ತುಮಕೂರು :

      ಜಿಲ್ಲೆಯಲ್ಲಿ ಒಟ್ಟು 11 ಪ್ರಕರಣಗಳು ಕೊರೊನಾ ಸೋಂಕಿತರು ಎಂದು ದೃಢಪಟ್ಟಿದ್ದು, ಇಂದು ಶಿರಾ ಮತ್ತು ಪಾವಗಡ ಸೇರಿದಂತೆ 4 ಕೋವಿಡ್-19 ಪಾಸಿಟೀವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ.

      ಶಿರಾ ನಗರಕ್ಕೆ ಬೆಂಗಳೂರಿನ ಪಾದರಾಯನಪುರದ ಪುಂಡನೊಬ್ಬ ಪಾದರಾಯನಪುರ ಗಲಾಟೆಯಿಂದ ತಪ್ಪಿಸಿಕೊಂಡು ಶಿರಾ ಸಂಬಂಧಿಕರ ಮನೆಗೆ ಬಂದಿದ್ದು, ತಾಲ್ಲೂಕು ಆಡಳಿತದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆತನನ್ನ ಕ್ವಾರೆಂಟೈನ್ ಮಾಡಲಾಗಿತ್ತು. ಆತನ ಗಂಟಲು ಮತ್ತು ಮೂಗಿನ ದ್ರವವನ್ನು ತೆಗೆದು ಕಳುಹಿಸಲಾಗಿತ್ತು. ಆತನಿಗೂ ಸಹಾ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಶಿರಾ ನಗರದ ಜನರಲ್ಲಿ ಆತಂಕಕ್ಕೀಡುಮಾಡಿದೆ. ಜಿಲ್ಲೆಯಲ್ಲಿ ಮೊಟ್ಟಮೊದಲಿಗೆ ಕೊರೊನಾ ಸೋಂಕು ತಗುಲಿದ್ದ ವ್ಯಕ್ತಿ ಶಿರಾ ನಗರದವರು ಎಂಬುದು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಶಿರಾ ನಗರದ ಜನರಲ್ಲಿ ಅಂದಿನಿಂದ ಆತಂಕ ಮಡುಗಟ್ಟಿತ್ತು. ಎಲ್ಲವೂ ಮುಗಿದುಹೋಯಿತು ಎನ್ನುವಷ್ಟರಲ್ಲಿ ಮತ್ತೊಂದು ಸೋಂಕು ದೃಢಪಟ್ಟ ಹಿನ್ನೆಲೆ ಪಾದರಾಯನಪುರದ ಪುಂಡನ ಪಾದಸ್ಪರ್ಷ ಶಿರಾ ನಗರದ ಜನರನ್ನ ನಿದ್ದೆಗೆಡಿಸಿದೆ.

        ಪಾವಗಡದ ಕ್ವಾರೆಂಟೈನ್‍ನಲ್ಲಿದ್ದ ಅಹಮದಾಬಾದ್‍ನಿಂದ ಆಗಮಿಸಿದ್ದ 30 ಜನರ ಪೈಕಿ ಚಿತ್ರದುರ್ಗದ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ತಪಾಸಣೆ ನಡೆಸಿ ಚಿತ್ರದುರ್ಗದ 12 ಜನರನ್ನ ಕ್ವಾರೆಂಟೈನ್ ಮಾಡಿ ತುಮಕೂರು ಪೊಲೀಸರಿಗೆ ಮತ್ತು ತುಮಕೂರು ಜಿಲ್ಲಾಡಳಿತಕ್ಕೆ 18 ಜನರನ್ನ ತುಮಕೂರು ಜಿಲ್ಲಾಡಳಿತ ವಶಕ್ಕೆ ಆಂಧ್ರ ಮೂಲದವರಾದ 5 ಜನರನ್ನ ಆಂಧ್ರಕ್ಕೆ ಕಳುಹಿಸಲಾಗಿತ್ತು. ಉಳಿದ 13 ಜನರನ್ನ ಹಾಸ್ಟೆಲ್‍ನಲ್ಲಿ ಕ್ವಾರೆಂಟೈನ್ ಮಾಡಲಾಗಿದ್ದು, ಈ ಪೈಕಿ ಮೂವರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಉಳಿದ 10 ಜನರ ವರದಿ ಯಾವ ರೀತಿಯಲ್ಲಿ ಬರುತ್ತದೋ ಎಂಬ ಆತಂಕ ಜಿಲ್ಲೆಯ ಜನರಲ್ಲಿದೆ. ಅಹಮದಾಬಾದ್‍ನಿಂದ ಹೊರಟ 30 ಜನರ ಆರೋಗ್ಯ ತಪಾಸಣೆ ಮಾಡಿ ವರದಿ ನೆಗೆಟೀವ್ ಬಂದ ಹಿನ್ನೆಲೆಯಲ್ಲಿ ಅವರನ್ನ ಅಲ್ಲಿಂದ ಕಳುಹಿಸಿಕೊಡಲಾಗಿತ್ತು ಎನ್ನಲಾಗುತ್ತಿದೆ. ಆದರೆ, ಇಲ್ಲಿಗೆ ಬಂದ ನಂತರ ಅವರ ವರದಿ ಪಾಸಿಟೀವ್ ಬಂದಿರುತ್ತದೆ.

       ಇಡೀ ಜಿಲ್ಲೆಯಲ್ಲಿ 11 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಮತ್ತಷ್ಟು ಜಾಗೃತರಾಗಬೇಕಾದ ಅನಿವಾರ್ಯತೆಯಿದೆ. ತುಮಕೂರು ಜಿಲ್ಲಾಧಿಕಾರಿ ಡಾ||ರಾಕೇಶ್ ಕುಮಾರ್ ಇಂದು 4 ಜನರ ವರದಿ ದೃಢಪಟ್ಟಿರುವ ಬಗ್ಗೆ ಮಾಹಿತಿ ನೀಡಿರುತ್ತಾರೆ.

(Visited 64 times, 1 visits today)