ತುಮಕೂರು:


ಭೀಕರ ರಣ ಮಳೆಯಿಂದ ಹಾನಿಗೊಳಗಾದ ನಗರದ ಕುರಿಪಾಳ್ಯ, ಲೇಬರ್ ಕಾಲೋನಿ, ನಜರಾಬಾದ್, ಪೂರ್‍ಹೌಸ್ ಕಾಲೋನಿ ಮುಂತಾದ ಹಲವು ಪ್ರದೇಶಗಳಿಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭೀಕರ ಮಳೆಗೆ ಈ ಭಾಗದಲ್ಲಿ ಕೆಲವು ಮನೆಗಳು, ಗೋಡಗಳು ಬಿದ್ದುಹೋಗಿವೆ, ಸರ್ಕಾರ ನೀಡಿರುವಂತಹ ಉಚಿತ ನಿವೇಶನಗಳಲ್ಲಿ ಸಾಲ ಮಾಡಿ 10-15 ವರ್ಷಗಳ ಹಿಂದೆ ಮಣ್ಣಿನಲ್ಲೇ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಸತತ ಸುರಿಯುತ್ತಿರುವ ಮಳೆಗೆ ಮನೆಗಳು ಕುಸಿದಿವೆ ಎಂದರು.
ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಬರುವ ಈ ಪ್ರದೇಶಗಳ ಜನರಿಗೆ ಸರ್ಕಾರ ಗಮನ ಹರಿಸಿ, ಅವರಿಗೆ ಮನೆ ನಿರ್ಮಾಣಕ್ಕೆ ಅಗತ್ಯ ನೆರವು ನೀಡಬೇಕಿದೆ. ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಣ್ಣಿನಿಂದ ನಿರ್ಮಾಣ ಮಾಡಿರುವ ಮನೆಗಳನ್ನು ಪತ್ತೆ ಹಚ್ಚಿ ಅಂತಹವುಗಳಿಗೆ ಅನುದಾನ ಕಲ್ಪಿಸಬೇಕೆಂದು ಮನವಿ ಮಾಡಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಸತಿ ನಿರ್ಮಾಣಕ್ಕೆ 1.50 ಲಕ್ಷ, 2 ಲಕ್ಷ ರೂ. ನೀಡುವ ಯೋಜನೆಗಳಿದ್ದು, ಅಂತಹ ಯೋಜನೆಯಲ್ಲಿ ಅವರಿಗೆ ಅನುದಾನ ನೀಡಿ ವಸತಿ ಪುನಃಶ್ಚೇತನ ಮಾಡಿಕೊಳ್ಳಲು ಸಹಕಾರ ನೀಡಬೇಕೆಂದು ಒತ್ತಾಯಿಸಿದರು.
ವಸತಿ ಸಚಿವರಾದ ವಿ.ಸೋಮಣ್ಣ ಅವರು ವಸತಿ ಯೋಜನೆಯಡಿಯಲ್ಲಿ ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸುತ್ತಿದ್ದು, ಕುರಿಪಾಳ್ಯ, ಲೇಬರ್ ಕಾಲೋನಿ, ನಜರಾಬಾದ್, ಪೂರ್‍ಹೌಸ್ ಕಾಲೋನಿಗಳಲ್ಲಿರುವ ಮನೆಗಳಿಗೆ ಅನುದಾನ ಕಲ್ಪಿಸಿಕೊಟ್ಟರೆ, ಅವರ ಬದುಕು ಹಸನಾಗಲಿದೆ ಎಂದರು.
ತೀವ್ರ ಮಳೆಯಿಂದ ಈ ಭಾಗದ ಬಹುತೇಕ ಮನೆಗಳು ಶಿಥಿಲಗೊಂಡಿವೆ. ಸ್ಥಳಕ್ಕೆ ಪಾಲಿಕೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡುವುದರ ಜೊತೆಗೆ ಪಾಲಿಕೆ ಆಯುಕ್ತರಿಗೆ ಪತ್ರದ ಮೂಲಕವೂ ಮನವಿ ಸಲ್ಲಿಸಿ ಇಂತಹ ಮನೆಗಳಿಗೆ ಪುನಃಶ್ಚೇತನ ಮಾಡಿಕೊಡುವಂತೆ ಒತ್ತಾಯಿಸಲಾಗುವುದು. ಜೊತೆಗೆ ಅವರು ಬದುಕನ್ನು ಕಟ್ಟಿಕೊಳ್ಳಲು ಸಾಲಸೌಲಭ್ಯವನ್ನು ಒದಗಿಸಿಕೊಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕರೂ ಸಹ ಈ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರಿಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾಜಿ ನಗರಸಭಾ ಸದಸ್ಯ ಸಾಬುದಾ, 10ನೇ ವಾರ್ಡಿನ ಸದಸ್ಯ ಒಬೇದುಲ್ಲಾ, ಮಾಜಿ ನಗರಸಭಾ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಕಂದಾಯ ಇಲಾಖೆ ಅಧಿಕಾರಿ ಮುಂತಾದವರು ಹಾಜರಿದ್ದರು.

(Visited 2 times, 1 visits today)