ತುಮಕೂರು:

      ಪುರುಷ ಸಂತಾನನಿರೋಧ ಶಸ್ತ್ರಚಿಕಿತ್ಸೆಯು ಸರಳ ಹಾಗೂ ಸುರಕ್ಷಿತ ವಿಧಾನವಾಗಿದ್ದು, ಯಾವುದೇ ಭಯವಿಲ್ಲದೆ ಪುರುಷರು ಈ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದೆಂದು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಹಿಮ ತಿಳಿಸಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿಂದು ಹಮ್ಮಿಕೊಂಡಿದ್ದ ಎನ್‍ಎಸ್‍ವಿ(ನೋಸ್ಕಾಲ್‍ಪೆಲ್ ವ್ಯಾಸೆಕ್ಟಮಿ) ಪಾಕ್ಷಿಕ ಆಚರಣೆ(ನವೆಂಬರ್ 21ರಿಂದ ಡಿಸೆಂಬರ್ 4) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯು ಗರ್ಭಧಾರಣೆ, ಹೆರಿಗೆ, ಬಾಣಂತನಗಳಿಂದ ಈಗಾಗಲೇ ನೋವು ಅನುಭವಿಸಿರುತ್ತಾಳೆ. ಮತ್ತೊಮ್ಮೆ ಉದರದರ್ಶಕ/ಟುಬೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಲು ವ್ಯಾಸೆಕ್ಟಮಿ ಸುಲಭೋಪಾಯವಾಗಿದೆ ಎಂದರು.

      ಕುಟುಂಬ ಯೋಜನೆಗಾಗಿ ಮಹಿಳೆಯರು ಒಳಗಾಗುವ ಟುಬೆಕ್ಟಮಿ ಶಸ್ತ್ರಚಿಕಿತ್ಸೆಯಲ್ಲಿ ಉದರವನ್ನು ಗಾಯಗೊಳಿಸಿ ಹೊಲಿಗೆ ಹಾಕಲೇಬೇಕಾಗುತ್ತದೆ. ಆದರೆ ಪುರುಷರು ಒಳಗಾಗುವ ವ್ಯಾಸಕ್ಟಮಿಯಲ್ಲಿ ಗಾಯವಿಲ್ಲದ ಹೊಲಿಗೆ ಇಲ್ಲದ ಸಂತಾನನಿರೋಧ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾಗಿದೆ. ಅರಿವಿನ ಕೊರತೆ ಇರುವುದರಿಂದ ಈ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಪುರುಷರು ಮುಂದೆ ಬರುತ್ತಿಲ್ಲ. ಸಂತಾನ ನಿಯಂತ್ರಿಸಲು ಪುರುಷರಿಗೆ ಮಾಡುವ ಎನ್‍ಎಸ್‍ವಿ ಶಸ್ತ್ರಚಿಕಿತ್ಸಾ ವಿಧಾನಕ್ಕೆ 5 ರಿಂದ 10 ನಿಮಿಷ ಮಾತ್ರ ತಗಲುತ್ತದೆ. ಶಸ್ತ್ರಚಿಕಿತ್ಸೆಯಾದ 30 ನಿಮಿಷಗಳ ನಂತರ ಮನೆಗೆ ಹೋಗಬಹುದಾಗಿದೆ. ಈ ಚಿಕಿತ್ಸೆಯಿಂದ ಯಾವುದೇ ರೀತಿಯ ದೈಹಿಕ ನಿಶ್ಯಕ್ತಿ, ಅಡ್ಡಪರಿಣಾಮಗಳು ಉಂಟಾಗುವುದಿಲ್ಲವೆಂದು ತಿಳಿಸಿದರು.

      ಜಿಲ್ಲಾಸ್ಪತ್ರೆಯ ಮೂತ್ರರೋಗತಜ್ಞ ಹಾಗೂ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ: ರಮೇಶ್ ಮಾತನಾಡಿ, ಇನ್ನು ಮುಂದೆ ಮಕ್ಕಳು ಬೇಡವೆಂದು ನಿರ್ಧರಿಸಿದ ಪುರುಷರು ಸ್ವಯಂ ಇಚ್ಛೆಯಿಂದ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕು. ಎನ್‍ಎಸ್‍ವಿ ಶಸ್ತ್ರಚಿಕಿತ್ಸೆಗೆ ಒಳಗಾದ ಪುರುಷರಲ್ಲಿ ಲೈಂಗಿಕ ಸಾಮಥ್ರ್ಯ ಕಡಿಮೆಯಾಗುವುದಿಲ್ಲ ಹಾಗೂ ಪುರುಷತ್ವಕ್ಕೆ ಹಾನಿಯುಂಟಾಗುವುದಿಲ್ಲ. ಈ ಎನ್‍ಎಸ್‍ವಿ ಶಸ್ತ್ರಚಿಕಿತ್ಸೆಯು ಶಾಶ್ವತ ವಿಧಾನವಾದರೂ ಪುನರ್ ಬದಲಾಯಿಸಲು ಸಾಧ್ಯವಿದೆ. ಕುಟುಂಬ ಯೋಜನೆಯಲ್ಲಿ ಪುರುಷರ ಸಹಭಾಗಿತ್ವದಿಂದ ಸಂತೋಷದ ಜೀವನಕ್ಕೆ ದಾರಿಯಾಗಲಿದೆ. ಈ ನಿಟ್ಟಿನಲ್ಲಿ ಪುರುಷರು ಯಾವುದೇ ಆತಂಕವಿಲ್ಲದೆ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದೆಂದು ಅವರು ತಿಳಿಸಿದರು.

      ತಾಲ್ಲೂಕು ಆರೋಗ್ಯಾಧಿಕಾರಿ ಡಾ: ಶರತ್‍ಚಂದ್ರ ಮಾತನಾಡಿ, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಯು ಸುರಕ್ಷಿತ ವಿಧಾನವೆಂದು ಪುರುಷರಿಗೆ ಅರಿವು ಮೂಡಿಸಿ ಮನಃ ಪರಿವರ್ತನೆ ಮಾಡಬೇಕೆಂದರಲ್ಲದೆ, ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಪುರುಷರನ್ನು ಕರೆತಂದವರಿಗೆ 200 ರೂ.ಗಳ ಪ್ರೇರೇಪಣಾ ಧನ ಹಾಗೂ ಚಿಕಿತ್ಸೆಗೆ ಒಳಗಾದವರಿಗೆ 1100 ರೂ.ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಪ್ಪ, ಉಪ ಆರೋಗ್ಯ ಶಿಕ್ಷಣಾಧಿಕಾರಿ ರಾಜಣ್ಣ, ಜಯಣ್ಣ, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಮತ್ತಿತರರು ಉಪಸ್ಥಿತರಿದ್ದರು.

(Visited 17 times, 1 visits today)