ಗುಬ್ಬಿ :

ಅಕಾಲಿಕ ಮಳೆಯಿಂದಾಗಿ ಇಡೀ ತುಮಕೂರು ಜಿಲ್ಲೆಯೇ ಅತಿವೃಷ್ಠಿಯಿಂದ ನೂರಾರು ಎಕರೆ ಭೂಮಿಯಲ್ಲಿ ಬೆಳೆದ ಬೆಳೆಗಳು ನಾಶವಾಗಿದ್ದು, ಗುಬ್ಬಿ ತಾಲ್ಲೂಕಿನ ಅಡಗೂರು ಗ್ರಾಮದ 100 ವರ್ಷಗಳ ಇತಿಹಾಸವುಳ್ಳ ಕೆರೆಯು ಒಡೆಯುವ ಹಂತಕ್ಕೆ ತಲುಪಿರುವುದು ದುರಂತವೇ ಸರಿ.
ಅಡಗೂರು ಗ್ರಾಮಕ್ಕೆ ಶಿಥಿಲವಾದ ಕೆರೆಯನ್ನು ನೋಡಲು ಮಾನ್ಯ ನೀರಾವರಿ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರಲು ಇವರ ಬೇಜವಬ್ದಾರಿಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ಈ ಕೆರೆಯ ವಿಸ್ತೀರ್ಣ 44 ಹೆಕ್ಟೇರ್‍ಗಿಂತಲೂ ಹೆಚ್ಚಾಗಿದ್ದು ಈ ಕೆರೆಯನ್ನೇ ನಂಬಿ ಸುಮಾರು 36 ಹಳ್ಳಿಗಳ ರೈತಾಪಿ ವರ್ಗದವರು ಜೀವನ ನಡೆಸುತ್ತಿದ್ದು ಅಕಾಲಿಕ ಮಳೆಯಿಂದಾಗಿ ಸುಮಾರು ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ವಾಣಿಜ್ಯ ಬೆಳೆಗಳು ಹಾಳಾಗುವಂತಾಗಿದ್ದು ಸರ್ಕಾರದ ಜನಪ್ರತಿನಿಧಿಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದೇ ಹೇಮಾವತಿ ನಾಲಾ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಕೆರೆಕೋಡಿ ಮಧ್ಯೆ ಬಿರುಕು ಬಿಟ್ಟಿದ್ದು ಇದನ್ನು ಅಧಿಕಾರಿಗಳು ನೋಡಿದ್ದರೂ ಸಹ ಇಲ್ಲಿಯವರೆಗೂ ಕ್ರಮ ಕೈಗೊಳ್ಳದೆ ನೆನ್ನೆ ಮೊನ್ನೆ ಸುರಿದ ಮಳೆಯಿಂದಾಗಿ ಬಿರುಕು ಬಿಟ್ಟಂತಹ ಕೋಡಿಯ ಜಾಗ ದೊಡ್ಡದಾಗುತ್ತಾ ಹೋಗುತ್ತಿದ್ದು ಮೇಲಿನಿಂದ ಬಂದಂತಹ ನೀರು ನೇರವಾಗಿ ಗುಬ್ಬಿ ಕೆರೆ ತಲುಪುತ್ತಿದ್ದು ಕೆರೆಯ ಅಕ್ಕಪಕ್ಕದಲ್ಲಿರುವ ಹಾಗೂ ನೀರು ಹೋಗುವ ಜಾಗಗಳಲ್ಲಿ ಬೆಳೆದಿದ್ದಂತಹ ಬೆಳೆಗಳು ನಾಶವಾಗಿದ್ದು ಮತ್ತು ಸುಮಾರು 10-15 ಮನೆಗಳು ಜಲಾವೃತವಾಗಿದೆ. ಇವೆಲ್ಲದಕ್ಕೂ ಹೇಮಾವತಿ ನಾಲಾ ಅಧಿಕಾರಿಗಳೇ ಕಾರಣ ಎಂದು ತಾ.ಪಂ. ಮಾಜಿ ಸದಸ್ಯ ಕರೆತಿಮ್ಮಯ್ಯ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಆಧುನೀಕರಣ ಯುಗದಲ್ಲೂ ಸಮುದ್ರದಲ್ಲಿ ಸೇತುವೆ ನಿರ್ಮಿಸುವಂತಹ ತಂತ್ರಜ್ಞಾನವಿದ್ದರೂ ಸಹ ಈ ಸಣ್ಣ ಕೆರೆಯ ಕೋಡಿಯನ್ನು ಸರಿಪಡಿಸಲಾಗದ ಇಂತಹ ಅಧಿಕಾರಿಗಳು ಅಸಮರ್ಥರು ಎಂದು ದೂರಿದರು.
ಈ ಕೆರೆಯ ಸುತ್ತಳತೆ 44 ಹೆಕ್ಟೇರ್ ಇದ್ದು ನೀರನ್ನು ಸಂಗ್ರಹಿಸಲು ಹಾಗೂ ಹೆಚ್ಚಾಗಿದ್ದ ನೀರನ್ನು ಹೊರಗೆ ಬಿಡಲು ಸುಮಾರು 2 ಮೀಟರ್‍ನಷ್ಟು ಆಳವಿರುವ ಕೆರೆಯ ಕೋಡಿ ಇದ್ದು ಸುಮಾರು ಮೂರುವರೆ ಮೀಟರ್ ಅಗಲವಿದ್ದು 6 ತಿಂಗಳಿನಿಂದಲೂ ಸಹ ಇದನ್ನು ಸರಿಪಡಿಸುವಂತೆ ಎಲ್ಲಾ ಅಧಿಕಾರಿಗಳಿಗೂ ಹಾಗೂ ಮಂತ್ರಿಗಳಿಗೂ ತಿಳಿಸಿದ್ದರೂ ಸಹ ಬೇಜವಾಬ್ದಾರಿ ತೋರಿಸಿರುವುದು ಸರಿಯಲ್ಲ. ಸುಮಾರು 2020ರಲ್ಲಿ ಈ ಕೆರೆಯನ್ನು ದುರಸ್ತಿ ಪಡಿಸಲು ಸುಮಾರು 89 ಲಕ್ಷ ಅಂದಾಜಿನ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಅನುಮೋದನೆ ಸಲ್ಲಿಸಿದ್ದು ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದು ಇದರಿಂದ ಸುತ್ತಮುತ್ತಲಿನ ರೈತರುಗಳ ಹೊಟ್ಟೆಯ ಮೇಲೆ ಅಧಿಕಾರಿಗಳು ಹೊಡೆಯುವಂತಾಗಿದೆ ಇದನ್ನು ಆದಷ್ಟು ಜಾಗ್ರತೆಯಿಂದ ಸರಿಪಡಿಸಬೇಕೆಂದು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಚನ್ನಬಸವೇಗೌಡ ತಿಳಿಸಿದರು.
ಅಡಗೂರು ಗ್ರಾಮ ಪಂಚಾಯ್ತಿಯ ಅಭಿವೃದ್ದಿ ಅಧಿಕಾರಿ ಮಾತನಾಡಿ ಈಗಾಗಲೇ ಕೆರೆಯ ಕೋಡಿಯು ಒಡೆಯುವ ಹಂತದಲ್ಲಿದ್ದು ಇದರಿಂದ ಕೆರೆಯ ತಳಭಾಗದಲ್ಲಿರುವ ರೈತರನ್ನು ಬೇರೆ ಕಡೆ ಸ್ಥಳಾಂತರ ಮಾಡಿಸಲಾಗಿದೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಕೋಡಿಯ ನೀರು ಜೋರಾಗಿ ಹರಿಯುತ್ತಿರುವುದರಿಂದ ಯಾರು ಸಂಚರಿಸಬಾರದೆಂದು ಎಚ್ಚರಿಕೆಯ ಫಲಕ ಅಳವಡಿಸಲಾಗಿದೆ. ಈಗಾಗಲೇ ತಾಲ್ಲೂಕು ದಂಡಾಧಿಕಾರಿಗಳಾದ ಆರತಿ.ಬಿರವರು ಸ್ಥಳ ಪರಿಶೀಲಿಸಿ ಮೇಲಿನ ಅಧಿಕಾರಿಗಳಿಗೆ ಇಲ್ಲಿನ ಆಗುಹೋಗುಗಳನ್ನು ತಿಳಿಸಿ ಮುಂದಿನ ದಿನದಲ್ಲಿ ಪರಿಹಾರ ನೀಡುವುದಾಗಿ ತಿಳಿಸಿದರು.

(Visited 1 times, 1 visits today)