ತುಮಕೂರು


ಕನ್ನಡ ಸಮ್ಮೇಳನಗಳು ಕೇವಲ ಮೆರವಣಿಗೆ, ಉತ್ಸವಗಳಿಗೆ ಸಿಮೀತವಾದರೆ ಸಾಲದು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನ್ನಡವನ್ನು ಅನ್ನದ ಭಾಷೆಯಾಗಿ ರೂಪಿಸುವ ನಿಟ್ಟಿನಲ್ಲಿ ಕನ್ನಡಿಗರ ಮುಂದಿರುವ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಮಠದ ಶ್ರೀಚನ್ನಬಸವೇಶ್ವರ್ ವಸ್ತು ಪ್ರದರ್ಶನದ ಆವರಣದಲ್ಲಿ ಹಮ್ಮಿಕೊಂಡಿದ್ದ ತುಮಕೂರು ತಾಲೂಕು ಕಸಾಪ 6ನೇ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಗಡಿನಾಡು ಸೇರಿದಂತೆ ರಾಜ್ಯದ ಹಲವು ಕಡೆ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಬೆಳಗಾವಿ,ಕಾಸರಗೋಡಿನ ವಿಚಾರವಾಗಿ ರಾಜ್ಯಗಳ ನಡುವೆ ತಿಕ್ಕಾಟವಿದೆ.ಕನ್ನಡ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಹಾಗೂ ಕಾಸರಗೋಡು ಮತ್ತು ಬೆಳಗಾವಿಯ ಆಸ್ಮಿತೆಯ ಕುರಿಂತಂತೆಯೂ ನಾವೆಲ್ಲರೂ ದ್ವನಿ ಎತ್ತಬೇಕಾಗಿದೆ ಎಂದರು.
ಕರ್ನಾಟಕ ಸರಕಾರ ಕಾಸರಗೋಡು ಭಾಗದಲ್ಲಿ ಕನ್ನಡವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಯಾರ ಕೀಯಣ್ಣರೈ,ತಾಯಿ ಜಯದೇವಿ ಲಿಂಗಾಡೆ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ನೀಡುತ್ತಾ ಬಂದಿದೆ.ರಾಜ್ಯದ 19 ಜಿಲ್ಲೆಗಳ, 63 ತಾಲೂಕುಗಳ 988 ಹಳ್ಳಿಗಳು ಗಡಿ ಪ್ರದೇಶದಲ್ಲಿ ಭಾಷಾ ವಿಚಾರವಾಗಿ ಸಾಕಷ್ಟು ಸಂಕಷ್ಟ ಎದುರಿಸುತ್ತಿವೆ. ಇವುಗಳ ಪರಿಹಾರಕ್ಕೆ ಹಲವಾರು ಪ್ರಯೋಗಗಳನ್ನು ಈಗಾಗಲೇ ಮಾಡಲಾಗಿದೆ.ಸಮಾಜದ ದ್ವನಿಗಳಾಗಿರುವ ಸಾಹಿತಿಗಳು ಸಮಾಜದ ಕಲ್ಯಾಣದ ಕಡೆಗೆ ತಮ್ಮ ಲೇಖನಿಯನ್ನು ಹರಿಸಬೇಕಾಗಿದೆ.ಜನರ ಜಲ್ವಂತ ಸಮಸ್ಯೆಗಳನ್ನು ಬಿಂಬಿಸುವ ಸಾಹಿತ್ಯ ಸದಾ ಕಾಲ ಜನಮಾನಸದಲ್ಲಿ ಉಳಿಯಲಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಗಮಹರಿಸುವಂತೆ ಡಾ.ಸಿ.ಸೋಮಶೇಖರ್ ತಿಳಿಸಿದರು.
ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಕನ್ನಡ ಪಂಡಿತರಾದ ಕೋ.ರಂ.ಬಸವರಾಜು, ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ.ಮಾಧ್ಯಮಗಳು ಸುದ್ದಿಪ್ರಸಾರಕ್ಕೆ ಸಿಮೀತಗೊಳ್ಳದೆ,ಸಾಹಿತ್ಯ ಪ್ರಸಾರದಲ್ಲಿಯೂ ತಮ್ಮನ್ನು ತಾವು ತೊಡಗಿಸಿ ಕೊಂಡಿವೆ.ಈ ಹಿಂದೆ ಕನ್ನಡ ಪಂಡಿತರಿಗೆ ಹೆಚ್ಚು ಗೌರವಿತ್ತು.ಆದರೆ ಇಂದು ಹಳೆಗನ್ನಡ ಸೇರಿದಂತೆ ಕನ್ನಡದ ಮಹಾನ್ ಗ್ರಂಥಗಳನ್ನು ಓದಿ,ಅರ್ಥೈಸಬಲ್ಲವರ ಸಂಖ್ಯೆ ಕಡಿಮೆಯಾಗಿದೆಕನ್ನಡವನ್ನೇ ಬೋಧಿಸುವ,ಕನ್ನಡದಿಂದಲೇ ಜೀವಿಸುವ ಭೋದಕರ ನಿರಾಶಕ್ತಿಯೂ ಇದಕ್ಕೆ ಕಾರಣವಾಗಿದೆ.ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ .ಸಿದ್ದಗಂಗಾ ಮಠದಲ್ಲಿರುವ ದೇಶದ ಏಕೈಕ ಕನ್ನಡ ಪಂಡಿತ ಕಾಲೇಜು ಈ ಕೆಲಸವನ್ನು ಮಾಡುತ್ತಿದೆ ಎಂದರು.
ಸಮ್ಮೇಳನದ ದಿವ್ಯಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಮಹಾಸ್ವಾಮೀಜಿ ಆಶೀರ್ವಚನ ನೀಡಿ,ಕನ್ನಡಿಗರಲ್ಲಿ ಇಂದು ಕನ್ನಡ ಉಳಿಸಿ, ಬೆಳೆಸುವ ಮನೋಧರ್ಮ ಕಡಿಮೆಯಾಗಿದೆ.ಕನ್ನಡ ಉಳಿಸುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮಗಳಲ್ಲಿ ಓದಿದವರಿಗೆ ಉದ್ಯೋಗ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಕೆಲಸವನ್ನು ಸರಕಾರಗಳು ಮಾಡಬೇಕಿದೆ.ಕನ್ನಡ ತನ, ಮನ ಹಾಗು ಅಭಿಮಾನ ಮೂಡುವಂತೆ ಮಕ್ಕಳನ್ನು ಓದಿನ ಕಡೆಗೆ ಪ್ರೇರೆಪಿಸಬೇಕಿದೆ.ವಿದೇಶಗಳಲ್ಲಿರುವ ಭಾರತೀಯರು ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಪ್ರಯತ್ನಿಸುತ್ತಿರುವಾಗ,ಕರ್ನಾಟಕದಲ್ಲಿಯೇ ಇರುವ ನಮ್ಮಗಳ ಈ ನಿರ್ಲಕ್ಷ ಸಲ್ಲದು ಎಂದರು.
ತಾಲೂಕು 5ನೇ ಕಸಾಪ ಸಮ್ಮೇಳನದ ಅಧ್ಯಕ್ಷ ಜಯದೇವಯ್ಯ(ಬಾಪುಜ) 6ನೇ ಸಮ್ಮೇಳನದ ಅಧ್ಯಕ್ಷ ಕೋ.ರಂ.ಬಸವರಾಜು ಅವರಿಗೆ ಕನ್ನಡದ ದ್ವಜ ಹಸ್ತಾಂತರಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ತಾಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಡಾ.ಸೌಮ್ಯ, ಡಾ.ಡಿ.ಎನ್.ಯೋಗೀಶ್ವರಪ್ಪ, ಜಿ.ಹೆಚ್.ಮಹದೇವಪ್ಪ, ಡಾ.ಸಣ್ಣಹೊನ್ನಯ್ಯ ಕಂಟಲಗೆರೆ, ಎಸ್.ಯೋಗಾನಂದ್, ಕೆಂ.ಬ.ರೇಣುಕಯ್ಯ, ಶ್ರೀಮತಿಮಾಲಾ ಮಂಜುನಾಥ್, ಮರಿಬಸಪ್ಪ,ಕೆ.ಎಸ್.ಉಮಾಮಹೇಶ್, ಕೆ.ಎಸ್.ಉಮಾ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)