ತುಮಕೂರು  :

       ಕೋವಿಡ್- 19 ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ಹಾಗೂ ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ನಗರದಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳಿರುವ ಪ್ರದೇಶಗಳನ್ನು ಹಾಟ್ ಸ್ಪಾಟ್‍ಗಳಾಗಿ ಗುರುತಿಸಿ ಹೆಚ್ಚು ಎಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್‍ನಲ್ಲಿ ಅವರು ಮಾತನಾಡಿದರು. ನಗರದ ಗೌಡರ ಬೀದಿ, ಗಾಂಧೀ ನಗರ, ಎಸ್‍ಐಟಿ ಲೇಔಟ್, ಎಸ್.ಎಸ್.ಪುರಂ, ವಿದ್ಯಾನಗರ, ವಿವೇಕಾನಂದ ನಗರ, ಪಿ.ಎಚ್. ಕಾಲೋನಿ, ಎಸ್‍ಐಟಿ(ಅಶೋಕ್ ನಗರ), ಪಿ.ಎನ್.ಆರ್.ಪಾಳ್ಯ, ಹೌಸಿಂಗ್ ಬೋರ್ಡ್, ಅರಳೀಮರದ ಪಾಳ್ಯ, ಬನಶಂಕರಿ ರಾಘವೇಂದ್ರ ನಗರ, ಮರಳೂರು ದಿಣ್ಣೆ, ರಾಜೀವ್ ಗಾಂಧಿನಗರ ಜೈಪುರ, ಗೋಕುಲ ಬಡಾವಣೆ, ಮಾರುತಿ ನಗರ, ನೃಪತುಂಗ ಬಡಾವಣೆ, ಜಯನಗರ ಸೌತ್, ಉಪ್ಪಾರಹಳ್ಳಿ ಮಸೀದಿ ರಸ್ತೆ ಹತ್ತಿರ, ಶ್ರೀರಾಮ್ ನಗರ, ಆದರ್ಶ ನಗರಗಳನ್ನು ಹಾಟ್ ಸ್ಪಾಟ್ ಪ್ರದೇಶವೆಂದು ಗುರುತಿಸಿ ಹೆಚ್ಚು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಗರದಲ್ಲಿ ಗುರುತಿಸಿದಂತೆ ಉಳಿದ ತಾಲೂಕುಗಳ ಪಟ್ಟಣ ಪ್ರದೇಶಗಳಲ್ಲಿಯೂ ಹೆಚ್ಚು ಕೋವಿಡ್-19 ಪ್ರಕರಣಗಳಿರುವ ಪ್ರದೇಶಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ, ಅತೀವ ಎಚ್ಚರಿಕೆ ವಹಿಸಬೇಕು. ಈ ಪ್ರದೇಶಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅದರಂತೆಯೇ ಗ್ರಾಮೀಣ ಭಾಗದಲ್ಲಿಯೂ ಹೆಚ್ಚು ಪ್ರಕರಣಗಳು ಕಂಡುಬರುವ ಪ್ರದೇಶಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇಂತಹ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ತಹಸೀಲ್ದಾರ್, ಇಒ ಗಳಿಗೆ ನಿರ್ದೇಶಿದರು.

ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡುಬಂದರೆ ಅಂತಹವರನ್ನು ತಕ್ಷಣ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು. ಗ್ರಾಮವನ್ನು ಸ್ವಚ್ಚ ಗೊಳಿಸುವ ಕಾರ್ಯವಾಗಬೇಕು. ಎಲ್ಲಾ ಗ್ರಾಮ ಪಂಚಾಯತ್ ಗಳ ಕಾರ್ಯಪಡೆ ವಾರಕ್ಕೆರಡು ಬಾರಿ ಸಭೆ ನಡೆಸಿ ಕೋವಿಡ್ ನಿಯಂತ್ರಣ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

      ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಸೋಂಕಿನ ಲಕ್ಷಣವಿರುವವರನ್ನು ಕೋವಿಡ್ ಪರೀಕ್ಷೆಗೊಳಪಡುವಂತೆ ಅರಿವು ಮೂಡಿಸಬೇಕು. ಪಾಸಿಟಿವ್ ಬಂದ ಸೋಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಬೇಕು ಎಂದು ತಿಳಿಸಿದರು.

       ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಆರ್‍ಟಿಪಿಸಿಆರ್ ಅಥವಾ ರ್ಯಾಟ್(ಖಂಖಿ) ಪರೀಕ್ಷೆ ಮಾಡಿಸಬೇಕು. ಇಲ್ಲವೇ ಗ್ರಾಮ ಪಂಚಾಯತ್ ಪಿಡಿಒಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಕಫ್ರ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾರು ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು. ಕೋವಿಡ್-19 ಚಿಕಿತ್ಸೆಗಾಗಿ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯದಲ್ಲಿ ಸಮಸ್ಯೆಯಿರುವ ಸೋಂಕಿತರು ಮೊದಲು ತಾಲೂಕು ಆಸ್ಪತ್ರೆಗಳಿಗೆ ದಾಖಲಾಗಬೇಕು. ಅಲ್ಲಿ ಸೂಚಿಸಿದರಷ್ಟೇ ಜಿಲ್ಲಾ ಕೇಂದ್ರ ಆಸ್ಪತ್ರೆಗಳಿಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.

     ಪ್ರತಿ ಗ್ರಾಮ ಮಟ್ಟದ ಕಾರ್ಯಪಡೆ ಬೆಂಗಳೂರಿನಿಂದ ಗ್ರಾಮಗಳಿಗೆ ಆಗಮಿಸುವವರ ಮೇಲೆ ನಿಗಾವಹಿಸಬೇಕು. ಗ್ರಾಮಕ್ಕೆ ಬಂದವರನ್ನು ಹೋಂ ಐಸೋಲೇಷನಲ್ಲಿಡಲು ಮತ್ತು ಅವರಲ್ಲಿ ಲಕ್ಷಣಗಳು ಕಂಡುಬಂದರೆ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಗ್ರಾಮಸ್ಥರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಬೆಂಗಳೂರಿನಿಂದ ಬರುವವರ ಸಂಪರ್ಕಕ್ಕೆ ಬರಬಾರದು. ಈ ಬಗ್ಗೆ ಜಾಗೃತರಾಗಬೇಕು ಎಂದು ತಿಳಿಸಿದರು.

ತಿಪಟೂರು ಭೇಟಿ ಪರಿಶೀಲನೆ :

      ತಿಪಟೂರು ತಾಲೂಕಿನಲ್ಲಿರುವ ಕೋವಿಡ್ ಪರೀಕ್ಷೆ ಲ್ಯಾಬ್, ಆಸ್ಪತ್ರೆ ಮತ್ತು ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಅಲ್ಲಿನ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಕೆಲವು ಸೂಚನೆ ನೀಡಿದರು. ಈ ವೇಳೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಸೇರಿದಂತೆ ಇತರರಿದ್ದರು.

(Visited 6 times, 1 visits today)