ತುಮಕೂರು:

      ಕರ್ನಾಟಕ ರಾಜ್ಯವೊಂದರಲ್ಲೇ ಶೇ.22.8ರಷ್ಟು ಮಂದಿ ತಂಬಾಕು ಚಟಕ್ಕೆ ದಾಸರಾಗಿದ್ದಾರೆ ಎಂದು ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (IPಊ)ನ ಡಾ. ಚಂದ್ರಶೇಖರ್ ಕೊಟಗಿ ಆತಂಕ ವ್ಯಕ್ತಪಡಿಸಿದರು.

     ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (IPಊ), ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಹಯೋಗದಲ್ಲಿ ಕುಣಿಗಲ್ ತಾಲೂಕಿನಲ್ಲಿಂದು ವಿವಿಧ ಶಾಲೆಗಳ ಮುಖ್ಯೋಪಧ್ಯಾಯರು ಹಾಗು ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳಿಗಾಗಿ “ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ” ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.

      ತಂಬಾಕು ದುಷ್ಚಟಕ್ಕೆ ವಯಸ್ಕರಲ್ಲದೆ ಮಕ್ಕಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತಲ ಪ್ರದೇಶಗಳನ್ನು ತಂಬಾಕು ಮುಕ್ತ ಗೊಳಿಸುವ ಉದ್ದೇಶದಿಂದ ಹಾಗೂ ಭವಿಷ್ಯದ ಯುವಜನತೆಯನ್ನು ಈ ದುಷ್ಚಟದಿಂದ ದೂರವಿಡಲು ಐಪಿಎಚ್ ಸಂಸ್ಥೆಯು ತುಮಕೂರು ಜಿಲ್ಲೆಯನ್ನು ಆಯ್ದುಕೊಂಡು “ತಂಬಾಕು ಮುಕ್ತ ಶಾಲೆ” ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈ ಅಭಿಯಾನದಡಿ ಮೊದಲ ಹಂತದಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳ ಆಯ್ದ 15 ಶಾಲೆಗಳನ್ನು ತಂಬಾಕು ಮುಕ್ತ ಮಾಡಲು ಉದ್ದೇಶಿಸಲಾಗಿದೆ ಎಂದರು.

     ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ರವಿ ಪ್ರಕಾಶ್, ಐ.ಪಿ.ಹೆಚ್. ಸಂಸ್ಥೆಯ ಅಚ್ಯುತ ಎನ್.ಜಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ಹರೀಶ್ ಕೆ.ಎಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡರು.

ಈ ಕಾರ್ಯಾಗಾರವನ್ನು ಗುಬ್ಬಿ ತಾಲೂಕಿನಲ್ಲಿಯೂ ಹಮ್ಮಿಕೊಳ್ಳಲಾಗಿತ್ತು. ಎರಡೂ ತಾಲ್ಲೂಕುಗಳ ವಿವಿಧ ಶಾಲೆಗಳ 80ಕ್ಕೂ ಹೆಚ್ಚು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳು ಭಾಗವಹಿಸಿದ್ದರು.

 

(Visited 16 times, 1 visits today)