ತುಮಕೂರು:


ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯಲು ಬರುವ ಸಾರ್ವಜನಿಕರಿಗೆ ಬಿಪಿಎಲ್/ಎಪಿಎಲ್ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಿ ಎಲ್ಲರಿಗೂ ಆಯುμÁ್ಮನ್ ಆರೋಗ್ಯ ಕಾರ್ಡುಗಳನ್ನು ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು , ಜಿಲ್ಲೆಯಲ್ಲಿ 28 ಲಕ್ಷ ಕಾರ್ಡುಗಳನ್ನು ನೀಡುವ ಗುರಿಯನ್ನು ಹೊಂದಿದ್ದು, ಈವರೆಗೆ 7.4 ಲಕ್ಷ ಕಾರ್ಡುಗಳನ್ನು ವಿತರಿಸಲಾಗಿದೆ. ಇದೇ ಜೂ.8 ರಿಂದ 14 ರವರೆಗೆ ಆಯುμÁ್ಮನ್ ಕಾರ್ಡುಗಳನ್ನು ನೀಡಲು ಅಭಿಯಾನವನ್ನು ಹಮ್ಮಿಕೊಂಡಿದ್ದು, ಒಂದು ತಾಲ್ಲೂಕಿಗೆ 20 ಸಾವಿರ ಕಾರ್ಡುಗಳನ್ನು ವಿತರಿಸಲು ಸೂಚನೆ ನೀಡಲಾಯಿತು. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು, ಸೇವಾಸಿಂಧು ಕೇಂದ್ರಗಳಲ್ಲಿ ಆದ್ಯತೆಯ ಕಾರ್ಡುಗಳನ್ನು ವಿತರಿಸಿ ನಿಗಧಿಪಡಿಸಿರುವ ಗುರಿಯನ್ನು ತಲುಪಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಯಲು ನಡೆದಿರುವ ಎಲ್ಲಾ ಸಿದ್ಧತೆಗಳು ಮುಂದುವರಿಯಬೇಕು. ಲಸಿಕೆಯನ್ನು ನೀಡುವಲ್ಲಿ ಯಾವುದೇ ರೀತಿಯ ವಿಳಂಬ ನೀತಿಯನ್ನು ಸಹಿಸುವುದಿಲ್ಲ ಎಂದ ಅವರು ಬಾಕಿಯಿರುವ ಎಲ್ಲ ವಯೋಮಾನದವರ ಲಸಿಕಾರಣವನ್ನು ಶೀಘ್ರವಾಗಿ ಶೇ.100 ರಷ್ಟು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಸರ್ಕಾರಿ ಭೂಮಿಯಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಕಾಯ್ದಿರಿಸಲು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ತುಮಕೂರು ಶೈಕ್ಷಣಿಕ ಜಿಲ್ಲೆಯ 408, ಮಧುಗಿರಿ ಶೈಕ್ಷಣಿಕ ಜಿಲ್ಲೆಯ 357 ಪ್ರಕರಣಗಳು ಬಾಕಿಯಿದ್ದು, ಗ್ರಾಮ ಠಾಣದಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ಕಾಯ್ದಿರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ತಹಸಿಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಸೂಚಿಸಲಾಯಿತು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸ್ಥಳ ಗುರುತಿಸಬೇಕು.ನಗರಗಳಲ್ಲಿ ಮುಖ್ಯಾಧಿಕಾರಿಗಳು, ಆಯುಕ್ತರು/ ಪೌರಾಯುಕ್ತರು ನಿವೇಶನ ಗುರುತಿಸಲು ಕ್ರಮಕೈಗೊಳ್ಳಬೇಕೆಂದು ನಿರ್ದೇಶಿಸಿದರು.
ಜಿಲ್ಲೆಯ ವಿವಿದೆಢೆ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಮೀನುಗಳನ್ನು ಕಾಯ್ದಿರಿಸಲಾಗಿದ್ದು ಪದೇ ಪದೇ ಸ್ಥಳ ಬದಲಾವಣೆಗೆ ಅವಕಾಶವಿರುವುದಿಲ್ಲ. ಸಂಬಂಧಿಸಿದ ಪಿಡಿಒ, ಗ್ರಾಮಲೆಕ್ಕಿಗರು ಸ್ಥಳ ಪರಿಶೀಲಿಸಿ ಕಡತಗಳನ್ನು ತಯಾರಿಸಲು ಸೂಚಿಸಲಾಯಿತು. ಸಾಮಾಜಿಕ ಭದ್ರತಾ ಯೋಜನೆಯಡಿ 72 ಗಂಟೆಯೊಳಗೆ ಪಿಂಚಣಿ ನೀಡುವ ಯೋಜನೆಯಲ್ಲಿ ತಾಂತ್ರಿಕ ಕಾರಣ ಹೊರತುಪಡಿಸಿ ಯಾವುದೇ ಕಾರಣದಿಂದ ವಿಳಂಭವಾದಲ್ಲಿ ಅಧಿಕಾರಿ/ ನೌಕರರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಅವರು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮವು ಅಲೆಮಾರಿ/ಅರೆ-ಅಲೆಮಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಅರ್ಹರನ್ನು ಗುರುತಿಸಿ ಪಟ್ಟಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಎಡಿಎಲ್‍ಆರ್‍ಗಳಿಗೆ ಪತ್ರ ಬರೆದು ಜಿಲ್ಲೆಯ ಗ್ರಾಮಗಳಿಗೆ ಒದಗಿಸಿರುವ ಸ್ಮಶಾನ ಭೂಮಿಯನ್ನು ಅಳತೆ ಮಾಡಿ, ಹದ್ದುಬಸ್ತು ಮಾಡಿಸಲು ಕ್ರಮಕೈಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ವಿ.ಅಜಯ್, ಸೋಮಪ್ಪ ಕಡಕೋಳ, ನಟರಾಜು, ತಹಶೀಲ್ದಾರ್ ಜಿ.ವಿ ಮೋಹನ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಬಿ ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ ವೀರಭದ್ರಯ್ಯ ಹಾಜರಿದ್ದರು.

(Visited 1 times, 1 visits today)