ತುಮಕೂರು :

      ಜಿಲ್ಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ಲಸಿಕೆಗಳನ್ನು ಅರ್ಹರಿಗೆ ನೀಡುವಲ್ಲಿ ಯಾವುದೇ ಬೇಜವಾಬ್ದಾರಿ ತೋರದೆ ಶೀಘ್ರ ಲಸಿಕಾಕರಣ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 33 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಈ ಪೈಕಿ 25 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದು, 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಲ್ಲಿ ಜಾಗೃತಿ ಮೂಡಿಸುವುದಲ್ಲದೆ ಆಸ್ಪತ್ರೆಗೆ ದಾಖಲಾಗುವವರಿಗೆ ಕಡ್ಡಾಯವಾಗಿ ಕನಿಷ್ಟ 1 ಅಥವಾ 2 ಡೋಸ್ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ನೀಡುವ ಮೂಲಕ ಶೇ.100ರಷ್ಟು ಲಸಿಕಾಕರಣ ಪೂರ್ಣಗೊಳಿಸಬೇಕು.. ಇತ್ತೀಚೆಗೆ ಕೋವಿಡ್‍ನಿಂದ ಮೃತಪಟ್ಟ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಲಸಿಕಾಕರಣ ವಿಳಂಬವಾದಲ್ಲಿ ಆಯಾ ತಾಲ್ಲೂಕಿನ ಸಂಬಂಧಿತ ಅಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

      ಬೆಳೆ ಹಾನಿ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಪರಿಹಾರ ಪೋರ್ಟಲ್‍ನಲ್ಲಿ ದಾಖಲಾಗದ ಪ್ರಕರಣಗಳನ್ನು ದಾಖಲಿಸಬೇಕು ಎಂದರಲ್ಲದೆ ಬಾಕಿ ಇರುವ ಪ್ರಕ್ರಿಯೆಗಳನ್ನು ಆದಷ್ಟು ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ನಕಲಿ ದಾಖಲಾತಿಗಳಿಗೆ ಅವಕಾಶ ಮಾಡಿಕೊಡದೆ ನೈಜ ಫಲಾನುಭವಿಗಳಿಗೆ ಪರಿಹಾರ ದೊರೆಯುವಂತೆ ಕ್ರಮವಹಿಸಬೇಕು. ಕೇವಲ ವಿವರಣೆ ನೀಡಲು ಸೀಮಿತವಾಗದೆ ಮನೆ ಕಳೆದುಕೊಂಡವರಿಗೆ ಹಾಗೂ ಜಾನುವಾರು ಕಳೆದುಕೊಂಡು ನಷ್ಟದಲ್ಲಿರುವವರಿಗೆ ಪರಿಹಾರ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

      ಜಿಲ್ಲೆಯಲ್ಲಿ ಭೂಮಿ ಪೆಂಡೆನ್ಸಿ, ಕೋರ್ಟ್ ಪ್ರಕರಣಗಳು, ಪೈಕಿ ಪಹಣಿ ಒಗ್ಗೂಡಿಸುವಿಕೆ, ಪಹಣಿ ಕಲಂ 3/9 ಮಿಸ್ ಮ್ಯಾಚ್, ಕಂದಾಯ ಗ್ರಾಮಗಳ ರಚನೆ ಹಾಗೂ ಪರಿಶೀಲನೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳನ್ನು ವಿನಾ ಕಾರಣ ಮುಂದೂಡದೆ ನಿರ್ಧಿಷ್ಟ ಸಮಯ ಹಾಗೂ ನಿರ್ಧಿಷ್ಟ ಗುರಿಗಳೊಂದಿಗೆ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ ನರೇಗಾ ಯೋಜನೆಯಡಿ ಸರ್ಕಾರದಿಂದ ಅನುಮೋದನೆಗೊಂಡಿರುವ ‘ಪವಿತ್ರ ವನ’ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಟಾನಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ಪವಿತ್ರ ವನವನ್ನು ಉದ್ಯಾನವನದ ಪರಿಕಲ್ಪನೆಯಲ್ಲಿ ನಿರ್ಮಿಸಲಾಗುವುದು. ಇದರಲ್ಲಿ ಔಷಧೀಯ ಸಸಿಗಳು, ರಾಶಿ ವನ, ನಕ್ಷತ್ರವನ ಸೇರಿದಂತೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾರ್ಕ್ ನಿರ್ಮಾಣ ಮಾಡಲಾಗುವುದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿಗಳಾದ ವಿ.ಅಜಯ್, ಸೋಮಪ್ಪ ಕಡಕೋಳ, ಡಿಹೆಚ್‍ಒ ಡಾ: ನಾಗೇಂದ್ರಪ್ಪ, ತಹಸೀಲ್ದಾರ್‍ಗಳು ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 22 times, 1 visits today)