ತುಮಕೂರು:

      ದೇಶದಲ್ಲಿ ಸುಳ್ಳುಹೇಳುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಬಡಜನರನ್ನು, ಕಾರ್ಮಿಕ ವರ್ಗದವರನ್ನು ಮೋಸ ಮಾಡಿದ್ದಾರೆ ಎಂದು ಸಿಪಿಐನ ಜಿಲ್ಲಾ ಉಸ್ತುವಾರಿ ಶೇಷಾದ್ರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

      ಸಿಪಿಐ ಪಕ್ಷದ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬಡಜನರಿಗೆ ವಿವಿಧ ಆಶ್ವಾಸನೆಗಳನ್ನು ನೀಡಿತ್ತು.ಅದರಲ್ಲಿ ಇಲ್ಲಿಯವರೆಗೆ ಯಾವೊಂದು ಭರವಸೆಯೂ ಈಡೇರಿಲ್ಲ. ಬದಲಿಗೆ ನೋಟು ಅಮಾನಿಕರಣ, ಜಿಎಸ್‍ಟಿ ಜಾರಿಯಂತಹ ಯೋಜನೆಗಳಿಂದ ಬಡವರಿಗೆ ಸಮಸ್ಯೆಯನ್ನುಂಟು ಮಾಡಿದೆ ಎಂದರು.

      ಇಂದು ಕೇಂದ್ರದಲ್ಲಿ ಬಿಜೆಪಿ ಪಕ್ಷ ಇಲ್ಲ.ಮೋದಿ ಪಕ್ಷ ಮಾತ್ರ ಇದೆ. ಮೋದಿಯವರು ಸರ್ವಾಧಿಕಾರ ಧೋರಣೆಯನ್ನು ತೋರುತ್ತಿದ್ದಾರೆ. ಅದಕ್ಕಾಗಿಯೇ ವಿವಿಧ ಪಕ್ಷಗಳು ಬಿಜೆಪಿಯೊಂದಿಗಿನ ಮೈತ್ರಿ ತ್ಯಜಿಸಿ ಬೇರೆಯಾಗಿದ್ದಾರೆ. ಕೇಂದ್ರ ಸರ್ಕಾರವು ರೈತರ ಹಾಗೂ ಕಾರ್ಮಿಕರ ವಿರೋಧಿಯಾಗಿದೆ.ಚುನಾವಣೆ ಮುಂಚೆ ಸದಾಶಿವ ಆಯೋಗದ ವರದಿ ಜಾರಿ ಮಾಡಲಾಗು ತ್ತದೆ ಎಂದು ಹೇಳಿತ್ತು.ಇಂದು ಸದಾಶಿವ ಆಯೋಗ ವರದಿ ಜಾರಿಮಾಡಲು ಆಗುವುದಿಲ್ಲ ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಪತ್ರ ಸಲ್ಲಿಸಿದ್ದಾರೆ.ಇದೀಗ ಚುನಾವಣೆ ಬಂದಾಗ ರೈತ ಕುಟುಂಬಗಳಿಗೆ ಒಂದು ವರ್ಷದಲ್ಲಿ 6 ಸಾವಿರ ರೂ ನೀಡಲಾಗುತ್ತೆ ಎಂದು ಘೋಷಣೆ ಮಾಡಿರುವುದು ವಿಪರ್ಯಾಸ ಎಂದರು.

      ಪ್ರಧಾನಿ ಅದವರು ಪ್ರಧಾನ ಸೇವಕ ಎಂದು ಬಿಂಬಿಸಿದ್ದರು. ಆದರೆ ಇಂದು ಯಾರಿಗೆ ಸೇವಕರಾಗಿದ್ದಾರೆ ಎಂಬುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ.ಬೆರಳಣಿಕೆಯ ಶ್ರೀಮಂತರಿಗೆ ಮಾತ್ರ ಸೇವಕರಾಗಿದ್ದಾರೆ. ದೇಶದಲ್ಲಿ 10 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದಿದ್ದ ಮೋದಿಯವರು ಸೃಷ್ಠಿ ಮಾಡಿದ್ದು ಕೇವಲ 27 ಲಕ್ಷ ಮಾತ್ರ. ಈ ನಿಟ್ಟಿನಲ್ಲಿ ಅನೇಕ ವಿದ್ಯಾವಂತರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ.ತುಮಕೂರು ಜಿಲ್ಲೆಯಲ್ಲಿನ ಫುಡ್ ಪಾರ್ಕ್‍ನಲ್ಲಿ ಉದ್ಯೋಗ ಸೃಷ್ಠಿಯಾಗಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಲಭಿಸುತ್ತಿಲ್ಲ.ಅಲ್ಲದೆ ಇವರ ಕಾರ್ಮಿಕ ವಿರೋಧಿ ನೀತಿಗಳಿಂದ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದರಲ್ಲದೆ, ಅಚ್ಚೆ ದಿನ್ ಎಂದು ಬೊಬ್ಬೆ ಹೊಡೆಯುವ ಮೋದಿಯವರಿಂದ ಕೇವಲ ಅಂಬಾನಿ, ಅದಾನಿ, ನೀರವ್‍ಮೋದಿ, ವಿಜಯ್ ಮಲ್ಯ ಅಂತಹವರಿಗೆ ಮಾತ್ರ ಅಚ್ಚೆದಿನ್ ಬಂದಿದೆ ಹೊರತು ಬಡಜನರಿಗಲ್ಲ ಎಂದು ಆರೋಪಿಸಿದರು.

      ಮೋದಿಯವರು ಸ್ವಚ್ಛಭಾರತ್ ಎಂಬ ಘೋಷಣೆ ಮಾಡಿ ಕೇವಲ ಒಂದೆರಡು ಕಡೆ ಪೊರಕೆ ಇಟ್ಟುಕೊಂಡು ಫೋಟೋಗಳಿಗೆ ಫೋಸ್ ನೀಡಿದ್ದಾರೆ ಹೊರತು ಸ್ವಚ್ಛಭಾರತ್ ಸಮರ್ಪಕವಾಗಿ ಜಾರಿಯಾಗಿಲ್ಲ.ಈ ಯೊಜನೆ ಅಡಿಯಲ್ಲಿ ಪ್ರತಿ ಮನೆಮನೆಗೆ ಶೌಚಾಲಯಗಳನ್ನು ನಿರ್ಮಿಸಿದರು. ಇದು ಒಳ್ಳೆಯ ಕೆಲಸವಾದರೂ ಈ ಶೌಚಾಲಯಗಳಿಗೆ ನೀರು ಇಲ್ಲದೆ ಹಿಂದಿನ ಸ್ಥಿತಿಯೇ ಮುಂದುವರೆದಿದೆ ಎಂದು ಶೇಷಾದ್ರಿ ದೂರಿದರು.

      ಸಿಪಿಐ(ಎಂ)ಪಕ್ಷದ ಬಿ.ಉಮೇಶ್ ಮಾತನಾಡಿ, ಮೋದಿಯವರು ನೀಡಿದ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ ಹೊರತು ಅವು ಈಡೇರಿಲ್ಲ. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ತೈಲ ಬೆಲೆ ಹೆಚ್ಚು ಮಾಡಿದ್ದಾರೆ. ಕೇವಲ 400 ರಿಂದ 500 ಇದ್ದ ಗ್ಯಾಸ್ ಬೆಲೆ ಇಂದು 800ಕ್ಕೇರಿದೆ. ಈ ಮುಂಚೆ 23000 ಸಾವಿರ ಇದ್ದ ಆರ್‍ಎಸ್‍ಎಸ್ ಶಾಖೆಗಳು ಇಂದು 85 ಸಾವಿರವರೆಗೆ ಬೆಳೆದಿವೆ. ಇವರು ಕೇವಲ ಇವರ ಸಂಘ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಿಕೊಳ್ಲುತ್ತಿದ್ದಾರೆ ಹೊರತು ಜನ ಸಮಾನ್ಯರ ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ ಎಂದರು.

      ಈ ಹಿಂದೆ ಎಡಪಕ್ಷಗಳು ರಾಷ್ಟ್ರೀಯ ಪಕ್ಷಗಳು ಮಾಡುತ್ತಿದ್ದ ವಿರೋಧ ಧೊರಣೆ ಬಗ್ಗೆ ಮಾತನಾಡಿದರೆ ನಮ್ಮ ಮೇಲೆ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ಈಗ ಎಡಪಕ್ಷಗಳು ಮುಂದಾಲೋಚನೆ ಮಾಡಿವೆ. ಅವರಿಗೆ ಬೆಂಬಲ ನೀಡಬೇಕು ಎಂಬ ಭಾವನೆ ಮತದಾರರಲ್ಲಿ ಬಂದಿದೆ. ಈ ನಿಟ್ಟಿನಲ್ಲಿ ಅತ್ಯಧಿಕ ಮತಗಳಿಂದ ಸಿಪಿಐ ಅಭ್ಯರ್ಥಿ ಶಿವಣ್ಣ ಅವರು ಗೆಲ್ಲಲಿದ್ದಾರೆ ಎಂದು ತಿಳಿಸಿದರು.

      ಸಿಪಿಐನ ರಾಜ್ಯ ಕಾರ್ಯದರ್ಶಿ ಕೆ.ಎಸ್.ಜನಾರ್ಧನ್ ಮಾತನಾಡಿ, ಬಿಜೆಪಿ ಪಕ್ಷದವರು ಸಭೆಗಳಿಗೆ ಜನರಿಗೆ ಹಣ ನೀಡಿ ಕರೆಯಿಸಿ ಅವರಿಂದ ಮೋದಿ ಮೋದಿ ಎಂದು ಜೈಕಾರ ಕೂಗಿಸಿ ಮೋದಿ ಅಲೆ ಇದೆ ಎಂದು ಬಿಂಬಿಸುತ್ತಿದ್ದಾರೆ. ಜನಸಾಮಾನ್ಯರಿಗೆ ಉಪಯೋಗವಾಗುವ ಯೋಜನೆಗಳನ್ನು ಒಂದೂ ತಂದಿಲ್ಲ. ಕೇವಲ ಭರವಸೆ ಕೊಡು ಮುಖ ತಿರುಚುವ ಬಿಜೆಪಿಯನ್ನು ತಿರಸ್ಕರಿಸಿ ಎಂದು ತಿಳಿಸಿದರು.

       ಸಿಪಿಐನ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ,ಅಭ್ಯರ್ಥಿ ಪರವಾಗಿ ಈಗಾಗಲೇ ವಿವಿಧ ತಾಲೂಕುಗಳಲ್ಲಿ ಪ್ರಚಾರ ಕಾರ್ಯ ಮುಕ್ತಾಯಗೊಂಡಿದೆ. ಉಳಿದ ತಾಲೂಕುಗಳಲ್ಲಿಯೂ ಪ್ರಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

 

(Visited 124 times, 1 visits today)