ತುಮಕೂರು:


ಕುಂಚಿಟಿಗ ಒಕ್ಕಲಿಗರ ಸಂಘ ಆರಂಭವಾಗಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸಂಘದವತಿ ಯಿಂದ ಜೂನ್ 25 ರಂದು ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ರಾಜ್ಯಮಟ್ಟದ ಕುಂಚಿಟಿಗ ಸಮುದಾಯದ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ತಿಳಿಸಿದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜೂನ್ 25 ರಂದು ಬೆಳಗ್ಗೆ 10 ಗಂಟೆಗೆ ಕುಂಚಿಟಿಗ ಸಮುದಾಯದ ಎಲ್ಲಾ ಪಂಗಡ, ಉಪಪಂಗಡಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ತುಮಕೂರಿನ ಅಮಾನಿಕೆರೆಯಲ್ಲಿರುವ ಗಾಜಿನ ಮನೆಯಲ್ಲಿ ಕುಂಚಿಟಿಗರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘವನ್ನು 1963ರಲ್ಲಿ ಸ್ಥಾಪಿಸಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಜನಾಂಗದ ಅಭಿವೃದ್ದಿಗೆ ಶ್ರಮಿಸಿದ ಬಿ.ರಂಗಣ್ಣ ಅವರ ಪುತ್ಥಳಿಯನ್ನು ಕುಂಚಟಿಗ ಭವನದ ಮುಂಭಾಗದಲ್ಲಿ ಆನಾವರಣ ಮಾಡಲಾಗುವುದು. ಅವರು ಸಂಘಕ್ಕೆ ನೀಡಿದ ಜಾಗದಲ್ಲಿ ಇಂದು ಗಂಡು ಮತ್ತು ಹೆಣ್ಣು ಮಕ್ಕಳ ಹಾಸ್ಟಲ್ ನಡೆಯುತ್ತಿದೆ.ಅಲ್ಲದೆ ಸರಕಾರದಿಂದ ಅವರ ಕಾಲದಲ್ಲಿ ಮಂಜೂರಾದ ಜಾಗದಲ್ಲಿ ಇಂದು ನಾಲ್ಕು ಕೋಟಿ ರೂ ವೆಚ್ಚದಲ್ಲಿ ಕುಂಚಟಿಗ ಭವನ ನಿರ್ಮಾಣ ಮಾಡ ಲಾಗಿದೆ. ಹಾಗಾಗಿ ಅವರನ್ನು ಶಾಶ್ವತವಾಗಿ ಸ್ಮರಿಸುವ ನಿಟ್ಟಿನಲ್ಲಿ ಪುತ್ಥಳಿ ಆನಾವರಣಕ್ಕೆ ಮುಂದಾಗಿದ್ದೇವೆ.ಇದರ ಜೊತೆಗೆ ಕುಂಚಿಟಿಗ ಭವನದ 2ನೇ ಮಹಡಿಯಲ್ಲಿ ಸುಮಾರು 1 ಕೋಟಿ ರೂಗಳಲ್ಲಿ ನಿರ್ಮಿಸಿರುವ,1500 ಜನರು ಕುಳಿತುಕೊಳ್ಳ ಬಹುದಾದ ಸುಸಜ್ಜಿತ ಸಭಾಭವನವನ್ನು ಸಹ ಇದೇ ವೇಳೆ ಉದ್ಘಾಟಿಸಲಾಗುವುದು ಎಂದು ಆರ್.ಕಾಮರಾಜ್ ತಿಳಿಸಿದರು.
ಈಗಾಗಲೇ ಬಟವಾಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಮಾಲಿ ಮರಿಯಪ್ಪ ಹಾಸ್ಟಲ್ ಪಕ್ಕದಲ್ಲಿರುವ 70*40 ಜಾಗದಲ್ಲಿ ತಲಾ 2.30 ಕೋಟಿ ರೂಗಳಲ್ಲಿ ಹೆಣ್ಣು ಮಕ್ಕಳ ಹಾಸ್ಟಲ್ ಹೆಚ್ಚುವರಿ ಕಟ್ಟಡ, ಹಾಗೆಯೇ ಗಂಡಮಕ್ಕಳ ಹಾಸ್ಟಲ್ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಗುದ್ದಲಿಪೂಜೆ ಸಹ ಇದೇ ವೇಳೆ ನಡೆಯಲಿದೆ. ಅಲ್ಲದೆ ಇದುವರೆಗೂ ಸಮುದಾಯದ ಬೆಳೆವಣಿಗೆ ಸಹಕರಿಸಿದ ಎಲ್ಲಾ ಧಾನಿಗಳನ್ನು ಈ ವೇಳೆ ಅಭಿನಂದಿಸುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.
ಜೂನ್ 25 ರಂದು ಗಾಜಿನಮನೆಯಲ್ಲಿ ನಡೆಯುವ ಕುಂಚಿಟಿಗ ಒಕ್ಕಲಿಗರ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಶ್ರೀಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಶ್ರೀನಂಜಾವಧೂತ ಸ್ವಾಮೀಜಿ, ವಿಶ್ವಕುಂಚಿಟಿಗ ಮಹಾಸಂಸ್ಥಾನದ ಶ್ರೀಹನುಮಂತನಾಥ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಈ ಹಿಂದಿನಂತೆ ಕುಂಚಿಟಿಗ ಒಕ್ಕಲಿಗರನ್ನು ಕೇಂದ್ರ ಓಬಿಸಿ ಜಾತಿ ಪಟ್ಟಿಗೆ ಸೇರಿಸಬೇಕೆಂದು ಒಕ್ಕೊರಲ ನಿರ್ಣಯವನ್ನು ಕೈಗೊಂಡು,ಸರಕಾರದ ಮೇಲೆ ಒತ್ತಡ ಹಾಕಲಾಗುವುದು. ಅಲ್ಲದೆ ಈ ಸಾಲಿನ ಯುಪಿಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಶಿರಾ ತಾಲೂಕಿನ ಕಲ್ಪನಾ ಮತ್ತು ಅರುಣಾ ಹಾಗೂ ಹೊಸಪೇಟೆ ತಾಲೂಕಿನ ಡಾ.ಬೆನಕ ಪ್ರಸಾದ್ ಅವರುಗಳನ್ನು ಇದೇ ವೇಳೆ ಅಭಿನಂಧಿಸಲಾಗುವುದು ಎಂದು ಆರ್.ಕಾಮರಾಜು ತಿಳಿಸಿದರು.
ಕುಂಚಿಟಿಗ ಒಕ್ಕಲಿಗರನ್ನು ಹಿಂದುಳಿದ ಜಾತಿಗಳಿಗೆ ಪಟ್ಟಿಗೆ ಸೇರಿಸಲು ಅಗತ್ಯವಿರುವ ಕುಲಶಾಸ್ತ್ರೀಯ ಅಧ್ಯಯನ ಈಗಾಗಲೇ ಮೈಸೂರು ವಿವಿಯ ಪ್ರೊ.ಕೃಷ್ಣಪ್ಪ ನೇತೃತ್ವದಲ್ಲಿ ನಡೆದು, ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಸರಕಾರ ಈ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲು ಮೀನಾಮೇಷ ಎಣಿಸುತ್ತಿದೆ.ಸದರಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ,ಡಿ.ವಿ.ಸದಾನಂದಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಇದೊಂದು ಪಕ್ಷಾತೀತ ಸಮಾವೇಶ ಎಂದು ಆರ್.ಕಾಮರಾಜು ಸ್ಪಷ್ಟಪಡಿಸಿದರು.
ಕುವೆಂಪು ಯುಗದ ಕವಿ, ಅವರ ಹೆಸರಿಗೆ ಕುಂದು ತರಲು ಯಾರೇ ಪ್ರಯತ್ನಿಸಿದರೂ ಸಮುದಾಯ ಮೌನವಾಗಿ ಇರದು. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ಲೋಪದೋಷ ಸರಿಪಡಿಸಲು ಒತ್ತಾಯಿಸಿ ಈಗಾಗಲೇ ಆದಿಚುಂಚನಗಿರಿಯ ಶ್ರೀನಿರ್ಮಲಾನಂದ ನಾಥಸ್ವಾಮೀಜಿಗಳ ನೇತೃತ್ವದಲ್ಲಿ ಜೂನ್ 18 ರಂದು ಬೃಹತ್ ಹೋರಾಟ ಬೆಂಗಳೂರಿನಲ್ಲಿ ಆಯೋಜಿಸ ಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗಳಲ್ಲಿಯೂ ಈ ಹೋರಾಟ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಉಪಾಧ್ಯಕ್ಷ ವೈ.ಆರ್.ವೇಣು ಗೋಪಾಲ್, ಕಾರ್ಯದರ್ಶಿ ರಾಜಕುಮಾರ್, ಜಂಟಿ ಕಾರ್ಯದರ್ಶಿ ಕೆ.ಮಂಜುನಾಥ್,ಖಜಾಂಚಿ ಎಸ್.ಉದಯ ಕುಮಾರ್, ನಿರ್ದೇಶಕರುಗಳಾದ ಬಿ.ಮರುಳಯ್ಯ, ಶ್ರೀಮತಿ ಪಿ.ಸುನಂದ, ಜಿ.ಕೆ.ಶಶಿಕಲ, ಬಿ.ಕೆ.ದೊಡ್ಡವೀರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 2 times, 1 visits today)