ತುಮಕೂರು:

      ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಆಮ್ಲಜನಕ ಉತ್ಪಾದನೆ ಪೂರೈಕೆ ಘಟಕಕ್ಕೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆಮ್ಲಜನಕದ ಬೇಡಿಕೆ ಹಾಗೂ ಪೂರೈಕೆ ಕುರಿತು ಪರಿಶೀಲನೆ ನಡೆಸಿದರು.
ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಅಮೋಘ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿರುವ ಆಮ್ಲಜನಕದ ಮಾಹಿತಿ ಪಡೆದರು. ಬಳಿಕ ಹಂಚಿಕೆದಾರರಾದ ಶ್ರೀದೇವಿ ಹಾಗೂ ಪದ್ಮಶ್ರೀ ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ಯಾವುದೇ ಕಾರಣಕ್ಕೂ ಅಕ್ರಮ ದಾಸ್ತಾನು ಇಟ್ಟುಕೊಂಡು ಆಮ್ಲಜನಕ ಕೊರತೆ ಸೃಷ್ಟಿ ಉಂಟು ಮಾಡಬಾರದು. ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು ಎಂದು ನಿರ್ದೇಶನ ನೀಡಿದರು. ಬಳಿಕ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಆಮ್ಲಜನಕ ಬೇಡಿಕೆ ಕುರಿತಂತೆ ಪರಿಶೀಲನೆ ನಡೆಸಿದರು.
ತದನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆಮ್ಲಜನಕ ಹಾಗೂ ರೆಮಿಡಿಸಿಯರ್ ಪೂರೈಕೆಯನ್ನು ಪರಿಶೀಲಿಸಿ, ಕೋವಿಡ್ ಸೋಂಕಿತರಿಗೆ ಸಿಗುತ್ತಿರುವ ಚಿಕಿತ್ಸೆ, ಕೋವಿಡ್ ಸೋಂಕಿತರ ನಿರ್ವಹಣೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಔಷಧ ಉಗ್ರಾಣಕ್ಕೆ ಬೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿದರು. ಅಕ್ರಮ ಆಮ್ಲಜನಕ ಹಾಗೂ ರೆಮಿಡಿಸಿಯರ್ ಮಾರಾಟ ಕಂಡುಬಂದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಕೆ.ಚೆನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಉಪವಿಭಾಧಿಕಾರಿ ಅಜಯ್, ಸಹಾಯಕ ಔಷಧ ನಿಯಂತ್ರಕಿ ಮಮತ ಸೇರಿದಂತೆ ಇತರರಿದ್ದರು.

(Visited 10 times, 1 visits today)