ತುಮಕೂರು :


ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೂ ಹಾಗೂ ಸಂಪುಟ ಸಹೋದ್ಯೋಗಿಯೂ ಆಗಿದ್ದ ಉಮೇಶ್ ಕತ್ತಿ ಯವರ ಧಿಡೀರ್ ನಿಧನದ ಸುದ್ದಿ ತಿಳಿದು ದಿಗ್ಭ್ರಮೆಗೊಂಡಿದ್ದೇನೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರು ಕಂಬನಿ ಮಿಡಿದಿದ್ದಾರೆ.
ಕರ್ನಾಟಕ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರುಗಳಲ್ಲಿ ಒಬ್ಬರಾಗಿದ್ದ, ಅತ್ಯಂತ ಅನುಭವಿ ಹಾಗೂ ಉತ್ಸಾಹಿ ರಾಜಕಾರಣಿಯಾಗಿ ಉತ್ತರ ಕರ್ನಾಟಕ ಭಾಗದ ಜನತೆಯ ಧ್ವನಿಯಾಗಿದ್ದ ಉಮೇಶ್ ಕತ್ತಿಯವರ ನಿಧನದಿಂದ ರಾಜ್ಯಕ್ಕೆ ಅದರಲ್ಲಿಯೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿವಂಗತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು. .
ಕಳೆದ ಸಂಪುಟ ಸಭೆಯಲ್ಲಿ ಉಮೇಶ್ ಕತ್ತಿಯವರು ರಾಜರಾಗಿರಲಿಲ್ಲ. ಆಗ ಏಕೆ ಅಂತ ವಿಚಾರಿಸಿದ್ದೆ, ಒಳ್ಳೆಯ ಹಾಸ್ಯ ಪ್ರಜ್ಞೆ ಇದ್ದಂತಹ ಮನುಷ್ಯ. ಅವರು ಇದ್ದ ಬಳಿಗೆ ನಾವು ಹೋಗಿ ಕುಳಿದುಕೊಳ್ಳುತ್ತಿದ್ದೆವು ಎಂದು ಸ್ಮರಿಸಿದರು.
ಸಚಿವ ಉಮೇಶ್ ಕತ್ತಿಯವರ ನಿಧನದಿಂದಾಗಿ ಇಂದು ತುಮಕೂರಿನಲ್ಲಿ ನಡೆಸಬೇಕಿದ್ದ ಕೆಡಿಪಿ ಸಭೆ ಹಾಗೂ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕಾರ್ಯಕ್ರಮವನ್ನು ಮುಂದೂಡಿದ್ದೇನೆ. ಸದ್ಯದಲ್ಲೇ ಬಂದು ಸಭೆ ಮಾಡುವುದಾಗಿ ಹೇಳಿದರು.
ಆಗಸ್ಟ್‍ನಿಂದ ಈವರೆಗೂ ಮಳೆ 300 ರಿಂದ 1500 ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ಅಪಾರ ಬೆಳೆ ಹಾಗೂ ಆಸ್ತಿ ಹಾನಿಯುಂಟಾಗಿದೆ. 10 ಜನರ ಪ್ರಾಣ ಹಾನಿಯುಂಟಾಗಿದೆ. ಬ್ರಿಡ್ಜ್, ರಸ್ತೆಗಳು ಕೊಚ್ಚಿ ಹೋಗಿವೆ ಎಂದರು.
ಜನೋತ್ಸವ ಕುರಿತು ಏನು ಮಾಡುತ್ತಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಪಕ್ಷದ ಹಿರಿಯರು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಧಿವೇಶನದೊಳಗೆ ಬಂದು ಮಳೆ ಹಾನಿ ವೀಕ್ಷಣೆ ಮಾಡುತ್ತೇನೆ. ಸದ್ಯ 3 ಸಾವಿರ ಎಕೆರೆ ಬೆಳೆ ಹಾನಿಯಾಗಿದೆ. ಮಳೆ ನಿಂತ ಮೇಲೆ ಉಳಿದ ಹಾನಿ ಬಗ್ಗೆ ಅಧ್ಯಯನ ಮಾಡಲಾಗುವುದು. ಏನೇ ಆದರೂ ಮಳೆಯಿಂದಾಗಿ ಬಹಳ ದೊಡ್ಡ ಹಾನಿಯುಂಟಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿ.ಪಂ. ಸಿಇಓ ಡಾ.ಕೆ. ವಿದ್ಯಾಕುಮಾರಿ, ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಉದೇಶ್,ಬಿಜೆಪಿ ಮುಖಂಡ ಬ್ಯಾಟ್ ರಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)