ತುಮಕೂರು:

 

      ಜಿಲ್ಲೆಯು ಬರಪೀಡಿತವೆಂದು ಘೋಷಣೆಯಾಗಿರುವ ಹಿನ್ನಲೆಯಲ್ಲಿ ಬೆಳೆ ನಷ್ಟದ ವಾಸ್ತವಿಕ ಪರಿಸ್ಥಿತಿಯನ್ನು ಅರಿತು 15 ದಿನಗೊಳಗಾಗಿ ಸಂಕಷ್ಟದಲ್ಲಿರುವ ಅರ್ಹ ರೈತರ ಖಾತೆಗೆ ಪರಿಹಾರಧನವನ್ನು ಜಮಾ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಕೃಷಿ ಇಲಾಖೆ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಅವರಿಗೆ ತಾಕೀತು ಮಾಡಿದರು.

      ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 9551 ರೈತರ ಅರ್ಜಿಗಳು ತಿರಸ್ಕೃತಗೊಂಡಿರುವ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಅವರು ಪ್ರಶ್ನಿಸಿದಾಗ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಉತ್ತರಿಸುತ್ತಾ ಬ್ಯಾಂಕ್ ಹಾಗೂ ವಿಮಾ ಕಂಪನಿಗಳ ಲೋಪದೋಷದಿಂದ ಅರ್ಜಿಗಳು ತಿರಸ್ಕøತವಾಗಿವೆ. ಬೆಳೆ ನಷ್ಟ ಪರಿಹಾರ ಧನವನ್ನು ವಿತರಿಸಲು ಕೇಂದ್ರ ಸರ್ಕಾರದಿಂದ ಈಗಾಗಲೇ 681ಲಕ್ಷ ರೂ.ಗಳ ಹಣ ಬಿಡುಗಡೆಯಾಗಿದ್ದು, ಅರ್ಹ ಫಲಾನುಭವಿಗಳ ಖಾತೆಗೆ ತ್ವರಿತವಾಗಿ ಜಮಾ ಮಾಡಲಾಗುವುದು ಎಂದು ತಿಳಿಸಿದರು.

      ಭಾರತ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ವೃದ್ಧಿಸಿಕೊಳ್ಳಲು ಅನುವಾಗುವಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2 ಹೆಕ್ಟೇರಿಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಒಂದು ವರ್ಷಕ್ಕೆ 6000 ರೂ.ಗಳನ್ನು 3 ಸಮಾನ ಕಂತುಗಳಲ್ಲಿ ನೀಡುವ ಯೋಜನೆ ಬಗ್ಗೆ ರೈತರಿಗೆ ಹೆಚ್ಚು ಮಾಹಿತಿ ನೀಡಿ ಸೌಲಭ್ಯ ಪಡೆದುಕೊಳ್ಳುವಂತೆ ಅರಿವು ಮೂಡಿಸಬೇಕು. ಪಾವಗಡ ತಾಲೂಕಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ 552 ಕೃಷಿ ಹೊಂಡಗಳಲ್ಲಿ 420 ಕೃಷಿ ಹೊಂಡಗಳ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದ್ದು, 337 ಹೊಂಡಗಳ ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯಿಂದ 550 ಹೆಚ್ಚುವರಿ ಕೃಷಿ ಹೊಂಡದ ಬೇಡಿಕೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಯಸ್ವಾಮಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅನುದಾನದಡಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫೇಸ್ ರೀಡಿಂಗ್, ಬಯೋಮೆಟ್ರಿಕ್ ಹಾಗೂ ಸಿಸಿ ಟಿ.ವಿ.ಗಳ ಅಳವಡಿಕೆಗಾಗಿ 1.36 ಕೋಟಿ ರೂ.ಹಣ ಬಿಡುಗಡೆಯಾಗಿದೆ. ಈಗಾಗಲೇ 157 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಶಿರಾ ತಾಲೂಕಿನ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದಲ್ಲಿ ಮಾತ್ರ ಈವರೆಗೂ ಸಿಸಿಟಿವಿ ಅಳವಡಿಸಿಲ್ಲದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕೆಂದು ಸಿಇಒ ಶುಭಾ ಕಲ್ಯಾಣ್ ಡಿಹೆಚ್‍ಒ ಡಾ|| ಚಂದ್ರಿಕಾ ಅವರಿಗೆ ಸೂಚಿಸಿದರು.

      ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 193 times, 1 visits today)