ತುಮಕೂರು:

      ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಸುಸ್ಥಿರ ಜಲಮೂಲ ಹೊಂದಿರುವ 83 ಗ್ರಾಮಗಳ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ನಿರ್ಣಯ ಕೈಗೊಳ್ಳಲಾಯಿತು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿಂದು ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

      ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 7 ಬಹುಗ್ರಾಮ ಕುಡಿಯುವ ಯೋಜನೆ ಮೂಲಕ 83 ಸುಸ್ಥಿರ ಜಲಮೂಲ ಹೊಂದಿರುವ ಗ್ರಾಮಗಳ ಪ್ರತಿ ಮನೆ ಮನೆಗೂ 24*7 ನೀರು ಒದಗಿಸಲು ಕಾರ್ಯಾತ್ಮಕವಾಗಿ ನಳ ಅಳವಡಿಕೆಗಾಗಿ ಕ್ರಿಯಾ ಯೋಜನೆಗೆ ಒಪ್ಪಿಗೆ ತೆಗೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.

      ನಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆಯಡಿ ನಳ ಅಳವಡಿಕೆಗೆ ಗುರುತಿಸಿರುವ ಹಳ್ಳಿಗಳಲ್ಲಿ ಶೇ.100ರಷ್ಟು ನಳ ಅಳವಡಿಸಬೇಕು. ನಮ್ಮ ಮನೆಗೆ ನಳ ಅಳವಡಿಸಿಲ್ಲ ಎಂಬ ದೂರುಗಳು ಕೇಳಿ ಬರದಂತೆ ಪ್ರತಿ ಮನೆಗೂ ನಳ ಅವಳಡಿಕೆ ಕಾರ್ಯ ಯಶಸ್ವಿಯಾಗಬೇಕು ಎಂದು ಇಂಜಿನಿಯರ್ ಗಳಿಗೆ ಸೂಚಿಸಿದರು.

    ಮುಂದಿನ ದಿನಗಳಲ್ಲಿ ನೀರಿನ ಮೂಲ ಹೆಚ್ಚಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ಕೆರೆಗಳ ಪುನರುಜ್ಜೀವನ ಕಾರ್ಯಕ್ರಮಕ್ಕೂ ಹೆಚ್ಚಿನ ಆದ್ಯತೆ ಕೊಡಬೇಕು. ನೀರಿನ ಮಟ್ಟ ವೃದ್ಧಿಯಾದರೆ ಜಲಮೂಲ ಲಭ್ಯವಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್ ಮಾತನಾಡಿ, ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮಹತ್ತರ ಉದ್ದೇಶದೊಂದಿಗೆ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆ ಯಾವ ಕಾರಣಕ್ಕೂ ವಿಫಲವಾಗದಂತೆ ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.

     ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೆ. ಮುತ್ತಪ್ಪ ಹಾಗೂ ಸಹಾಯಕ ಅಭಿಯಂತರ ಮಮತಾ ಮಾತನಾಡಿ, ಜಿಲ್ಲೆಯಲ್ಲಿ 7 ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಮೂಲಕ ಯಾವ್ಯಾವ ಗ್ರಾಮಗಳಿಗೆ ಎಳ್ಳಷ್ಟು ನಳ ಅಳವಡಿಸಲಾಗುವುದು. ಸುಸ್ಥಿರ ನೀರಿನ ಮೂಲ ಹೇಗೆ ಎಂಬುದರ ವರದಿಯನ್ನು ಸಭೆಗೆ ತಿಳಿಸಿದರು.

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು, ಒಂದೊಂದೇ ಗ್ರಾಮಗಳ ಜಲಮೂಲ ಮತ್ತು ನಳ ಅಳವಡಿಕೆ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿ ನಿರ್ಣಯ ತೆಗೆದುಕೊಂಡರು. ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ, ಕೃಷಿ ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ, ವಿಭಾಗೀಯ ಅರಣ್ಯಾಧಿಕಾರಿ ಡಿ.ಎನ್. ನಾಗರಾಜು, ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರುಣ್ ಇದ್ದರು.

 

(Visited 2 times, 1 visits today)