ತುಮಕೂರು : 

     ತುಮಕೂರು ನಗರದ ಪ್ರಮುಖ ರಸ್ತೆಗಳನ್ನು ಸ್ಮಾರ್ಟಸಿಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಿ, ಟಾರ್ ಹಾಕುವ ಕೆಲಸ ಶೇ 80ರಷ್ಟು ಮುಕ್ತಾಯಗೊಂಡಿದ್ದು, ನಗರದ ಹಲವು ದಿನಗಳ ಸಮಸ್ಯೆಗೆ ತೆರೆ ಬಿಳಲಿದೆ ಎಂದು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿ ದ್ದಾರೆ.

      ನಗರದ ಬಿ.ಹೆಚ್.ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಹಾವೀರ ರಸ್ತೆಗೆ ಡಾಂಬರ್ ಹಾಕುವ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡುತಿದ್ದ ಅವರು,ಅಶೋಕ ರಸ್ತೆ,ಎಂ.ಜಿ.ರಸ್ತೆ,ರೈಲ್ವೆ ನಿಲ್ದಾಣ ರಸ್ತೆ,ಎಸ್.ಎಸ್.ಪುರಂನ ಮುಖ್ಯರಸ್ತೆ ಜೊತೆಗೆ, ಸಂಪರ್ಕ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳು ಪೂರ್ಣಗೊಂಡಿವೆ.ಸಣ್ಣ,ಪುಟ್ಟ ಕೆಲಸಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಿ, ತಕ್ಷಣವೇ ಜನಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.

       ಕಳೆದ ಒಂದು ವರ್ಷಗಳಿಂದ 15ನೇ ವಾರ್ಡು, 16ನೇ ವಾರ್ಡು ಹಾಗೂ ಇನ್ನಿತರ ವಾರ್ಡುಗಳಲ್ಲಿ ರಸ್ತೆ, ಕುಡಿಯುವ ನೀರು, ಡಾಂಬರೀಕರಣ,ಗ್ಯಾಸ್ ಲೈನ್ ಸೇರಿದಂತೆ ಹಲವು ಅಭಿವೃದ್ದಿ ಕಾಮಗಾರಿಗಳು ಸ್ಮಾರ್ಟ್‍ಸಿಟಿಯಿಂದ ನಡೆಯುತ್ತಿದೆ. ಜನರಿಗೆ ಕಾಮಗಾರಿಗಳು ನಡೆಯುವ ಸಂದರ್ಬದಲ್ಲಿ ತೊಂದರೆಗಳಾದರೂ ಸಹಿಸಿಕೊಂಡು ಸಹಕಾರ ನೀಡಿದ್ದಾರೆ. ಇದಕ್ಕಾಗಿ ನಗರದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಜೋತಿಗಣೇಶ್ ತಿಳಿಸಿದರು.

      ತುಮಕೂರು ನಗರಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಮ್ಮ ಮಾತನಾಡಿ,ಸ್ಮಾರ್ಟ್‍ಸಿಟಿಯಿಂದ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿ ಕೊನೆಯ ಹಂತದಲ್ಲಿದೆ.ಸ್ಮಾರ್ಟ್‍ಸಿಟಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲಾಗಿದೆ.ಮಳೆಗಾಲದಿಂದ ಕೊಂಚ ವಿಳಂಬವಾಗಿತ್ತು.ಮುಂದಿನ ದಿನಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ವೇಗ ಪಡೆದುಕೊಳ್ಳಲಿದೆ ಎಂದರು. 15ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್, ನಮ್ಮ ವಾರ್ಡಿನಲ್ಲಿ ತ್ವರಿತವಾಗಿ ಕಾಮಗಾರಿ ನಡೆಸಲು ಸಹಕಾರ ನೀಡಿದ ಶಾಸಕರು, ಆಯುಕ್ತರು ಮತ್ತು ಸ್ಮಾರ್ಟಸಿಟಿಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು

     ಈ ವೇಳೆ ಪಾಲಿಕೆ ಮತ್ತು ಸ್ಮಾರ್ಟಸಿಟಿ ಅಧಿಕಾರಿಗಳು,ಗುತ್ತಿಗೆದಾರರಾದ ವಿಜಯಾನಂದ ಉಪಸ್ಥಿತರಿದ್ದರು.

(Visited 16 times, 1 visits today)