ತುಮಕೂರು


ಜಿಲ್ಲೆಯ ಶಿರಾ ನಗರದಲ್ಲಿ ಸೆಪ್ಟಂಬರ್ 6 ಮತ್ತು 7 ರಂದು ನಡೆದ ಸಿಪಿಐ 13ನೇ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ವಿವಿಧ ಸಮಸ್ಯೆಗಳ ಪರಿಹಾರ ಕುರಿತಂತೆ 22 ನಿರ್ಣಯಗಳನ್ನು ಕೈಗೊಂಡಿದ್ದು, ಮುಂದಿನ ಮೂರು ವರ್ಷಗಳ ಕಾಲ ಇವುಗಳ ಜಾರಿಗಾಗಿ ವಿವಿಧ ರೀತಿಯ ಹೋರಾಟ ಹಮ್ಮಿಕೊಳ್ಳುವುದಾಗಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಬೆಳೆಹಾನಿ ವೈಜ್ಞಾನಿಕ ಪರಿಹಾರ, ಜಾನುವಾರುಗಳ ಅಕಾಲಿಕ ಮರಣಕ್ಕೆ ಪರಿಹಾರ, 12 ಗಂಟೆಗಳ ಕಾರ್ಮಿಕರ ದುಡಿಮೆ ರದ್ದು, ಮುರುಘಾ ಶರಣರ ವಿರುದ್ದ ಸೂಕ್ತ ತನಿಖೆಗೆ ಒತ್ತಾಯ ಸೇರಿದಂತೆ ಹಲವು ಸ್ಥಳೀಯ ಸಮಸ್ಯೆಗಳ ಪರಿಹಾರದ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಇದೇ ತಿಂಗಳ 24-27ರವರೆಗೆ ಹಾಸನದಲ್ಲಿ ನಡೆಯುವ ರಾಜ್ಯಮಟ್ಟದ 24ನೇ ಸಮ್ಮೇಳನದಲ್ಲಿ ಈ ವಿಚಾರಗಳನ್ನು ಮಂಡಿಸಲಾಗುವುದು ಎಂದರು.
ಕೇಂದ್ರ ಸರಕಾರದ ಇತ್ತೀಚಿನ ಬಹುತೇಕ ಕಾಯ್ದೆಗಳು ಕಾರ್ಮಿಕರಿಗೆ ಮಾರಕ, ಉದ್ದಿಮೆದಾರರಿಗೆ ಪೂರಕ ಎಂಬಂತಾಗಿವೆ. ಹಾಗಾಗಿ ಸರಕಾರಗಳು ಕಾರ್ಮಿಕರ ಪರವಾದ ಕಾಯ್ದೆಗಳನ್ನು ಜಾರಿಗೆ ತರಬೇಕು, ದುಡಿಮೆಯ ಅವಧಿಯನ್ನು ಈ ಹಿಂದಿನಂತೆ 8 ಗಂಟೆಗಳಿಗೆ ಸಿಮೀತಗೊಳಿಸಬೇಕು. ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿಪಡಿಸಬೇಕೆಂಬುದು ಸಿಪಿಐನ ಒತ್ತಾಯವಾಗಿದೆ ಎಂದು ಗಿರೀಶ್ ತಿಳಿಸಿದರು.
ತುಮಕೂರು ಜಿಲ್ಲೆ ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿದ್ದರೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡಿ, ಉದ್ಯೋಗ ದೊರೆಯುವಂತೆ ಸರಕಾರಗಳು ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ, ದುಬಾರಿಯಾಗುತ್ತಿರುವ ಹೈನುಗಾರಿಕೆಯಿಂದ ಬಡವರು ಪಶುಸಂಗೋಪನೆ ಮಾಡುವುದು ಕಷ್ಟಕರವಾಗುತ್ತಿದೆ ಎಂದರು.
ತುಮಕೂರು ಜಿಲ್ಲಾ ಸಿಪಿಐ ಘಟಕವನ್ನು ಪುನರಚಿಸಿದ್ದು, ಜಿಲ್ಲಾ ಕಾರ್ಯದರ್ಶಿಯಾಗಿ ಗಿರೀಶ್, ಸಹಕಾರ್ಯದರ್ಶಿಗಳಾಗಿ ಗೋವಿಂದರಾಜು,ಆರ್,ಚಂದ್ರಶೇಖರ್ ಜಿ., ಖಜಾಂಚಿಯಾಗಿ ಆಶ್ವಥನಾರಾಯಣ, ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಜಯಲಕ್ಷ್ಮಮ್ಮ,ಶಶಿಕಾಂತ್, ರುದ್ರಪ್ಪ, ಚಂದ್ರಶೇಖರ್ ಡಿ.ಎಲ್.ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

(Visited 3 times, 1 visits today)