ತುಮಕೂರು:


ನಗರದಲ್ಲಿ ವರುಣನ ಅಬ್ಬರ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಅಕ್ಕತಂಗಿಯರ ಕಟ್ಟೆಯ ಸಮೀಪವಿರುವ ಭಾರತೀ ನಗರಕ್ಕೆ ನೀರು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಒತ್ತುವರಿಯಾಗಿರುವ ರಾಜಗಾಲುವೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಅಕ್ಕತಂಗಿಯರ ಕಟ್ಟೆ ಅಕ್ಕಪಕ್ಕದಲ್ಲಿರುವ ಬಡಾವಣೆಗಳಲ್ಲಿ ಹಾದು ಹೋಗಿದ್ದ ರಾಜಗಾಲುವೆ, ಚರಂಡಿಗಳು ನಾಪತ್ತೆಯಾಗಿರುವುದೇ ಇಂದು ನಮ್ಮ ಮನೆಗಳು ಮಳೆ ನೀರಿನಲ್ಲಿ ಮುಳುಗಡೆಯಾಗಲು ಕಾರಣವಾಗಿದೆ. ಇದಕ್ಕೆ ಅಧಿಕಾರಿಗಳು ರಾಜಗಾಲುವೆಗಳನ್ನು ಲೆಕ್ಕಿಸದೆ ಲೇಔಟ್ಗಳ ನರ್ಮಾಣಕ್ಕೆ ಅನುಮತಿ ನೀಡಿರುವುದು ಪ್ರಮುಖ ಕಾರಣ. ಅಧಿಕಾರಿಗಳ ಲಂಚಬಾಕತನ ಹಾಗೂ ಬೇಜವಾಬ್ದಾರಿಯಿಂದಾಗಿ ಇಂದು ನಾವುಗಳು ಸೂರು ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನೆಗಳು ಮಳೆ ನೀರಿನಲ್ಲಿ ಮುಳುಗಡೆಯಾಗುವುದರಿಂದ ಸ್ಥಳಕ್ಕೆ ಶಾಸಕರು, ಅಧಿಕಾರಿಗಳು ಬಂದು ತಾತ್ಕಾಲಿಕವಾಗಿ 3 ಅಥವಾ 5 ಸಾವಿರ ಪರಿಹಾರ, ದಿನಸಿ, ಊಟ ಕೊಡಬಹುದು. ಆದರೆ ನಿಮಗೆ ಈ ರೀತಿಯ ಪರಿಹಾರ ಬೇಕಾಗಿಲ್ಲ. ನಮಗೇನಿದ್ದರೂ ಶಾಶ್ವತವಾದ ಪರಿಹಾರ ಒದಗಿಸಬೇಕು. ಮುಚ್ಚಿ ಹೋಗಿರುವ ರಾಜಗಾಲುವೆಗಳನ್ನು ತೆರೆದು ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿನ ನಿವಾಸಿಗಳು ಪಟ್ಟು ಹಿಡಿದು ಪ್ರತಿಭಟಿಸಿದರು.
ದೇವರಾಯನಪಟ್ಟಣ ಕೆರೆ ತುಂಬಿ ಅಕ್ಕತಂಗಿ ಕೆರೆಗೆ ನೀರು ಹರಿದು ಬರುತ್ತಿದೆ. ಆದರೆ ಅಕ್ಕತಂಗಿ ಕೆರೆಯಿಂದ ನೀರು ಸರ್ಪಕವಾಗಿ ಹೊರಗೆ ಹೋಗುವ ವ್ಯವಸ್ಥೆ ಇಲ್ಲದಿರುವುದರಿಂದ ಚರಂಡಿ ಮಾಡಿ ನೀರನ್ನು ಹೊರಗೆ ಬಿಡುವ ಕರ್ಯ ನಡೆದಿದೆ. ಇದರಿಂದ ಭಾರತೀ ನಗರವು ಸಹ ಜಲಾವೃತವಾಗುವ ಸಂಭವವಿದೆ. ಹಾಗಾಗಿ ಭಾರತಿ ನಗರದ ನಿವಾಸಿಗಳು ಸಹ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಭಾರತಿ ನಗರದ ಅಕ್ಕಪಕ್ಕದಲ್ಲಿ ನರ್ಮಾಣವಾಗಿರುವ ಕಾಲೇಜುಗಳು, ಮನೆಗಳವರು ರಾಜಗಾಲುವೆ ಒತ್ತುವರಿ ಮಾಡಿಕೊಂಡು ತಲೆ ಎತ್ತಿವೆ. ರಾಜಗಾಲುವೆ ಮುಚ್ಚಿ ಹೋಗಿರುವುದರಿಂದ ಮನೆಗಳಿಗೆ ನೀರು ನುಗ್ಗುವಂತಾಗಿದೆ. ಕೂಡಲೇ ರಾಜಗಾಲುವೆ ತೆರವುಗೊಳಿಸಬೇಕು ಎಂದು ನಿವಾಸಿಗಳು ಪಟ್ಟು ಹಿಡಿದಿದ್ದಾರೆ.
ಭಾರತಿ ನಗರದ ನಿವಾಸಿಗಳ ಅಹವಾಲು ಆಲಿಸಲು ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಅವರು ಆಗಮಿಸಿದಾಗ ಅಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಒತ್ತುವರಿಯಾಗಿರುವ ರಾಜಗಾಲುವೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ರಾಷ್ಟ್ರೀಯ ಹೆದ್ದಾರಿ ಹಾದು ಹೋದ ಮೇಲೆ ಅಕ್ಕತಂಗಿ ಕೆರೆ ಪರ್ವದಲ್ಲಿ ಶೇ. 80 ರಷ್ಟು ಹಾಗೂ ಪಶ್ಚಿಮ ಭಾಗದಲ್ಲಿ ಶೇ. 20 ರಷ್ಟು ಉಳಿದುಕೊಂಡಿದೆ. ಅಡ್ಡ ದೇವರಾಯಪಟ್ಟ ರಸ್ತೆ ಹೋಗಿದೆ. ಹೀಗಾಗಿ ಕೆರೆ 4 ಭಾಗವಾಗಿದೆ. ಭಾರತಿ ನಗರ ಕೆರೆ ಅಂಗಳದಲ್ಲಿದೆ. ಆದರೆ ಇವರಿಗೆಲ್ಲ ಹಕ್ಕುಪತ್ರ ನೀಡಲಾಗಿದೆ. ಈಗ ಯಾರಿಗೆ ಯಾವ ರೀತಿ ಏನು ಮಾಡಬೇಕು ಎಂಬುದು ತೋಚದಾಗಿದೆ.
ನೀರನ್ನು ಚರಂಡಿ ಮಾಡಿ ನೀರು ಬಿಡಲು ಹೋದರೆ ಕುವೆಂಪು ನಗರ ಮುಳುಗಿ ಹೋಗಲಿದೆ. ಪಾಲಿಕೆ ಅಧಿಕಾರಿಗಳೊಂದಿಗೆ ರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ ಸಾಕಷ್ಟು ಕಡೆ ಮನೆಗಳು ಮುಳುಗಡೆಯಾಗುತ್ತಿದೆ. ಹೊಸಳ್ಳಯ್ಯನ ತೋಟದಲ್ಲಿ ಸುಮಾರು 80 ರಿಂದ 100 ಮನೆಗಳು ಮುಳುಗಿ ಹೋಗಿವೆ. ಇವರಿಗೆಲ್ಲ ಹಕ್ಕು ಪತ್ರ ಇವೆ. ಇನ್ನು ನಾಲ್ಕೈದು ದಿವಸ ಇಲ್ಲಿ ವಾಸ ಮಾಡಲು ಸಾಧ್ಯವಾಗುವುದಿಲ್ಲ. ಮಹಾನಗರ ಪಾಲಿಕೆ, ಟೂಡಾ ವತಿಯಿಂದ ಸದಾಶಿವನಗರದ ಟೂಡಾ ಹಾಲ್ನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇವರಿಗೆಲ್ಲ ಊಟ, ತಿಂಡಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಲಾಗುವುದು. ಹಾನಿಯಾಗಿರುವ ಮನೆಗಳಿಗೆ ಪರಿಹಾರ ನೀಡಲಾಗುವುದು ಎಂದರು.

(Visited 1 times, 1 visits today)