ತುಮಕೂರು:

     ನಗರದ ಸರಸ್ವತಿಪುರಂ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ರಸ್ತೆಯಲ್ಲಿ ಕರ್ನಾಟಕ ಬ್ಯಾಂಕ್‍ನ ತುಮಕೂರು ಪ್ರಾದೇಶಿಕ ಕಚೇರಿ ಕಟ್ಟಡಕ್ಕೆ ಕರ್ನಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ್ ಅವರು ಪೂಜೆ ಸಲ್ಲಿಸುವ ಮೂಲಕ ಮೂಲಕ ಗುರುವಾರ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ್ ಅವರು, ಜುಲೈ 15 ಕರ್ನಾಟಕ ಬ್ಯಾಂಕಿಗೆ ಸ್ಮರಣೀಯವಾದ ದಿನ. ಕಾರಣ ತುಮಕೂರು ವಲಯದ ರಚನೆ ನಂತರ ಪ್ರಥಮ ಭಾರಿಗೆ ಈ ವಲಯಕ್ಕೆ ವಲಯ ಕಚೇರಿ ನಮ್ಮದೇ ಸ್ವಂತ ಕಟ್ಟಡ ಕಟ್ಟುವಂತಹ ಕಾರ್ಯದ ಶಿಲಾನ್ಯಾಸ ನೆರವೇರಿದೆ. ಈ ಕಟ್ಟಡ ನಿರ್ಮಾಣ 15ರಿಂದ 18 ತಿಂಗಳಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂಬ ಭರವಸೆಯನ್ನು ನೀಡಿದರು.
ಬೆಂಗಳೂರಿನ ಪ್ರಾದೇಶಿಕ ಕಚೇರಿ, ಮೈಸೂರಿನ ಪ್ರಾದೇಶಿಕ ಕಚೇರಿಯ ನಂತರ ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವುದು ಮೂರನೇ ಪ್ರಾದೇಶಿಕ ಕಚೇರಿಯಾಗಿದ್ದು, ಪ್ರದಾನಿಯವರ ಆತ್ಮನಿರ್ಭರ ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಸಾಗಿದೆ ಎಂದರು.
ಕರ್ನಾಟಕ ಬ್ಯಾಂಕ್ ಇನ್ನೆರಡು ವರ್ಷದಲ್ಲಿ ಶತಮಾನೋತ್ಸವ ವರ್ಷ ಆಚರಿಸುತ್ತಿದೆ. 2023-24 ನಮ್ಮ ಕರ್ನಾಟಕ ಬ್ಯಾಂಕ್‍ನ ಶತಮಾನೋತ್ಸವ ವರ್ಷ. ಈ ಶತಮಾನೋತ್ಸವ ವರ್ಷಾಚರಣೆ ವಿಶಿಷ್ಟ ಹಾಗೂ ವಿಭಿನ್ನವಾಗಿರಬೇಕು, ಮುಂದಿನ 100 ವರ್ಷಗಳ ಪರ್ಯಂತ ಕರ್ನಾಟಕ ಬ್ಯಾಂಕ್‍ಗೆ ಶತಮಾನೋತ್ಸವ ವರ್ಷ ಆಚ ರಣೆ ದಾರಿದೀಪವಾಗಬೇಕು ಎಂಬ ಕನಸನ್ನು ನಿಮ್ಮೆಲ್ಲರ ಪರವಾಗಿ ನಾನು ಕಂಡಿದ್ದೇನೆ.

ಆ ಕನಸು ಸಾಕಾರಗೊಳಿಸುವ ಹಂತದಲ್ಲಿ ಇಂದು ತುಮಕೂರಿನ ವಲಯದ ಕರ್ನಾಟಕ ಬ್ಯಾಂಕಿನ ಶತಮಾನೋತ್ಸವ ಕಟ್ಟಡಕ್ಕೆ ಅಡಿಪಾಯ ಹಾಕಿದ್ದೇವೆ ಎಂದು ತಿಳಿಸಿದರು.
ಇದರ ಜೊತೆ ಜೊತೆಗೆ ಮಂಗಳೂರಿನಲ್ಲಿರುವ ಪ್ರಧಾನ ಕಚೇರಿಯಲ್ಲಿ ಒಂದು ಶತಮಾನೋತ್ಸವ ಕಟ್ಟಡ ಹಾಗೂ ಉಡುಪಿ ಪ್ರಾದೇಶಿಕ ಕಚೇರಿಯಲ್ಲಿ ಆ ವಲಯಕ್ಕೆ ತಕ್ಕಂತೆ ಒಂದು ಶತಮಾನೋತ್ಸವ ಕಟ್ಟಡ ಹಾಗೂ ಕಲ್ಕತ್ತದಲ್ಲಿ ಕರ್ನಾಟಕ ಬ್ಯಾಂಕಿನ ಶತಮಾನೋತ್ಸವ ಕಟ್ಟಡ ಮತ್ತು ತುಮಕೂರಿನ ಪ್ರಾದೇಶಿಕ ವಲಯದ ಶತಮಾನೋತ್ಸವ ಕಟ್ಟಡ. ಹೀಗೆ 4 ಶತಮಾನೋತ್ಸವ ಕಟ್ಟಡಗಳನ್ನು ಕಟ್ಟುವುದಕ್ಕೆ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಈಗಾಗಲೇ ತುಮಕೂರು ಮತ್ತು ಉಡುಪಿ ವಲಯಗಳ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ್ದು, ಮಂಗಳೂರು ಮತ್ತು ಕಲ್ಕತ್ತದಲ್ಲಿ ಸದ್ಯದಲ್ಲೇ ಶಿಲಾನ್ಯಾಸ ನೆರವೇರಲಿದೆ. ಈ ಎಲ್ಲಾ ಕಟ್ಟಡಗಳು ಸಹ ನಮ್ಮ ಶತಮಾನೋತ್ಸವ ವರ್ಷಕ್ಕೆ ನಿರ್ಮಾಣವಾಗಿ ಆ ಸಂದರ್ಭದಲ್ಲಿ ಲೋಕಾರ್ಪಣೆ ಮಾಡುವುದಕ್ಕೆ ಸಿದ್ಧತೆ ನಡೆದಿದೆ ಎಂದರು.
ಇಷ್ಟೆಲ್ಲಾ ಕಟ್ಟಡಗಳು ಇದ್ದರೂ ಸಹ ಕಟ್ಟಡದ ಹಿಂದಿನ ಭಾವ ಹಾಗೂ ಕಟ್ಟಡದ ಹಿಂದಿನ ಶಕ್ತಿ ಮುಖ್ಯ, ನಾವು ಯಾವ ಸಂಕಲ್ಪ ಮಾಡಿದ್ದೇವೆಯೋ ಆ ಸಂಕಲ್ಪ ಸಾಕಾರಗೊಳ್ಳಲು ಬ್ಯಾಂಕಿನ ಬೆಳವಣಿಗೆ ಹಾಗೂ ಬ್ಯಾಂಕಿನ ಎಲ್ಲಾ ಸಿಬ್ಬಂದಿ ವರ್ಗದ ಪರಿಶ್ರಮವಿದೆ ಎಂದು ಹೇಳಿದರು.
ಬ್ಯಾಂಕಿನ ವ್ಯವಹಾರವನ್ನು ವೃದ್ಧಿ ಮಾಡಲು ಮತ್ತು ಗ್ರಾಹಕರಿಗೆ ಇನ್ನೂ ಅತ್ಯುತ್ತಮ ಬ್ಯಾಂಕಿಂಗ್ ಸೇವೆಯನ್ನು ಕೊಡುವಂತಹ ಸಂಕಲ್ಪ ನಮ್ಮದಾಗಿದೆ. ನಾವು ಮಾಡುವ ಕಾರ್ಯದ ಸಂಕಲ್ಪದ ಹಿಂದೆ ನಮ್ಮ ವ್ಯವಹಾರವನ್ನು ವಿಸ್ತಾರ ಮಾಡುವಂತಹ ಪ್ರಯತ್ನವಿದೆ ಎಂದರು.
ಈ ಕಟ್ಟಡ ಸುಮಾರು 18 ಸಾವಿರ ಚದುರ ಅಡಿ ವಿಸ್ತೀರ್ಣ ಹೊಂದಿದ್ದು, 34 ಸಾವಿರ ಚದುರ ಅಡಿಗಳ ಕಟ್ಟಡ ನಿರ್ಮಾಣವಾಗಲಿದೆ. ಇಲ್ಲಿ ಪ್ರಾದೇಶಿಕ ಕಚೇರಿ ಜೊತೆಗೆ ಒಂದು ಶಾಖಾ ಕಚೇರಿ ಮತ್ತು ಸುತ್ತಮುತ್ತಲಿರುವ ಎಲ್ಲಾ ಕರ್ನಾಟಕ ಬ್ಯಾಂಕ್ ಶಾಖೆಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕರೆನ್ಸಿ ಸರಬರಾಜು ವ್ಯವಸ್ಥೆ ಹೊಂದಿರುವ ಕಚೇರಿ, ಇದರ ಜೊತೆಗೆ ನಮ್ಮ ಸಹೊದ್ಯೋಗಿಗಳು ಉಳಿದುಕೊಳ್ಳಲು ವಸತಿ ವ್ಯವಸ್ಥೆ ಸುಮಾರು 8 ಪ್ಲಾಟ್‍ಗಳನ್ನು ಕಟ್ಟುವಂತಹ ಒಂದು ಅತ್ಯುತ್ತಮವಾದ ಸುಸಜ್ಜಿತ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಕರ್ನಾಟಕ ಬ್ಯಾಂಕ್‍ನ 8500 ಸಿಬ್ಬಂದಿ, 1 ಕೋಟಿ 10 ಲಕ್ಷ ಗ್ರಾಹಕರು, 2.26 ಲಕ್ಷ ಷೇರುದಾರರನ್ನು ಹೊಂದಿರುವ ತುಮಕೂರು ವಲಯ ಕಚೇರಿ ಮುಂದೆ ನಂ.1 ಪ್ರಾದೇಶಕ ಕಚೇರಿಯಾಗಿ ಬೆಳೆಯಲಿ, ಆರ್ಥಿಕ ಬೆಳವಣಿಗೆಯ ಹರಿಕಾರ ಆಗಬೇಕೆಂದು ಆಶಿಸಿದರು.

(Visited 8 times, 1 visits today)