ತುಮಕೂರು:

     ತುಮಕೂರು ನಗರಕ್ಕೆ ಸಮೀಪದ ಹೊನ್ನೇನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಕೃಷ್ಣದೇವರಾಯ ಕಾಲಮಾನವಾದ ನಿಖರವಾದ ದಿನಾಂಕವನ್ನು ಸ್ಪಷ್ಟಪಡಿಸುವ ಶಾಸನವೊಂದು ಪತ್ತೆಯಾಗಿದೆ.

       ಕ್ರಿಸ್ತಶಕ 1336ರಲ್ಲಿ ಹಕ್ಕ,ಬುಕ್ಕರಿಂದ ಆರಂಭವಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಸಾವಿನ ಕುರಿತಾದ ನಿಖರತೆ ಇದುವರೆಗೂ ಇತಿಹಾಸಕಾರರಿಗೆ ಲಭ್ಯವಾಗಿರಲಿಲ್ಲ.ಹೊನ್ನೇನಹಳ್ಳಿಯಲ್ಲಿ ದೊರೆತ್ತಿರುವ ಈ ಶಾಸನದಲ್ಲಿ ಶಾಲಿವಾಹನ ಶಕ ವಿರೋಧಿ ನಾಮ ಸಂವತ್ಸರ 1452ರ ಕಾರ್ತಿಕ ಶುದ್ದ15 ಎಂದರೆ ಕ್ರಿಸ್ತಶಕ 1529ರ ಅಕ್ಟೋಬರ್ 17 ರಂದು ಶ್ರೀಕೃಷದೇವರಾಯರು ಆಸ್ತಮರಾಗಿರುತ್ತಾರೆ ಎಂದು ನಮೂದಿಸಿದ್ದು,ಈ ಸಂಬಂಧ ತುಮಕೂರು ಸೀಮೆಯ ತಿಮ್ಮಣ್ಣ ನಾಯಕರಿಗೆ ತುಮಕೂರು ವೀರಪ್ರಸನ್ನ ಹನುಮಂತ ದೇವರ ಪೂಜೆಗಾಗಿ ಧಾರೆ ಎರೆದು ಕೊಟ್ಟಿರುವುದಾಗಿದೆ.

       15 ಸಾಲುಗಳನ್ನು ಒಳಗೊಂಡಿರುವ ಶಾಸನದಲ್ಲಿ ಪ್ರಮುಖವಾಗಿ ಚರ್ಚಿಸಲಾಗಿರುವ ಅಂಶವೆನೆಂದರೆ, ಶುಭಮಸ್ತು, ಸ್ವಸ್ತಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರುಷ 1452ನೇ ವಿರೋಧಿ ಸಂವತ್ಸರದ ಕಾರ್ತೀಕ ಶು 15ಲೂ ಶ್ರೀ ಶ್ರೀ ಶ್ರೀಮಂನ್ಮಹಾರಾಜಾಧಿರಾಜ, ರಾಜಪರಮೇಶ್ವರ ಶ್ರೀವೀರಪ್ರತಾಪ ಶ್ರೀ ವೀರಕೃಷ್ಣ ಮಹಾರಾಯರು ಯೀ ತಥಾ ತಿಥಿಯಲು ಅಸ್ತಮಯರಾಗಿ(ರ)ಲಾಗಿ, ಪೆನುಗುಂಡೆ ರಾಜ್ಯದ ಆನೆಬಿದ್ದಸರಿಯಸ್ತಳದ ಮರುಗಲು ನಾಡೊಳಗಣ ತುಮಕೂರು ಸೀಮೆಯಳಗಣ ಹೊಂನೇನಹಳ್ಳಿ ಗ್ರಾಮವನ್ನು ತುಮಕೂರು ಸೀಮೆ ಗೌಡ ಪ್ರಜೆಗಳು(ತಿಮ್ಮಣ್ಣ) ನಾಯಕರೂ, ಅವರ ಕಾರ್ಯಕೆ ಕರ್ತರಾದ ತುಮಕೂರು ವೀರ ಪ್ರಸಂನ ಹನುಮಂತವರ ಪೂಜೆಗೆ ಧಾರೆ ಎರೆದು ಎಂಬುದಾಗಿದೆ.15 ಸಾಲುಗಳಲ್ಲಿ 12 ಸಾಲುಗಳು ಮಾತ್ರ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಉಳಿದ ಮೂರು ಸಾಲುಗಳು ಭೂಮಿಯಲ್ಲಿ ಹೂತು ಹೋಗಿದ್ದು, ಹೊರೆ ತೆಗೆದು ಓದಬೇಕಾಗಿದೆ.

      ಶಾಸನದ ಮೇಲ್ಬಾಗದಲ್ಲಿ ಶಂಖ, ಚಕ್ರಗಳ ನಡುವೆ ಆಂಜನೇಯನ ಉಬ್ಬು ಚಿತ್ರವಿದ್ದು,ಸೂರ್ಯ ಚಂದ್ರರ ಗುರುತುಗಳು ಇವೆ.ಶಿಲೆಯ ಹಿಂಭಾಗದಲ್ಲಿ ಮಾರುತಿಯ ಚಿತ್ರವಿದ್ದು, ಬಾಲದಲ್ಲಿ ಗಂಟೆಯಿದೆ. ಇದುವರೆಗಿನ ವಿಜಯನಗರ ಇತಿಹಾಸವನ್ನು ಕೆದಕಿದಾಗ ಶ್ರೀಕೃಷ್ಣದೇವರಾಯ ಮರಣ ಕಾಲವನ್ನು 1529ರ ಅಕ್ಟೋಬರ್ ಅಥವಾ ನವೆಂಬರ್ ಎಂದು ಅಂದಾಜಿಸಲಾಗಿತ್ತು.ತುಮಕೂರು ನಗರ ಸಮೀಪದ ಹೊನ್ನೇನಹಳ್ಳಿಯ ಶಾಸಕ ಶ್ರೀಕೃಷ್ಣದೇವರಾಯ ಕಾಲವಾದ ದಿನವನ್ನು 1529 ಅಕ್ಟೋಬರ್ 17 ರಂದು ಸ್ಪಷ್ಟಪಡಿಸಿದಂತಾಗುತ್ತದೆ.  

      ಈ ಕುರಿತು ಮಾತನಾಡಿದ ಹಿರಿಯ ಇತಿಹಾಸ ವಿದ್ವಾಂಸ ಡಾ.ಕೆ.ಆರ್.ನರಸಿಂಹನ್,ಬಿ.ಎಂ.ಟಿ.ಸಿಯಲ್ಲಿ ವೃತ್ತಿಯಲ್ಲಿ ಚಾಲಕರಾಗಿರುವ ಕೆ.ಧನಪಾಲ್ ಎಂಬುವವರಿಂದ ನನಗೆ ಈ ಶಾಸನ ಇರುವ ಬಗ್ಗೆ ಮಾಹಿತಿ ದೊರೆತ್ತಿದ್ದು, ಕಳೆದ ಒಂದು ವಾರದಿಂದ ಅದನ್ನು ಅಧ್ಯಯನ ಮಾಡಿದಾಗ ಮೇಲಿನ ಅಂಶ ಕಂಡುಬಂದಿದೆ.ಶಾಸನ ಸುಸ್ಥಿತಿಯಲ್ಲಿದೆ.ಹನುಮಂತ ದೇವರ ಚಿತ್ರವಿರುವ ಕಾರಣ, ಬಯಲು ಹನುಮಂತರಾಯ ಎಂಬ ಹೆಸರಿನಲ್ಲಿ ಈ ಶಾಸನಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಇದು ಕ್ರಿಸ್ತಶಕ 1450ರ ಅಸುಪಾಸಿನಲ್ಲಿ ನಿರ್ಮಾಣಗೊಂಡಿರುವ ಗೋಪಾಲ ಕೃಷ್ಣ,ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿದೆ.ಇದರ ಮೇಲೆ ಹೆಚ್ಚಿನ ಅಧ್ಯಯನಗಳು ನಡೆದರೆ,ವಿಜಯನಗರದ ಅರಸರ ಕುರಿತ ಇನಷ್ಟು ನಿಖರ ಮಾಹಿತಿ ದೊರೆಯಬಹುದಾಗಿದೆ ಎಂದರು.

      ಬಿ.ಎಂ.ಟಿ.ಸಿ ಚಾಲಕರಾದ ಕೆ.ಧನಪಾಲ್ ಮಾತನಾಡಿ, ನನಗೆ ಶಾಸನಗಳು,ಗಣ್ಯರ ಸಮಾಧಿಗಳನ್ನು ವೀಕ್ಷಿಸುವುದು ಹವ್ಯಾಸ. ಕಳೆದ ಒಂದು ವರ್ಷದ ಹಿಂದೆ ತುಮಕೂರಿನ ಹೊನ್ನೇನಹಳ್ಳಿಯಲ್ಲಿ ಹಿರಿಯ ನಟಿ ದಿವಂಗತ ಮಂಜುಳ ಅವರ ಸಮಾಧಿ ವೀಕ್ಷಿಸಲು ಬಂದಾಗ ಗ್ರಾಮದ ಹಿರಿಯರಾದ ಪರಮೇಶ್ ಎಂಬುವವರು ಈ ಶಾಸನದ ಬಗ್ಗೆ ತಿಳಿಸಿದ್ದರು. ಆದರೆ ಕೋರೋನದಿಂದ ಹೆಚ್ಚಿನ ಗಮನಹರಿಸಲು ಸಾಧ್ಯವಾಗಿರಲಿಲ್ಲ. ಈಗ ಡಾ.ಆರ್.ಕೆ.ನರಸಿಂಹನ್ ಅವರನ್ನು ಕರೆತಂದು ಅದನ್ನು ಓದಿ, ಜನತೆ ತಿಳಿಸಲು ಶ್ರಮವಹಿಸಿದ್ದೇನೆ ಎಂದರು.

(Visited 13 times, 1 visits today)