ತುಮಕೂರು:

      ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಹ ಫಲಾನುಭವಿಗಳು ಸಲ್ಲಿಸುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು ಎಂದು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಪಾಲಿಕೆ ಸಭಾಂಗಣದಲ್ಲಿ ರಾಜ್ಯ/ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪಾಲಿಕೆ ಮೂಲಕ ಅನುಷ್ಠಾನವಾಗುವ ರಾಜ್ಯ ಹಾಗೂ ಕೇಂದ್ರ ಪುರಸ್ಕøತ ಯೋಜನೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಅಗತ್ಯ ದಾಖಲೆಗಳ ಕೊರತೆ, ಮತ್ತಿತರ ಕಾರಣವನ್ನು ಹೇಳಿ ಹಿಂದಿರುಗಿಸಬಾರದು. ದಾಖಲೆಗಳ ಅವಶ್ಯಕತೆ ಇದ್ದಲ್ಲಿ ಫಲಾನುಭವಿಗಳೊಂದಿಗೆ ಬ್ಯಾಂಕಿಗೆ ಭೇಟಿ ನೀಡಿ ಸಾಲ ಅರ್ಜಿಯನ್ನು ಅನುಸರಣೆ ಮಾಡಬೇಕೆಂದು ಈಗಾಗಲೇ ಯೋಜನಾನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

      ಅನುಷ್ಠಾನಾಧಿಕಾರಿಗಳು ಅಗತ್ಯ ದಾಖಲೆಗಳನ್ನು ಪೂರೈಕೆ ಮಾಡಿದ ನಂತರ ಅರ್ಹ ಫಲಾನುಭವಿಗಳಿಗೆ ಸಾಲವನ್ನು ಮಂಜೂರು ಮಾಡಬೇಕೆಂದರಲ್ಲದೆ, ಸಾಲ ಮಂಜೂರು ಮಾಡುವಾಗ ಮಧ್ಯವರ್ತಿಗಳೊಂದಿಗೆ ವ್ಯವಹರಿಸದೆ ಸಂಬಂಧಿಸಿದ ಫಲಾನುಭವಿಗಳೊಂದಿಗೆ ಮಾತ್ರ ವ್ಯವಹರಿಸಬೇಕು. ಬ್ಯಾಂಕಿನ ಅಧಿಕಾರಿಗಳಿಗೆ ಮಧ್ಯವರ್ತಿಗಳಿಂದ ಸಾಲ ಮಂಜೂರಾತಿಗಾಗಿ ಒತ್ತಡ ಬಂದಲ್ಲಿ ಕೂಡಲೇ ತಮಗೆ ದೂರು ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾರ್ಚ್ 15ರೊಳಗೆ ಸಾಲ ಅರ್ಜಿ ವಿಲೇವಾರಿಗೆ ನಿರ್ದೇಶನ:-

       ಪಾಲಿಕೆ ಅನುಷ್ಠಾನ ಮಾಡುವ ಡೇ-ನಲ್ಮ್ ಯೋಜನೆಯಡಿ 125 (ವೈಯಕ್ತಿಕ ಸಾಲ) ಫಲಾನುಭವಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದ್ದು, ಸದರಿ ಅರ್ಜಿಗಳನ್ನು ಸಾಲ ಮಂಜೂರಾತಿಗಾಗಿ ಈಗಾಗಲೇ ಬ್ಯಾಂಕಿಗೆ ಸಲ್ಲಿಸಲಾಗಿದೆ. ಈ ಪೈಕಿ 10 ಅರ್ಜಿಗಳಿಗೆ ಬ್ಯಾಂಕಿನವರು ಸಾಲ ಮಂಜೂರು ಮಾಡಿದ್ದು, 115 ಅರ್ಜಿಗಳು ಬಾಕಿ ಇವೆ. ಅದೇರೀತಿ ಗುಂಪು ಸಾಲದಡಿ ಸಲ್ಲಿಸಿರುವ 12 ಅರ್ಜಿಗಳ ಪೈಕಿ 2 ಅರ್ಜಿಗಳಿಗೆ ಮಾತ್ರ ಸಾಲ ಮಂಜೂರಾಗಿದ್ದು, ಉಳಿದ 10 ಅರ್ಜಿಗಳು ಬಾಕಿ ಹಾಗೂ ಬ್ಯಾಂಕ್ ಲಿಂಕೇಜ್ ಸಾಲದಡಿ ಸಲ್ಲಿಸಿರುವ 62 ಅರ್ಜಿಗಳ ಪೈಕಿ 3 ಅರ್ಜಿಗಳಿಗೆ ಸಾಲ ಮಂಜೂರಾಗಿದ್ದು, 59 ಅರ್ಜಿಗಳು ಬಾಕಿಯಿರುವುದರಿಂದ ಬ್ಯಾಂಕುಗಳು ಮಾರ್ಚ್ 15ರೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ನಿರ್ದೇಶನ ನೀಡಿದರು.

       ಆತ್ಮ ನಿರ್ಭರ್ ಯೋಜನೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ: ಕೋವಿಡ್-19 ಹಾಗೂ ಲಾಕ್‍ಡೌನ್ ಅವಧಿಯಲ್ಲಿ ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರಿಂದ ಅವರ ಅಭಿವೃದ್ಧಿಗಾಗಿ ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಆತ್ಮ ನಿರ್ಭರ್ ನಿಧಿ ಯೋಜನೆಯಡಿ 0,000 ರೂ.ಗಳ ಸಾಲ ಸೌಲಭ್ಯವನ್ನು ನೀಡಲಾಗಿದೆ. ಈವರೆಗೂ ಪಾಲಿಕೆ ವ್ಯಾಪ್ತಿಯ 1969 ಬೀದಿ ಬದಿ ವ್ಯಾಪಾರಸ್ಥರಿಗೆ ವಿವಿಧ ಬ್ಯಾಂಕುಗಳಿಂದ 1,96,90,000 ರೂ.ಗಳ ಸಾಲವನ್ನು ವಿತರಣೆ ಮಾಡುವ ಮೂಲಕ ಪಾಲಿಕೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.

ಅನಗತ್ಯ ವಿಳಂಬ ಬೇಡ:

       ಮೇಯರ್ ಫರೀದಾ ಬೇಗಂ ಮಾತನಾಡಿ, ಸಾಲಕ್ಕಾಗಿ ಬಡ/ ಹಿಂದುಳಿದ ವರ್ಗದವರೇ ಹೆಚ್ಚು ಅರ್ಜಿ ಸಲ್ಲಿಸುವುದರಿಂದ ಅನಗತ್ಯ ವಿಳಂಬ ಬೇಡ. ದಾಖಲೆಗಳಿಲ್ಲದ ಅರ್ಜಿಗಳು ಸಲ್ಲಿಕೆಯಾದಲ್ಲಿ ಪಾಲಿಕೆ ಹಂತದಲ್ಲೇ ಕೈ ಬಿಡಬೇಕೆಂದು ಯೋಜನೆಯ ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಸಾಲ ಪಡೆದವರು ನಿಗಧಿತ ಅವಧಿಯೊಳಗೆ ಹಿಂದಿರುಗಿಸಬೇಕು. ನಿಗಧಿತ ಕಾಲಾವಧಿಯೊಳಗೆ ಸಾಲವನ್ನು ಹಿಂದಿರುಗಿಸಿದಲ್ಲಿ ಇನ್ನೂ ಹೆಚ್ಚಿನ ಸಾಲ ಸೌಲಭ್ಯವನ್ನು ಪಡೆಯಲು ಸಾಧ್ಯವಿದೆ ಎಂದು ಫಲಾನುಭವಿಗಳಿಗೆ ಅರಿವು ಮೂಡಿಸಬೇಕು ಎಂದರು.

      ಪಾಲಿಕೆ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಸಾಲವನ್ನು ಮಂಜೂರು ಮಾಡುವಾಗ ಆಯಾ ವಾರ್ಡಿನ ಪಾಲಿಕೆ ಸದಸ್ಯರನ್ನು ತೊಡಗಿಸಿಕೊಳ್ಳಬೇಕು. ಇದರಿಂದ ನಿಗಧಿತ ಅವಧಿಯೊಳಗೆ ಸಾಲ ವಸೂಲಾತಿ ಮಾಡಲು ಅನುಕೂಲವಾಗುತ್ತದೆಯಲ್ಲದೆ, ಬ್ಯಾಂಕ್ ಮತ್ತು ಫಲಾನುಭವಿಗಳ ನಡುವೆ ಸೇತುವೆಯಾಗಿ ಸಹಕಾರ ದೊರೆಯಲಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಆತ್ಮ ನಿರ್ಭರ್ ನಿಧಿ ಯೋಜನೆಯ ಪ್ರಗತಿಗಾಗಿ ಶ್ರಮಿಸಿದ ರಾಮಾಂಜಿನಪ್ಪ, ಶಿವಪ್ರಸಾದ್, ಅಂಜನಮೂರ್ತಿ, ನಾಗರಾಜಯ್ಯ, ರೇವಣ್ಣ, ಸವಿತ, ಪುಷ್ಪಲತಾ, ಸುವರ್ಣ, ಗೌರಿ, ರಾಜಲಕ್ಷ್ಮಿ, ದೊಡ್ಡವಲ್ಲಪ್ಪ, ಭಾಗ್ಯಮ್ಮ, ಮತ್ತಿತರ ಅಧಿಕಾರಿ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.

ಸಭೆಯಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಲೀಡ್‍ಬ್ಯಾಂಕ್ ಮ್ಯಾನೇಜರ್ ನಾರಾಯಣಸ್ವಾಮಿ, ಎಸ್.ಬಿ.ಐ., ಕೆನರಾ, ಸಿಂಡಿಕೇಟ್, ಕರ್ನಾಟಕ, ಕರ್ನಾಟಕ ಗ್ರಾಮೀಣ, ವಿಜಯ ಬ್ಯಾಂಕ್ ಇತರರು ಇದ್ದರು.

(Visited 18 times, 1 visits today)