ತುಮಕೂರು:

      ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರೈತರ ಜಮೀನಿನಲ್ಲಿ ಸಸಿ ನೆಟ್ಟು ಗಿಡಕ್ಕೆ ನೀರು ಹಾಕುವ ಮೂಲಕ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದ್ದಾರೆ.

       ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸಸಿಗಳನ್ನು ನೆಡುವುದಕ್ಕೆ ಗುಂಡಿಗಳನ್ನು ಅಗೆದು ಸಿದ್ದಪಡಿಸಿಕೊಳ್ಳಲಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಕಾರಣ ಯಾವುದೇ ಸಭೆ, ಸಮಾರಂಭಗಳನ್ನು ಆಯೋಜಿಸದೆ, ಸಾರ್ವಜನಿಕರನ್ನು ಒಗ್ಗೂಡಿಸದೆ ಸರಳ ರೀತಿಯಲ್ಲಿ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವ ಮೂಲಕ ವ್ಯವಸ್ಥಿತವಾಗಿ ವಿಶ್ವ ಪರಿಸರ ದಿನವನ್ನು ಆಚರಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

      ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಶೇ. 65ರಷ್ಟು ಆರ್ಥಿಕ ವೆಚ್ಚವನ್ನು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಮೀಸಲಿಡಲಾಗಿದೆ. ಬದು ಬೇಸಾಯ ಹಾಗೂ ಅರಣ್ಯೀಕರಣಕ್ಕಾಗಿ ಈ ಸಾಲಿನಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಸಾವಿರಾರು ಸಸಿಗಳನ್ನು ಬೆಳೆಸಲಾಗಿದೆ. ಸಾಮಾಜಿಕ ಅರಣ್ಯ/ಪ್ರಾದೇಶಿಕ ಅರಣ್ಯ ಇಲಾಖೆಗಳು ಅರಣ್ಯ ಪ್ರದೇಶ ಹಾಗೂ ರಸ್ತೆ ಬದಿ, ನೆಡು ತೋಪು, ಕಾಲುವೆ ದಂಡೆಗಳು, ಕೆರೆ ಅಂಚು, ಶಾಲೆ, ಅಂಗನವಾಡಿ ಮತ್ತು ಸ್ಮಶಾನಗಳಲ್ಲಿ ಸಸಿ ನಾಟಿಗೆ ಗುಂಡಿಗಳನ್ನು ತೆಗೆದು ಅವುಗಳನ್ನು ಸರಳವಾಗಿ ನಾಟಿ ಮಾಡಲು ಕ್ರಮ ವಹಿಸುವಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೋಂಕು ಹರಡಿರುವುದರಿಂದ ವಿಶ್ವ ಪರಿಸರ ದಿನಾಚರಣೆಯಂದು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಸೇರಿದಂತೆ ಎಲ್ಲಾ ಅಗತ್ಯ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು. ವೈಯಕ್ತಿಕ ಫಲಾನುಭವಿಗಳು ತಮ್ಮ ಸ್ವಂತ ಜಮೀನುಗಳಲ್ಲಿ ಸಸಿಗಳನ್ನು ನೆಡಲು ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲದೆ ಈಗಾಗಲೇ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಲಭ್ಯವಿರುವ ಸಸಿಗಳನ್ನು ಗ್ರಾಮ ಪಂಚಾಯಿತಿಗಳಿಗೆ ಸಾಗಣೆ ಮಾಡಲು ಎಲ್ಲ ರೀತಿಯ ಕ್ರಮ ವಹಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಲ, ಹತ್ತಿ, ಹೊಂಗೆ, ಬೇವು, ಮತ್ತಿ, ಮಾವು, ಹಲಸು ಹಾಗೂ ಇನ್ನಿತರೆ ಹಣ್ಣಿನ ಗಿಡಗಳನ್ನು ಮತ್ತು ಶಾಲೆ, ಅಂಗನವಾಡಿ , ಮನೆ ಅಂಗಳದಲ್ಲಿ ಕೈತೋಟ ಮಾಡಲು ನಿಂಬೆ, ದಾಳಿಂಬೆ, ತೆಂಗು, ನುಗ್ಗೆ ಇನ್ನಿತರ ಸಸಿಗಳನ್ನು ಬೆಳೆಸಲು ಜಿಲ್ಲೆಯಲ್ಲಿ ಎರಡು ನೂರು ಸ್ವಸಹಾಯ ಸಂಘಗಳನ್ನು ಗುರುತಿಸಿದ್ದು, ಈ ಸಸಿಗಳನ್ನು ಬೆಳೆಸಲು ಕ್ರಮಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ/ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರ್ಸರಿ ಬೆಳೆಸುವ ಮುಖಾಂತರ ಸ್ಥಳೀಯರಿಗೆ ಸಲಿಸಾಗಿ ಸಸಿಗಳು ದೊರೆಯುವಂತೆ ಕ್ರಮವಹಿಸಲಾಗುವುದು.

      ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಮಹಾತ್ಮಗಾಂಧಿ ನರೇಗಾ ಯೋಜನೆ ಗ್ರಾಮೀಣ ಭಾಗದ ಜನರ ಪಾಲಿಗೆ ಉದ್ಯೋಗವನ್ನು ಒದಗಿಸುವ ಪ್ರಮುಖ ಯೋಜನೆಯಾಗಿದೆ. ದುಡಿಯೋಣ ಬಾ ಅಭಿಯಾನ, ಬದು ಬೇಸಾಯ ಮಾಸಾಚರಣೆ ಮೂಲಕ ಗ್ರಾಮೀಣ ಭಾಗದ ಜನರಿಂದ ವೈಯಕ್ತಿಕ/ಸಮುದಾಯ ಕಾಮಗಾರಿಗಳಿಗೆ ಕೆಲಸದ ಬೇಡಿಕೆಯನ್ನು ಪಡೆದು, ಕೆಲಸ ನೀಡುವ ಕಾರ್ಯವನ್ನು ಗ್ರಾಮ ಪಂಚಾಯಿತಿಗಳು ಮಾಡುತ್ತಿವೆ.

      ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಲು ಆಸಕ್ತಿ ಇರುವ ಕೂಲಿ ಕಾರ್ಮಿಕರು ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿ, ಕೂಲಿ ಕೆಲಸವನ್ನು ಪಡೆಯಬಹುದಾಗಿದೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಜನತೆ ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ನರೇಗಾ ಯೋಜನೆಯಡಿ ದೊರೆಯುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ನರೇಗಾ ಯೋಜನೆಯಡಿ 2021-22ನೇ ಸಾಲಿನಲ್ಲಿ 62 ಲಕ್ಷ ಮಾನವ ದಿನಗಳ ಸೃಜನೆ ಮಾಡುವ ಗುರಿ ಹೊಂದಲಾಗಿದ್ದು, ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 7.75 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಜೂನ್ ಹಾಗೂ ಜುಲೈನಲ್ಲಿ ಪ್ರಗತಿಯ ವೇಗವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಜಿಲ್ಲಾ/ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನರೇಗಾ ಯೋಜನೆಯಡಿ ಕೆಲಸ ಮಾಡುವಾಗ ಕೂಲಿ ಕಾರ್ಮಿಕರು ಆಕಸ್ಮಿಕವಾಗಿ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವಿಕಲರಾದಲ್ಲಿ ಅಮ್ ಆದ್ಮಿ ವಿಮಾ ಯೋಜನೆಯಲ್ಲಿರುವಂತೆ 2 ಲಕ್ಷ ರೂ.ವರೆಗೆ ಪರಿಹಾರ ಪಡೆಯಲು ಅವಕಾಶವಿರುತ್ತದೆ. 60 ವರ್ಷ ಮೀರಿದ ಹಿರಿಯ ನಾಗರೀಕರು ಹಾಗೂ ವಿಕಲಚೇತನರಿಗೆ ಕಾಮಗಾರಿ ಕೆಲಸದಲ್ಲಿ ಅವಕಾಶವಿದ್ದು ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ಇರುತ್ತದೆ. ಈ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 5 times, 1 visits today)