ತುಮಕೂರು  :

       ಜಿಲ್ಲೆಯಲ್ಲಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು ನನ್ನ ಉದ್ದೇಶವಾಗಿದ್ದು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ ಸಣ್ಣ ನೀರಾವರಿ ಇಲಾಖೆಗೆ ಒಳಪಡಿಸಿದರೆ ಆ ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರು ತುಂಬಿಸಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ತಿಳಿಸಿದರು.

       ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಕೆರೆ ಸಂರಕ್ಷಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆಗಳ ಸರ್ವೆ ಕಾರ್ಯ ಮಾಡಿಸಿ, ಕೆರೆಗಳ ನಿರ್ವಹಣೆ ಮಾಡಬೇಕು. ಜಿಲ್ಲೆಯಲ್ಲಿ 2,500ಕ್ಕೂ ಹೆಚ್ಚು ಕೆರೆಗಳಿದ್ದು, ಅವುಗಳ ಅಭಿವೃದ್ಧಿಗೆ 2 ಕೋಟಿ ಮಾತ್ರ ಮೀಸಲಿಡಲಾಗಿದೆ. ಕೆರೆಗಳ ಅಭಿವೃದ್ಧಿಗಾಗಿ ಈ ಅನುದಾನ ಸಾಕಾಗುವುದಿಲ್ಲ ಎಂದು ಹೇಳಿದರು.

ಕೆರೆಗಳಲ್ಲಿನ ಹೂಳು ತೆಗೆಯಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಹೂಳನ್ನು ತುಂಬಿಕೊಂಡು ಹೋಗಬಹುದು. ಹೂಳು ತುಂಬಿರುವ ಕೆರೆ ಹಾಗೂ ಅರ್ಧ ಹೂಳು ಇರುವ ಕೆರೆಗಳ ಕುರಿತು ಹಾಗೂ ಕೆರೆಗಳ ಜಲಾನಯನ ಪ್ರದೇಶದ ಬಗ್ಗೆಯೂ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

      ಕೆರೆಗಳ ಬಂಡು(ಏರಿ)ಗಳಲ್ಲಿನ ಗಿಡಗಳನ್ನು ತೆರವುಗೊಳಿಸುವಾಗ ಏರಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಯಂತ್ರಗಳನ್ನು ಬಳಸಬಾರದು. ಕೆರೆಯ ರಚನೆಗೆ ದಕ್ಕೆಯಾಗದಂತೆ ಕೆರೆ ಏರಿಗಳನ್ನು ಸ್ವಚ್ಚಗೊಳಿಸುವಂತೆ ಅವರು ನಿರ್ದೇಶಿಸಿದರು.

ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಗರದ ಸುತ್ತಮುತ್ತಲಿನ ಕೆರೆಗಳಲ್ಲಿನ ಬಫರ್ ಜೋನ್‍ಗಳಲ್ಲಿ ಮನೆ ಕಟ್ಟಿದ್ದಾರೆ. ಅವರಿಗೆ ರಿಯಾಯಿತಿ ಕಲ್ಪಿಸಬಹುದೇ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಯಮಾನುಸಾರ ಸಾಧ್ಯವಿಲ್ಲ. ಹಸಿರು ನ್ಯಾಯ ಪೀಠದ ನಿರ್ದೇಶನದಂತೆ ಕೆರೆಗಳ ರಕ್ಷಣೆಗಾಗಿ ಬಫರ್ ಜೋನ್ ಬಿಡಬೇಕು ಎಂದು ಅವರು ಹೇಳಿದರು.

     ಹಳೆ ನಿಜಗಲ್ ಕೆರೆಯಿಂದ ತುಮಕೂರು ಗ್ರಾಮಾಂತರದ 12 ಕೆರೆಗಳಿಗೆ ಟ್ರಿಟೇಡ್ ವಾಟರ್ ನೀರು ಹರಿಸಲು ಯೋಜನೆ ರೂಪಿಸಿ ಟೆಂಡರ್ ಕರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವರು ಹೇಳಿದರು.

     ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣ ಮೂರ್ತಿ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

(Visited 10 times, 1 visits today)