ತುಮಕೂರು : 

      ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ. ಮೂಲಕ ದಾಖಲಾದ ಮಕ್ಕಳನ್ನು ಬೇಧ-ಭಾವದಿಂದ ಕಾಣುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅಭಿಪ್ರಾಯಪಟ್ಟರು.

ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸರ್ಕಾರಿ/ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು, ಸಮಾಲೋಚಕರು, ಸಾಂತ್ವಾನ ಕೇಂದ್ರಗಳ ಮುಖ್ಯಸ್ಥರು, ಸಮಾಲೋಚಕರುಗಳಿಗೆ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಒದಗಿಸಬೇಕಾದ ಸೌಲಭ್ಯಗಳ ಕುರಿತು ಇತ್ತೀಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ. ಮುಖಾಂತರ ಮಕ್ಕಳನ್ನು ದಾಖಲು ಮಾಡಿಕೊಳ್ಳುವಲ್ಲಿ ಆಗುತ್ತಿರುವ ತೊಂದರೆ ಹಾಗೂ ಆರ್.ಟಿ.ಇ ಕಾಯ್ದೆಯಡಿ ದಾಖಲಾದ ಮಕ್ಕಳಿಗೆ ಭೇದ-ಭಾವ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಆತಂಕಕಾರಿ ವಿಷಯವಾಗಿದೆ. ಶಾಲೆಯಲ್ಲಿ ಎಲ್ಲಾ ಮಕ್ಕಳನ್ನು ಸಮಾನವಾಗಿ ಕಾಣಬೇಕು ಎಂದು ತಿಳಿಸಿದರಲ್ಲದೆ, ಪೊಕ್ಸೊ ಕಾಯ್ದೆ ಬಗ್ಗೆ ವiಕ್ಕಳಿಗೆ ಹೆಚ್ಚಿನ ಅರಿವು ಮೂಡಿಸಿ ಅಪರಾಧ ನಡೆಯದಂತೆ ಹಾಗೂ ಅಪರಾಧ ನಡೆದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕ್ರಮವಹಿಸುವ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಈಗಲೂ ಕೆಲವು ಮಕ್ಕಳಿಗೆ ಜನನ ಪ್ರಮಾಣ ಪತ್ರ ದೊರೆಯದೇ ಕೋರ್ಟ್ ಮುಖಾಂತರ ಪಡೆಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮಕ್ಕಳಿಗೆ ಜನನ ಪ್ರಮಾಣ ಪತ್ರ ನೀಡಲು ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿದರು.

      ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ್ ಯರಗಟ್ಟಿ ಅವರು ಮಾತನಾಡುತ್ತಾ, ಮಕ್ಕಳ ರಕ್ಷಣೆಗಾಗಿ ಕಾನೂನುಗಳು ರಚನೆಯಾಗಿದ್ದು, ಕಾನೂನುಗಳ ಪಾಲನೆ ಮತ್ತು ಅನುಷ್ಟಾನ ಪ್ರಮುಖ ವಿಷಯವಾಗಿರುತ್ತದೆ. ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳಿಗೆ ಒದಗಿಸಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಅಗತ್ಯ ದಾಖಲೆಗಳನ್ನು ಸಹ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜು ಎಸ್. ಮಾತನಾಡುತ್ತಾ, ತುಮಕೂರು ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು 32 ನಿರ್ಗತಿಕ ಕುಟೀರಗಳಿದ್ದು, ಮಕ್ಕಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸದೇ ಇರುವುದರಿಂದ ಹಲವಾರು ಕುಟೀರಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ 13 ಕುಟೀರಗಳನ್ನು ನಡೆಸಲು ಮಾತ್ರ ಅನುಮತಿ ನೀಡಲಾಗಿದೆ. ನಿರ್ಗತಿಕ ಮಕ್ಕಳ ಕುಟೀರಗಳನ್ನು ಸರ್ಕಾರಿ ಅನುದಾನಕ್ಕಾಗಿ ನಡೆಸದೇ, ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಜಯಶೀಲ ಮಾತನಾಡುತ್ತಾ, ಮಕ್ಕಳ ಪಾಲನಾ ಸಂಸ್ಥೆಗಳು ಸಮಾಜಮುಖಿ ಮನೋಭಾವನೆಯಿಂದ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಹಕಾರಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ವಾಸಂತಿ ಉಪ್ಪಾರ್, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ, ಮಕ್ಕಳ ಪಾಲನಾ ಸಂಸ್ಥೆಗಳು ಹಾಗೂ ಸಾಂತ್ವಾನ ಕೇಂದ್ರಗಳ ಸಮನ್ವಯತೆಯ ಕುರಿತು ಉಪನ್ಯಾಸ ನೀಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಶಿವಣ್ಣ ಕೆ.ಎಸ್. ರಕ್ಷಣಾಧಿಕಾರಿ (ಅಸಾಂಸ್ಥಿಕ ಸೇವೆ), ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು ಇವರು ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಒದಗಿಸಬೇಕಾದ ಸೌಲಭ್ಯಗಳು ಮತ್ತು ನಿರ್ವಹಿಸಬೇಕಾದ ದಾಖಲೆಗಳ ಬಗ್ಗೆ ಕುರಿತು ಮಾಹಿತಿ ನೀಡಿದರು.

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಪ್ರೆಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಷಣ್ಮುಖ ವಹಿಸಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಸಾಂಸ್ಥಿಕ ಸೇವೆ) ಗೌತಮ ಎನ್. ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಹಾಗೂ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳ ಹಾಗೂ ಸಾಂತ್ವಾನ ಕೇಂದ್ರಗಳ ಮುಖ್ಯಸ್ಥರು, ಸಮಾಲೋಚಕರು, ಮಕ್ಕಳ ಸಹಾಯವಾಣಿ ಸಿಬ್ಬಂದಿಯವರು ಮತ್ತು ಸಖಿ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.

(Visited 50 times, 1 visits today)