ತುಮಕೂರು:

      ಮತದಾನ ಕುರಿತು ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಕ್ಯಾಂಪಸ್ ಅಂಬಾಸಿಡರ್‍ಗಳು ಹೊಂದಿದ್ದು, ಪ್ರಾಮಾಣಿಕವಾಗಿ ನಿಭಾಯಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಕರೆ ನೀಡಿದರು.

      ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತದಾನದ ಕುರಿತು ಕಾಲೇಜು ಕ್ಯಾಂಪಸ್ ಅಂಬಾಸಿಡರ್‍ಗಳಿಗಾಗಿ ಏರ್ಪಡಿಸಿದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು 18 ವರ್ಷ ತುಂಬಿದ ಎಲ್ಲಾ ಯುವಕ/ಯುವತಿಯರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕಾಗಿ ತಪ್ಪದೇ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.

      ಮತದಾರರ ಕುಂದು ಕೊರತೆಗಳನ್ನು ಆಲಿಸಿ, ಅವರಿಗೆ ಮಾಹಿತಿ ಅಥವಾ ಪರಿಹಾರ ನೀಡಲು ಉಚಿತ ಸಹಾಯವಾಣಿ 1950 ಆರಂಭಿಸಿರುವ ಬಗ್ಗೆ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡಬೇಕೆಂದು ತಿಳಿಸಿದರು. ಚುನಾವಣೆಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ದೂರುಗಳಿದ್ದಲ್ಲಿ ಸಲ್ಲಿಸಲು “ಸಿವಿಜಿಲ್” ಎಂಬ ನೂತನ ಮೊಬೈಲ್ ಆ್ಯಪ್ ಅನ್ನು ಸೃಜಿಸಲಾಗಿದ್ದು, ಚುನಾವಣಾ ನೀತಿ ಉಲ್ಲಂಘನೆ ಕುರಿತು ಮಾಹಿತಿ ಸಿಕ್ಕಲ್ಲಿ ಕೂಡಲೇ ಸಿವಿಜಿಲ್ ಆ್ಯಪ್ ಮೂಲಕ ರೆಕಾರ್ಡ್ ಮಾಡಿ ಕಳುಹಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

      ಸ್ವೀಪ್ ಸಮಿತಿ ಸದಸ್ಯ ರಾಜ್‍ಕುಮಾರ್ ಮಾತನಾಡಿ ಕ್ಯಾಂಪಸ್ ಅಂಬಾಸಿಡರ್‍ಗಳು ಮಾದರಿ ವ್ಯಕ್ತಿಗಳಾಗಿ ಜವಾಬ್ದಾರಿಯನ್ನು ನಿಭಾಯಿಸಿ ಮತದಾನದಿಂದ ಯಾರೊಬ್ಬರೂ ತಪ್ಪಿಹೋಗದಂತೆ ನೋಡಿಕೊಳ್ಳುವುದರ ಜೊತೆಗೆ ಮತದಾನದ ಮಹತ್ವದ ಬಗ್ಗೆ ತಿಳುವಳಿಕೆ ನೀಡುವ ಸತ್ಕಾರ್ಯವನ್ನು ಮಾಡಬೇಕೆಂದು ತಿಳಿಸಿದರು.

      ಸ್ವೀಪ್ ಸಮಿತಿ ಸದಸ್ಯ ದೇವರಾಜ್, ಮಾತನಾಡಿ ಹೊಸ ಮತದಾರರ ನೋಂದಣಿ ಹಾಗೂ ಕಡ್ಡಾಯ ಮತದಾನ ಮಾಡುವ ಕುರಿತು ಅರಿವು ಮೂಡಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಅಂಬಾಸಿಡರ್‍ಗಳಿಗೆ ತಿಳಿಸಿದರು.

      ಇವಿಎಂ ಹಾಗೂ ವಿವಿ ಪ್ಯಾಟ್‍ಗಳ ಕಾರ್ಯವೈಖರಿಯ ಕುರಿತು ಶಿಕ್ಷಕ ರಿಜ್ವಾನ್ ಪಾಷಾ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.  ಕಾರ್ಯಕ್ರಮದಲ್ಲಿ ಸ್ವೀಪ್ ಸಮಿತಿಯ ಸದಸ್ಯ ಮಹಂಕಾಳಪ್ಪ, ಬಾಲರಾಜ್, ರಾಜಶೇಖರ್, ಶ್ರೀನಿವಾಸ್, ವಾಸಂತಿ ಉಪ್ಪಾರ್, ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜುಗಳ 75 ಕ್ಯಾಂಪಸ್ ಅಂಬಾಸಿಡರ್‍ಗಳು ಭಾಗವಹಿಸಿದ್ದರು.
 

(Visited 36 times, 1 visits today)