೆ ಹುಸಿಯಾಗಿದೆ. ರೈತರ ಪರವಾಗಿ ಕೆಲಸ ಮಾಡಬೇಕಾದ ಕೊರಟಗೆರೆ ಕಂದಾಯ ಮತ್ತು ಪೊಲೀಸ್ ಇಲಾಖೆ ಉದ್ಯಮಿಗಳ ಪರವಾಗಿ ಮಾಡುತ್ತೀದೆ. ರೈತರು ಬಿತ್ತನೆ ಮಾಡಿದ ಬೆಳೆಯನ್ನು ನಾಶಪಡಿಸಿ ರಾತ್ರೋರಾತ್ರಿ 20ಲಕ್ಷ ಮೌಲ್ಯದ ಕೃತಕ ಮನೆ ನಿರ್ಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಅಕ್ಕಾಜಿಹಳ್ಳಿ ರೈತ ದಾಳಿನರಸಿಂಹ ಮಾತನಾಡಿ ನಾವು 1991-92ರಲ್ಲಿ ಅರ್ಜಿ ಸಲ್ಲಿಸಿ 2002-03ರಲ್ಲಿ ಕಿಮ್ಮತ್ತು ಶುಲ್ಕ ಕಟ್ಟಿ 30ವರ್ಷದಿಂದ ಉಳುಮೆ ಮಾಡುತ್ತಿದ್ದೇವೆ. ನಮಗೆ ಮಂಜೂರಾದ ಸಾಗುವಳಿ ಚೀಟಿ ನೀಡದೇ ಹಣಕ್ಕಾಗಿ ಬೆಂಗಳೂರು ಉದ್ಯಮಿಗಳಿಗೆ ನೀಡಿದ್ದಾರೆ. ನಾವು ಬಿತ್ತನೆ ಮಾಡಿದ್ದ 1ಲಕ್ಷ ಮೌಲ್ಯದ ಮುಸುಕಿನ ಜೋಳ ಮತ್ತು ಶೇಂಗಾ ಬೆಳೆಯನ್ನು ರಾತ್ರೋರಾತ್ರಿ ನಾಶ ಪಡಿಸಲಾಗಿದೆ. ನಾವು ಜಮೀನಿಗೆ ತೆರಳಿದರೇ ಪೊಲೀಸರು ಕ್ರಿಮಿನಲ್ ಪ್ರಕರಣ ಹಾಕುವ ಬೆದರಿಕೆ ಹಾಕುತ್ತಾರೆ ಎಂದರು.

      ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಕಾರ್ಯದರ್ಶಿ ರುದ್ರೇಶ್‍ಗೌಡ, ಮುಖಂಡರಾದ ಮಂಜುನಾಥ, ಕಾಂತರಾಜು, ಲಕ್ಷ್ಮನಾಯ್ಕ, ದಾಸಗಿರಿಯಪ್ಪ, ಶಿವಕುಮಾರ್, ರಂಗರಾಜು, ಗೋವಿಂದನಾಯ್ಕ, ನಂಜುಂಡಪ್ಪ, ರಾಜು, ದಾಳಿನರಸಿಂಹಯ್ಯ, ಕಾಮಯ್ಯ ಇದ್ದರು.

(Visited 10 times, 1 visits today)