ಗುಬ್ಬಿ:

     ಹವಾಗುಣಕ್ಕೆ ತಕ್ಕ ಬೇಸಾಯ ಮಾಡುವ ಬಗ್ಗೆ ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮ ಆಯ್ಕೆ ಮಾಡಿ ಇಡೀ ದಿನ ರೈತರೊಂದಿಗೆ ಸಂವಾದ ನಡೆಸಿ ಕೃಷಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರವಾಸ ಆರಂಭಿಸಿ ಮಂಡ್ಯ ಮತ್ತು ಕೋಲಾರ ಜಿಲ್ಲೆ ಪ್ರವಾಸ ಮುಗಿಸಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

      ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಕೃಷಿ ಸಂಪರ್ಕ ಕೇಂದ್ರ ನೂತನ ಕಟ್ಟಡ ಉದ್ಘಾಟನೆ ಮತ್ತು ಏಳು ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷರು. ಉಪಾಧ್ಯಕ್ಷರು, ಸದಸ್ಯರಿಗೆ ಸನ್ಮಾನ ಹಾಗೂ ಬಿಜೆಪಿ ಕಾರ್ಯರ್ತರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಹಿರಿಯರ ಆಲೋಚನೆಗಳು ಇಂದಿಗೂ ಪ್ರಸ್ತುತವಾಗಿದೆ. ನೀರಿನ ಲಭ್ಯತೆ ಜತೆಗೆ ಮಣ್ಣಿನ ಗುಣ ಅರಿತು ಬೇಸಾಯ ಮಾಡುವ ಕಲೆ ನಮ್ಮ ಹಿಂದಿನ ಸಂಪ್ರದಾಯದಲ್ಲಿ ಅಡಗಿದೆ. ಇಂತಹ ಸಂದರ್ಭದಲ್ಲಿ ಇಸ್ರೇಲ್ ಮಾದರಿ ಕೃಷಿ ನಮಗೆ ಅವಶ್ಯವಿಲ್ಲ ಎಂದರು.

      ಕೃಷಿಕನ ದುಡಿಮೆಗೆ ಬೆಲೆ ಕಟ್ಟಲಾಗದು ಎಂಬ ಮಾತಿದೆ. ಆದರೆ ರೈತನ ಕೃಷಿ ಉತ್ಪನ್ನಗಳಿಗೆ ಬೆಲೆ ಕಟ್ಟುವ ಅರ್ಹತೆ ಕಳೆದುಕೊಳ್ಳುತ್ತಿದ್ದಾನೆ. ಈ ನಿಟ್ಟಿನಲ್ಲಿ ಕೃಷಿಕನೇ ಬೆಳೆಗೆ ಮಾರುಕಟ್ಟೆ ನಿರ್ಮಿಸಿಕೊಳ್ಳುವ ಕೆಲಸವನ್ನು ಸ್ಥಳೀಯವಾಗಿ ನಡೆಸಲು ಯೋಚಿಸಲಾಗಿದೆ. ಈ ಕೆಲಸವನ್ನು ವಿಎಸ್‍ಎಸ್‍ಎನ್ ಮೂಲಕ ಕೂಡ ನಡೆಸಬಹುದಾಗಿದೆ ಎಂದ ಅವರು ಜಿಲ್ಲೆಯಲ್ಲಿ ಈ ಬಾರಿ ಕೃಷಿ ನಡೆಸಲು ಅನುವು ಮಾಡಿಕೊಟ್ಟ ಕೀರ್ತಿ ಜಿಲ್ಲಾ ಸಚಿವರಾದ ಮಾಧುಸ್ವಾಮಿ ಅವರಿಗೆ ಸಲ್ಲಬೇಕಿದೆ. ಎಲ್ಲಾ ಕೆರೆಗಳಿಗೂ ಹೇಮೆ ಹರಿಸುವಲ್ಲಿ ಸಫಲರಾದ ಅವರು ಹಾಸನ ಜಿಲ್ಲೆಯಿಂದ ತುಮಕೂರಿಗೆ ನೀರು ಹರಿಸುವುದು ಸುಲಭದ ಮಾತಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ ತುರುವೇಕೆರೆ ಕ್ಷೇತ್ರಕ್ಕೆ ಸೇರಿದ ಗುಬ್ಬಿ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರ ಆಡಳಿತ ತರುವ ಮಾತು ಉಳಿಸಿಕೊಂಡ ಶಾಸಕ ಜಯರಾಮ್ ಕೆರೆಗೆ ನೀರು ಹರಿಸುವಲ್ಲಿ ಬದ್ದತೆ ತೋರಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲವಾಗಿ ಸ್ಥಳೀಯ ಆಡಳಿತ ಚುಕ್ಕಾಣಿ ಬಿಜೆಪಿಗೆ ಒಲಿದಿದೆ. ಆದರೆ ಅಧಿಕಾರಕ್ಕೆ ಬಂದ ಬೆಂಬಲಿಗರು ಶಾಸಕರು ಮತ್ತು ಪಕ್ಷದ ಘನತೆಗೆ ತಕ್ಕಂತೆ ನಡೆದು ಮುಂದಿನ ಅಭಿವೃದ್ದಿ ಕೆಲಸ ಮಾಡಬೇಕು. ಸಭೆಗಳಲ್ಲಿ ನಿರ್ಣಯವನ್ನು ಒಮ್ಮತದಲ್ಲಿ ಮಾಡಿ ಶಾಸಕರ ಮರ್ಯಾದೆ ಕಾಪಾಡಬೇಕು ಎಂದು ಪಾಠ ಹೇಳಿದ ಅವರು ಜಿಲ್ಲೆಯನ್ನೇ ಹಿಡಿತಕ್ಕೆ ಪಡೆಯುವ ಚಿತ್ರಣ ಬಿಂಬಿಸಿದ್ದ ನಾಯಕರ ಆಡಳಿತಕ್ಕೆ ಅಂತ್ಯ ಕಾಣಲಿದೆ ಎಂದು ಮಾರ್ಮಿಕವಾಗಿ ನುಡಿದರು.

      ಬೇಡಿಕೆ ಮತ್ತು ಅಗತ್ಯತೆ ಎಂಬ ಎರಡಂಶದಲ್ಲಿ ಅತ್ಯಗತ್ಯತೆ ಬಗ್ಗೆ ಮೊದಲು ಆದ್ಯತೆ ನೀಡಬೇಕು. ಬೇಡಿಕೆಗಳನ್ನು ಪರಿಶೀಲಿಸಿ ನಡೆಸಬೇಕು.  ಈಗಾಗಲೇ ರಾಜ್ಯದ 41 ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತ ಕಂಡು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಈ ಪೈಕಿ ನಮ್ಮ ಜಿಲ್ಲೆಯ 6 ತಾಲ್ಲೂಕು ಸೇರಿರುವುದು ವಿಷಾದಕರ. ಈ ನಿಟ್ಟಿನಲ್ಲಿ ಹೇಮೆ ಹರಿಸುವಲ್ಲಿ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡುವ ಜತೆಗೆ ಹಂಚಿಕೆ ವಿಚಾರದಲ್ಲಿ ಎಲ್ಲಿಯೋ ವ್ಯತ್ಯಾಸ ಮಾಡದೆ ನೀರು ಹರಿಸಲಾಗಿದೆ. ಅದರ ಪರಿಣಾಮ ಈ ಬಾರಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದ ಅವರು ಗುಬ್ಬಿ ತಾಲ್ಲೂಕಿನ ಬಿಕ್ಕೇಗುಡ್ಡ ನೀರಾವರಿ ಯೋಜನೆ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ಕೂಡಲೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.

      ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಮಾರ್ಕೋನಹಳ್ಳಿ ಡ್ಯಾಂನಿಂದ ಹರಿಯುವ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರಲಿದೆ. ವರ್ಷದ ಆರು ತಿಂಗಳು ನಿರಂತರವಾಗಿ ನಿತ್ಯ 600 ಕ್ಯೊಸೆಕ್ಸ್ ನೀರು ಹರಿಯುತ್ತಿದ್ದು ಈ ನೀರನ್ನು ಸದ್ಬಳಕೆ ಮಾಡಲು ಒಂದು ಯೋಜನೆ ರೂಪಿಸಿಕೊಡಲು ಮಾಧುಸ್ವಾಮಿ ಅವರಲ್ಲಿ ಮನವಿ ಮಾಡುವುದಾಗಿ ತಿಳಿಸಿದ ಅವರು 20 ಕೋಟಿ ರೂಗಳ ಏತ ನೀರಾವರಿ ಯೋಜನೆ ಈ ಭಾಗಕ್ಕೆ ಮಂಜೂರು ಮಾಡಿಕೊಟ್ಟಲ್ಲಿ ಜನರು ಬಿಜೆಪಿ ಸರ್ಕಾರವನ್ನು ಮರೆಯಲಾರರು ಎಂದು ಮನವಿ ಮಾಡಿದರು.

      ಈ ಕಾರ್ಯಕ್ರಮದಲ್ಲಿ ಸಿ.ಎಸ್.ಪುರ ಹೋಬಳಿಯ ಐದು ಗ್ರಾಮ ಪಂಚಾಯಿತಿ ಸೇರಿದಂತೆ ಕಲ್ಲೂರು, ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಸನ್ಮಾನಿಸಿ ಅಭಿನಂದಿಸಿದರು. ಜತೆಗೆ ಪರಾಜಿತ ಅಭ್ಯರ್ಥಿಗಳಿಗೂ ಸನ್ಮಾನಿಸಲಾಯಿತು.

      ಜಿಪಂ ಸದಸ್ಯರಾದ ಗಾಯತ್ರಿದೇವಿ, ಮಂಜುಳಾ, ತಾಪಂ ಸದಸ್ಯರಾದ ಸಿದ್ದರಾಮಯ್ಯ, ದೀಪಿಕಾ, ಭಾನುಪ್ರಕಾಶ್, ವಿಎಸ್‍ಎಸ್‍ಎನ್ ಅಧ್ಯಕ್ಷ ಬಿ.ಎಸ್.ನಾಗರಾಜು, ಸಿ.ಎಸ್.ಪುರ ಗ್ರಾಪಂ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷೆ ಟಿ.ಜಿ.ಮಂಜುಳಾ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಮಹೇಶ್, ಎಪಿಎಂಸಿ ಸದಸ್ಯ ತಿಮ್ಮರಾಜು, ಸದಾಶಿವ, ಸುರೇಶ್, ರಘು, ಶಾಸಕರ ಪುತ್ರ ತೇಜು, ಕಲ್ಲೂರು ಸುರೇಶ್ ಇತರರು ಇದ್ದರು.

(Visited 15 times, 1 visits today)