ತುಮಕೂರು:


ಕೋವಿಡ್-19 ತಡೆಗಟ್ಟಲು ಲಸಿಕೆಯನ್ನು ನೀಡಲಾಗುತ್ತಿದ್ದು, ನಿಗಧಿತ ಅವಧಿಯಲ್ಲಿ ಪ್ರಗತಿ ಸಾಧಿಸಲು ವಿಫಲವಾದಲ್ಲಿ ಸಂಬಂಧಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಎಚ್ಚರಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಇತ್ತಿಚೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, 12-14 ವಯೋಮಾನದ ಮಕ್ಕಳ ಮೊದಲ ಡೋಸ್ ಶೇ.106 ಹಾಗೂ ಎರಡನೇ ಡೋಸ್ ಶೇ.69.2 ಮತ್ತು 15-17 ವಯಸ್ಸಿನ ಮಕ್ಕಳಿಗೆ ನೀಡುತ್ತಿರುವ ಲಸಿಕಾಕರಣ ಮೊದಲ ಡೋಸ್ ಶೇ. 79.4 ಹಾಗೂ ಎರಡನೇ ಡೋಸ್ ಶೇ.71.6 ಆಗಿದ್ದು, ವ್ಯಾಕ್ಸಿನೇಷನ್ ಸಮಾಧಾನಕಾರವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿ ಜೂನ್ 30ರವರೆಗೆ ಕಾಲಾವಕಾಶ ನೀಡಿ ಬಾಕಿ ಲಸಿಕಾಕರಣವನ್ನು ಪೂರ್ಣಗೊಳಿಸಲು ಸೂಚಿಸಲಾಯಿತು.
ಕೋವಿಡ್ -19 ಪ್ರಕರಣಗಳು ಅಲ್ಲಲ್ಲಿ ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತಿಪಟೂರು, ಶಿರಾ, ತುಮಕೂರು ನಗರಗಳಲ್ಲಿ ಕೋವಿಡ್ ಲ್ಯಾಬ್ ಇದ್ದು, ತುಮಕೂರು ನಗರದಲ್ಲಿ 200, ತಿಪಟೂರು ಮತ್ತು ಶಿರಾ ತಾಲ್ಲೂಕುಗಳಲ್ಲಿ ತಲಾ 100, ಉಳಿದ ತಾಲ್ಲೂಕುಗಳಲ್ಲಿ ಕನಿಷ್ಠ 50 ಪರೀಕ್ಷೆಗಳನ್ನು ಮಾಡಲು ಸೂಚಿಸಿದರು.
ಜಿಲ್ಲೆಯಲ್ಲಿ ಆಯುμÁ್ಮನ್ ಕಾರ್ಡುಗಳನ್ನು ನೀಡುವ ಕಾರ್ಯ ಪ್ರಗತಿಯಲ್ಲಿದೆ. 28 ಲಕ್ಷ ಆಯುμÁ್ಮನ್ ಕಾರ್ಡುಗಳನ್ನು ನೀಡುವ ಗುರಿಹೊಂದಲಾಗಿದ್ದು, ಈ ಪೈಕಿ 8.36 ಲಕ್ಷ ಕಾರ್ಡುಗಳನ್ನು ವಿತರಿಸಲಾಗಿದೆ ಎಂದ ಅವರು, ಎಬಿಎಆರ್‍ಕೆ ಅಭಿಯಾನ ಮಾಡಲು ಸೂಚಿಸಿ ಒಂದು ವಾರದೊಳಗೆ ಜಿಲ್ಲಾಸ್ಪತ್ರೆಯಲ್ಲಿ 5000, ತಾಲ್ಲೂಕು ಆಸ್ಪತ್ರೆಗಳಲ್ಲಿ 2500, ಗ್ರಾಮ ಒನ್ ಕೇಂದ್ರಗಳಲ್ಲಿ 1000 ಕಾರ್ಡುಗಳನ್ನು ವಿತರಿಸಲು ವಿವಿಧ ಇಲಾಖೆಗಳ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಗುರಿ ಸಾಧಿಸಲು ಸೂಚಿಸಿದರು.
ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ 135, ನಗರ ಪ್ರದೇಶಗಳಲ್ಲಿ 142 ನಿವೇಶನಗಳನ್ನು ನೀಡಬೇಕಾಗಿದ್ದು ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಆಯುಕ್ತರು/ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಡಿಒಗಳು ನಿವೇಶನ ನೀಡಲು ಸೂಚಿಸಿದರು.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಶಾಲೆಗಳನ್ನು ಶಿಕ್ಷಣ ಇಲಾಖೆಯ ಸುಪರ್ದಿಗೆ ಖಾತೆ ಮಾಡಿಸುವ ಕೆಲಸ ಪ್ರಗತಿಯಲ್ಲಿದ್ದು, ತುಮಕೂರು ಶೈಕ್ಷಣಿಕ ಜಿಲ್ಲೆಯ 413 ಮಧುಗಿರಿ ಶೈಕ್ಷಣಿಕ ಜಿಲ್ಲೆಯ 363 ಪ್ರಕರಣಗಳು ಇದ್ದು, ಶೀಘ್ರ ಖಾತೆ ಮಾಡಲು ಹಾಗೂ ಶಿಕ್ಷಣ ಇಲಾಖೆಗೆ ಕಾಯ್ದಿರಿಸಲು ಎಲ್ಲಾ ತಾಲ್ಲೂಕು ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪ್ರತಿ ಗ್ರಾಮಕ್ಕೂ ಸ್ಮಶಾನಕ್ಕಾಗಿ ಭೂಮಿ ಕಾಯ್ದಿರಿಸಲಾಗಿದ್ದು, ಸ್ಮಶಾನದ ಸ್ಥಳಗಳು ಒತ್ತುವಾರಿಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾಯ್ದಿರಿಸಲಾದ ಸ್ಥಳಕ್ಕೆ ಪಿಡಿಒ ಹಾಗೂ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿ ನಕ್ಷೆಯೊಂದಿಗೆ ಗ್ರಾಮಪಂಚಾಯತಿಗಳ ವಶಕ್ಕೆ ನೀಡಲು ಸೂಚಿಸಿದರಲ್ಲದೇ ಆಯಾ ತಹಶೀಲ್ದಾರರು ಎಲ್ಲಾ ಕಂದಾಯ ಗ್ರಾಮಗಳಿಗೆ ಸ್ಮಶಾನ ಲಭ್ಯತೆ ಇರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢಿಕರಣ ಪಡೆಯತಕ್ಕದ್ದು ಎಂದು ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳಡಿ 224 ಆಧಾರ್ ಸೀಡಿಂಗ್ ಪ್ರಕರಣಗಳು, ಸಾರ್ವಜನಿಕ ಕುಂದುಕೊರತೆ ನಿವಾರಣ ವ್ಯವಸ್ಥೆಯಲ್ಲಿ 20 ಅರ್ಜಿಗಳಿದ್ದು ಶೀಘ್ರ ಇತ್ಯರ್ಥಗೊಳಿಸುವಂತೆ ಸೂಚಿಸಲಾಯಿತು.
ಕಂದಾಯ ವಿಷಯಗಳಿಗೆ ಸಂಬಂಧಿಸಿದಂತೆ ಭೂಮಿ ಯೋಜನೆ ಪ್ರಗತಿ, ಪಹಣಿ ಕಾಲಂ 3/9 ಮಿಸ್ ಮ್ಯಾಚ್, 11ಇ, ಪೈಕಿಪಹಣಿ ಒಟ್ಟುಗೂಡಿಸುವಿಕೆ ಸೇರಿದಂತೆ ಇನ್ನಿತರ ವಿಷಯಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ. ಅಜಯ್, ತಹಸಿಲ್ದಾರ್ ಮೋಹನ್ ಕುಮಾರ್, ಡಿಡಿಎಲ್‍ಆರ್ ಸುಜಯ್ ಕುಮಾರ್, ಡಿಹೆಚ್‍ಓ ಡಾ.ಮಂಜುನಾಥ್, ಆರ್‍ಸಿಎಚ್ ಅಧಿಕಾರಿ ಡಾ.ಕೇಶವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್. ಶ್ರೀಧರ್ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

(Visited 2 times, 1 visits today)