ಸಿದ್ದಗಂಗಾ ಶ್ರೀಗಳಲ್ಲದೆ ಭಕ್ತ ವೃಂದ ಬಡವಾಗಿದೆ-ಜೋತಿಗಣೇಶ್

ತುಮಕೂರು:

      ಕಾಯಕ, ದಾಸೋಹ ಎನ್ನುವ ಬಸವಣ್ಣನವರ ತತ್ವವನ್ನು ಅಕ್ಷರಷಃ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧುನಿಕ ಬಸವಣ್ಣನಂತೆ ಬದುಕಿದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರನ್ನು ಕಳೆದುಕೊಂಡಿರುವ ಭಕ್ತವೃಂದ ಬಡವಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.

      ನಗರದ ಎಸ್.ಐ.ಟಿ. ಬಡಾವಣೆಯ ಶ್ರೀಸಿದ್ದೇಶ್ವರ್ ಕನ್ವೆಷನ್ ಹಾಲ್‍ನಲ್ಲಿ 26ನೇ ವಾರ್ಡಿನ ನಾಗರಿಕರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿಗಳಿಗೆ ಆಯೋಜಿಸಿದ್ದ ನುಡಿನಮನ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,1941ರಲ್ಲಿ ಮಠದ ಪೀಠಾಧ್ಯಕ್ಷರಾಗಿ ನೇಮಕಗೊಂಡ ದಿನದಿಂದಲೂ ಮಠದಲ್ಲಿ ಕಲಿಯುತ್ತಿ ರುವ ಮಕ್ಕಳು,ಮಠಕ್ಕೆ ಬರುವ ಭಕ್ತರ ಯೋಗಕ್ಷೇಮಕ್ಕಾಗಿಯೇ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಡಾ.ಶ್ರೀಶಿವಕು ಮಾರಸ್ವಾಮೀಜಿ ಅವರು,ತಮ್ಮ ತ್ರಿವಿಧ ದಾಸೋಹ ಎಂಬ ತತ್ವದ ಮೂಲಕ ಬಡವರು, ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಲು ನಿರಂತರ ಶ್ರಮಿಸಿದವರು ಎಂದರು.

       ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಜಾನಪದ ವಿದ್ವಾಂಸ ಹಾಗೂ ಉಪನಾಸ್ಯಕ ಹೆಚ್.ವಿ.ವೀರಭದ್ರಯ್ಯ ಮಾತನಾಡಿ,ಚಿಕ್ಕವಯಸ್ಸಿನಿಂದ ಶತಾಯುಷಿಯವರೆಗೆ ಅವರು ರೂಢಿಸಿಕೊಂಡು ಬಂದಿದ್ದ ಶಿಸ್ತು ಬದ್ದ ಜೀವನ ಶೈಲಿ,ಒಂದು ಕಾಲಕ್ಕೆ ಮಕ್ಕಳಿಗೆ ಅನ್ನ ಹಾಕಲು ಕಷ್ಟ ಪಡುತ್ತಿದ್ದ ಮಠ,ಇಂದು 10 ಸಾವಿರಕ್ಕೂ ಹೆಚ್ಚು ಮಕ್ಕಳ ಜೊತೆಗೆ,ಭಕ್ತಾಧಿಗಳಿಗೆ ನಿತ್ಯ ದಾಸೋಹ ನೀಡುವಷ್ಟು ಶಕ್ತವಾಗಲು ಕಾರಣ.ಅಟವಿ ಶ್ರೀಗಳು ಹಚ್ಚಿದ ಒಲೆ ನೂರಾರು ವರ್ಷಗಳ ನಂತರವೂ ಆರಿಲ್ಲ.ಭೌತಿಕವಾಗಿ ಶ್ರೀಗಳು ನಮ್ಮನ್ನು ಅಗಲಿದ್ದರೂ,ಮಾನಸಿಕವಾಗಿ ಅವರು ನಮ್ಮೊಂದಿ ಗೆ ಇದ್ದಾರೆ ಎಂಬುದಕ್ಕೆ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತರೇ ಸಾಕ್ಷಿ.ಮಠವನ್ನು ಮುನ್ನೆಡೆ ಸುವ ಶಕ್ತಿ ಶ್ರೀಸಿದ್ದಲಿಂಗಸ್ವಾಮೀಜಿ ಅವರಿಗೆ ಇದೆ ಎಂದರು.

      ಹಿರಿಯ ಪ್ರವಾಚಕ ಟಿ.ಮುರುಳಿಕೃಷ್ಣ ಮಾತನಾಡಿ,ಜಾತ್ಯಾತೀತೆಯನ್ನು ಮೈಗೂಡಿಸಿಕೊಂಡಿದ್ದ ಶ್ರೀಗಳು,ತ್ರಿವಿಧ ದಾಸೋಹದ ಮೂಲಕ ಇಡೀ ಜಗತ್ತಿನ ಕಣ್ಣು ತೆರೆಸಿದವರು.ಇಂತಹವರಿಗೆ ಭಾರತ ರತ್ನ ಒಂದು ಸಾಟಿಯೇ ಎಂದು ಪ್ರಶ್ನಿಸಿದ ಅವರು, ಶ್ರೀಮಠದ ಉತ್ತಾರಾಧಿಕಾರಿಯಾಗಿ ನೇಮಕಗೊಂಡ ನಂತರ,ಪೂರ್ವಾಶ್ರಮದ ತಂದೆ,ತಾಯಿಗಳ ಆಶ್ರಯವನ್ನು ಬದಿಗಿರಿಸಿ, ಲೋಕಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು ಶ್ರೀಸಿದ್ದಗಂಗಾ ಶ್ರೀಗಳು ಎಂದು ನುಡಿದರು.

      ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ,ಧರ್ಮದ ನಿಜ ಅರ್ಥ ತಿಳಿದು ಅದರಂತೆ ನಡೆದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರನ್ನು ಕಳೆದುಕೊಂಡಿರುವ ಭಕ್ತರಲ್ಲಿ ಶೂನ್ಯ ಭಾವ ಅವರಿಸಿದೆ.ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆಯನ್ನು ತರಲು ಹಗಲಿರುಳು ಶ್ರಮಿಸಿದವರು ಶ್ರೀಗಳು ಎಂದರು.

      ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯಸ್ವಾಮೀಜಿ ಮಾತನಾಡಿ,12ನೇ ಶತಮಾನದ ನಂತರ ಬಸವಣ್ಣನವರ ಐಕ್ಯದೊಂದಿಗೆ ಮೆರೆಯಾಗಿದ್ದ ದಾಸೋಹ ಎಂಬ ಪದಕ್ಕೆ ಚಾಲನೆ ಬಂದಿದ್ದು, ಸಿದ್ದಗಂಗಾ ಶ್ರೀಗಳಿಂದ.ಅವರ ದಾರಿಯಲ್ಲಿ ನಡೆಯುವುದೇ ನಾವು ಸಿದ್ದಗಂಗಾ ಶ್ರೀಗಳಿಗೆ ಸಲ್ಲಿಸುವ ಗೌರವ.ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಜಾತಿ, ಭೇಧವಿಲ್ಲದೆ, ಮುಸ್ಲಿಂರೂ ಸೇರಿದಂತೆ ಎಲ್ಲರೂ ಸಹ ಬಂದ ಭಕ್ತರಿಗೆ ದಾಸೋಹ ನೀಡುವ ಮೂಲಕ, ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಲಿಂಗೈಕ್ಯರಾದರೂ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಇಂದು ಮಠವನ್ನು ಮುನ್ನೆಡೆಸುತ್ತಿರುವ ಶ್ರೀಸಿದ್ದಲಿಂಗಸ್ವಾಮೀಜಿ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ.ಅವರ ಮನೋಬಲವನ್ನು ಹೆಚ್ಚಿಸುವ ಕೆಲಸವನ್ನು ತುಮಕೂರಿನ ಸದ್ಬಕ್ತರು ಮಾಡಬೇಕಿದೆ ಎಂದರು.

      ಕಾರ್ಯಕ್ರಮದಲ್ಲಿ 26ನೇ ವಾರ್ಡಿನ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್, 15ನೇ ವಾರ್ಡಿನ ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್,ಪ್ರೊ.ಡಿ.ಚಂದ್ರಪ್ಪ, ಕೊಪ್ಪಲ್ ನಾಗರಾಜು,ಸುಜಾತ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 26ನೇ ವಾರ್ಡಿನ ಮಹಿಳಾ ಭಕ್ತರಿಂದ ವಚನ ಗಾಯನ ನಡೆಯಿತು.

(Visited 15 times, 1 visits today)

Related posts

Leave a Comment